More

    ಕೃಷ್ಣಾ ನದಿ ದಡದಲ್ಲಿ ಹೆಚ್ಚಿದ ಭೂಮಿ ಕೊರೆತ

    ಕೊಕಟನೂರ: ಅಥಣಿ ತಾಲೂಕಿನಲ್ಲಿ ಕೃಷ್ಣಾ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಹಿಪ್ಪರಗಿ ಅಣೆಕಟ್ಟೆಯಿಂದ ಹೊರಬಿಡುವ ನೀರಿನ ರಭಸಕ್ಕೆ ತಾಲೂಕಿನ ಸವದಿ ದರ್ಗಾ ಗ್ರಾಮದ ನದಿ ದಡದ ಭೂಮಿ ಕೊರೆತ ಉಂಟಾಗುತ್ತಿದ್ದು, ನದಿಪಕ್ಕದ ರೈತರಿಗೆ ಸದ್ಯ ಆತಂಕ ಎದುರಾಗಿದೆ.

    ಅಪಾರ ಹಾನಿಯ ಆತಂಕ: ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಹೆಚ್ಚಿನ ಮಳೆ ಸುರಿಯುತ್ತಿರುವುದರಿಂದ ತಾಲೂಕಿನ ಕೃಷ್ಣಾ ನದಿ ತುಂಬಿ ಹರಿಯುತ್ತಿದೆ. ಇತ್ತೀಚಿನ ವರದಿ ಪ್ರಕಾರ 11 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಹಿಪ್ಪರಗಿ ಅಣೆಕಟ್ಟೆಯಲ್ಲಿ 2.84 ಟಿಎಂಸಿ ನೀರು ಸಂಗ್ರಹವಿದೆ. ಅಣೆಕಟ್ಟೆಯಿಂದ 8 ಸಾವಿರ ಕ್ಯೂಸೆಕ್ ಹೊರಬಿಡಲಾಗುತ್ತಿದೆ. ಇದರಿಂದ ಸವದಿ ದರ್ಗಾ ಗ್ರಾಮದ ಕೃಷ್ಣಾ ನದಿ ದಡದಲ್ಲಿರುವ ಭೂಮಿ ಕೊರತೆಯಾಗಿ ಜಮೀನಿನಲ್ಲಿರುವ ಬೆಳೆಗಳು ಹಾಳಾಗಿ ಅಪಾರ ಪ್ರಮಾಣದ ನಷ್ಟ ಉಂಟಾಗುತ್ತಿದೆ.

    ಮನವಿಗೆ ಸಿಗದ ಸ್ಪಂದನೆ: ನದಿ ದಡದಲ್ಲಿ ತಡೆಗೋಡೆ ನಿರ್ಮಿಸಬೇಕೆಂದು ಅನೇಕ ವರ್ಷಗಳಿಂದ ಹತ್ತಾರು ಬಾರಿ ಎಲ್ಲ ಸರ್ಕಾರಗಳ ಶಾಸಕ, ಸಚಿವರಿಗೆ ಮನವಿ ಸಲ್ಲಿಸದರೂ ಪ್ರಯೋಜನವಾಗಿಲ್ಲ. ಕಳೆದ ವರ್ಷ ಜನಜೀವನ ಅಸ್ತವ್ಯಸ್ತಗೊಳಿಸಿದ್ದ ಮಹಾ ಮಳೆ ಈ ವರ್ಷವೂ ಸುರಿದರೆ ಇಲ್ಲಿಯ ರೈತರಿಗಷ್ಟೇ ಅಲ್ಲದೇ ನದಿ ದಡದ ಅಥಣಿ ತಾಲೂಕಿನ 21 ಗ್ರಾಮಗಳ ಜನರಿಗೆ ತೀವ್ರ ತೊಂದರೆಯಾಗುವುದರಲ್ಲಿ ಸಂಶಯವಿಲ್ಲ.

    ಶಾಶ್ವತ ಪುನರ್ವಸತಿಗೆ ಆಗ್ರಹ: ಕಳೆದ ಭಾರಿ ನೆರೆ ಸಂತ್ರಸ್ತರಿಗೆ ಘೋಷಿಸಿದ್ದ ಪರಿಹಾರ ಇನ್ನೂ ಅನೇಕ ಅರ್ಹರಿಗೆ ತಲುಪಿಲ್ಲ. ಅನೇಕ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆಗಳು ಇನ್ನೂ ದುರಸ್ತಿಯಾಗಿಲ್ಲ. ಶಾಶ್ವತ ಪುನರ್ವಸತಿ ಕಲ್ಪಿಸಲು ಸರ್ಕಾರಕ್ಕೆ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ನದಿ ದಡದ ಗ್ರಾಮಗಳ ಬವಣೆ ನೀಗಿಸಬೇಕು. ಹಿಪ್ಪರಗಿ ಅಣೆಕಟ್ಟೆಯ ಹೊರ ಹರಿವಿನ ನೀರಿನಿಂದ ಸವದಿ ದರ್ಗಾ ಗ್ರಾಮದ ನದಿ ದಡದ ರೈತರ ಭೂ ಕೊರತೆವಾಗದಂತೆ ತಡೆಗೋಡೆ ನಿರ್ಮಿಸಬೇಕು ಎಂದು ಜನರ ಆಗ್ರಹವಾಗಿದೆ.

    ತಡೆಗೋಡೆ ನಿರ್ಮಾಣಕ್ಕೆ ಸರ್ಕಾರದಿಂದ ಅನುಮತಿ ದೊರೆತಿದೆ. ಆದರೆ, ಕರೊನಾ ಹಾವಳಿಯಿಂದ ತಡವಾಗಿದೆ. ಸರ್ಕಾರದ ಅನುದಾನ ಬಂದ ತಕ್ಷಣ ಆದಷ್ಟು ಬೇಗ ಕಾಮಗಾರಿ ಪ್ರಾರಂಭಿಸಿ ತಡೆಗೋಡೆ ನಿರ್ಮಿಸಲಾಗುವುದು.
    | ಕೆ.ಕೆ.ಜಾಲಿಬೇರಿ ಎಇಇ,ಎಚ್‌ಬಿಸಿ ಅಥಣಿ

    | ಮೋಹನ ಪಾಟಣಕರ ಕೊಕಟನೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts