More

    ಸವಲತ್ತು ಪಡೆದು ಜೀವನ ಮಟ್ಟ ಸುಧಾರಿಸಿಕೊಳ್ಳಿ

    ಕೆ.ಆರ್.ನಗರ: ಪೌರಕಾರ್ಮಿಕರಿಗಾಗಿ ಸರ್ಕಾರ ಹಲವಾರು ಸವಲತ್ತು ಮತ್ತು ಯೋಜನೆಗಳನ್ನು ನೀಡುತ್ತಿದೆ. ಇದನ್ನು ಬಳಸಿಕೊಂಡು ತಮ್ಮ ಜೀವನ ಮಟ್ಟ ಸುಧಾರಿಸಿಕೊಳ್ಳಬೇಕು ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

    ಪಟ್ಟಣದ ಪಿಎಲ್‌ಡಿ ಬ್ಯಾಂಕ್ ರೈತ ಸಮುದಾಯ ಭವನದಲ್ಲಿ ಪುರಸಭೆ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಪೌರಕಾರ್ಮಿಕ ದಿನಾಚರಣೆ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ಕಾರ ಈಗಾಗಲೇ ಪ್ರತಿವರ್ಷ ಪೌರಕಾರ್ಮಿಕರಿಗೆ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಿದೆ. ಇದರ ಜತೆಗೆ ನಾನು ಕೂಡ ಮೂರು ತಿಂಗಳಿಗೊಮ್ಮೆ ಪೌರಕಾರ್ಮಿಕರಿಗಾಗಿ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸುತ್ತೇನೆ. ಎಲ್ಲರೂ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು. ತಮ್ಮ ಆರೋಗ್ಯದ ಕಡೆಗೂ ಹೆಚ್ಚು ಗಮನಹರಿಸಬೇಕು ಎಂದು ಕಿವಿಮಾತು ಹೇಳಿದರು.

    ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ಪೌರಕಾರ್ಮಿಕರನ್ನು ಕಾಯಂ ಮಾಡಲಾಗಿದ್ದು, ಗುತ್ತಿಗೆ ನೌಕರರನ್ನು ನೇರ ಪಾವತಿ ವ್ಯವಸ್ಥೆಗೆ ತಂದು ವೇತನ ಹೆಚ್ಚಳ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಬಾಕಿ ಉಳಿದಿರುವ ಪೌರಕಾರ್ಮಿಕರು, ನೀರುಗಂಟಿಗಳು ಮತ್ತು ವಾಹನ ಚಾಲಕರನ್ನು ಕಾಯಂಗೊಳ್ಳಿಸಬೇಕೆಂದು ಪುರಸಭೆ ಆಡಳಿತ ಮಂಡಳಿ ನನಗೆ ಮನವಿ ಸಲ್ಲಿಸಿದೆ. ಈ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ನೌಕರರಿಗೆ ಅನುಕೂಲ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.

    ಪೌರಕಾರ್ಮಿಕರು ತಮ್ಮ ಮಕ್ಕಳನ್ನು ಇದೇ ವೃತ್ತಿಗೆ ದೂಡುವ ಬದಲು ಉತ್ತಮ ಶಿಕ್ಷಣ ಕೊಡಿಸಿ ಉನ್ನತ ಮಟ್ಟದ ಅಧಿಕಾರಿಗಳನ್ನಾಗಿ ಮಾಡಲು ಪ್ರಯತ್ನಿಸಬೇಕು. ಇದಕ್ಕೆ ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.

    ಪಟ್ಟಣ ವಿಶಾಲವಾಗಿ ಬೆಳೆಯುತ್ತಿದ್ದು, ಪುರಸಭೆಯನ್ನು ನಗರಸಭೆಯನ್ನಾಗಿ ಮಾಡಲು ಅಧಿಕಾರಿಗಳು, ಜನಪ್ರತಿನಿಧಿಗಳ ಸಲಹೆ ಪಡೆದು ಸಂಬಂಧಟಪಟ್ಟ ಇಲಾಖೆ ಸಚಿವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ಪುರಸಭೆ ಮುಖ್ಯಾಧಿಕಾರಿ ಡಾ.ಜಯಣ್ಣ ಮಾತನಾಡಿ, ಪೌರಕಾರ್ಮಿಕರ ಹಿತ ಕಾಯಬೇಕಾದದ್ದು ಸ್ಥಳೀಯ ಆಡಳಿತದ ಕರ್ತವ್ಯ. ಪುರಸಭೆ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಎಲ್ಲ ಕಾರ್ಮಿಕರಿಗೂ ಸರ್ಕಾರದ ಸವಲತ್ತುಗಳನ್ನು ತಲುಪಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇವೆ. ಪೌರಕಾರ್ಮಿಕರ ಸಹಕಾರದಿಂದ ನಮ್ಮ ಪುರಸಭೆಗೆ 3 ಬಾರಿ ಸ್ವಚ್ಛ ನಗರಿ ಪ್ರಶಸ್ತಿ ಬಂದಿದೆ. ಈ ಬಾರಿಯೂ ಪ್ರಶಸ್ತಿ ಪಡೆಯುವ ವಿಶ್ವಾಸ ಇದೆ ಎಂದು ಹೇಳಿದರು.

    ನಿಷ್ಠೆಯಿಂದ ಕೆಲಸ ನಿರ್ವಹಿಸಿದ ಪೌರಕಾರ್ಮಿಕರು ಹಾಗೂ ದಿನಾಚರಣೆ ಅಂಗವಾಗಿ ನಡೆದ ಆಟೋಟ ಸ್ಪರ್ದೆಯಲ್ಲಿ ವಿಜೇತರಾದವರನ್ನು ಸನ್ಮಾನಿಸಿ, ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮಕ್ಕೂ ಮೊದಲು ಪೌರಕಾರ್ಮಿಕರು, ಸಿಬ್ಬಂದಿ ಹಾಗೂ ಜನಪ್ರತಿನಿಧಿಗಳು ಮುಖ್ಯಾಧಿಕಾರಿ ಡಾ.ಜಯಣ್ಣ ನೇತೃತ್ವದಲ್ಲಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಬಳಿಕ ಗರುಡಗಂಭದ ವೃತ್ತದಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ, ಪುರಸಭಾ ವೃತ್ತದಲ್ಲಿರುವ ಡಾ.ಬಾಬು ಜಗಜೀವನ ರಾಮ್ ಪ್ರತಿಮೆ ಹಾಗೂ ತಾಲೂಕು ಕಚೇರಿ ಆವರಣದಲ್ಲಿರುವ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.

    ಸ್ಥಾಯಿ ಸಮಿತಿ ಅಧ್ಯಕ್ಷ ಮಿಕ್ಸರ್ ಶಂಕರ್, ಸದಸ್ಯರಾದ ಉಮೇಶ್, ಕೋಳಿಪ್ರಕಾಶ್, ಶಿವುನಾಯಕ್, ಸೌಮ್ಯಾ ಲೋಕೇಶ್, ನಟರಾಜು, ಶಂಕರ್ ಸ್ವಾಮಿ, ವಸಂತಮ್ಮ, ಮಂಜುಳಾ ಚಿಕ್ಕವೀರು, ಮಾಜಿ ಸದಸ್ಯ ವಿನಯ್, ಇಂಜಿನಿಯರ್‌ಗಳಾದ ಚಂದ್ರಶೇಖರ್, ರೀತುಸಿಂಗ್, ಸೌಮ್ಯಾ, ಆರೋಗ್ಯ ನಿರೀಕ್ಷಕರಾದ ರಾಜೇಂದ್ರ, ಎಚ್.ಎಸ್.ಲೋಕೇಶ್, ಕಂದಾಯಾಧಿಕಾರಿ ರಮೇಶ್ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts