More

    ಮನೆ ಖಾಲಿ ಮಾಡಲು ಕೆಪಿಸಿ ನೋಟಿಸ್

    ಸುಭಾಸ ಧೂಪದಹೊಂಡ ಕಾರವಾರ

    ಕದ್ರಾ ಕೆಪಿಸಿ ವಸತಿನಿಲಯಗಳಲ್ಲಿ ವಾಸವಿದ್ದ ನೆರೆ ನಿರಾಶ್ರಿತರಿಗೆ ಮನೆಗಳನ್ನು ಖಾಲಿ ಮಾಡಲು ಕರ್ನಾಟಕ ವಿದ್ಯುತ್ ನಿಗಮವು ನೋಟಿಸ್ ನೀಡಿದೆ. ಇದರಿಂದ ನಿರಾಶ್ರಿತರು ದಿಕ್ಕು ತೋಚದಂತಾಗಿದ್ದಾರೆ.

    2019ರಲ್ಲಿ ಬಂದ ಮಹಾ ಪ್ರವಾಹದಿಂದ ಕದ್ರಾದ ಹಲವು ಮನೆಗಳು ಕೊಚ್ಚಿ ಹೋಗಿದ್ದವು. ನೂರಾರು ಕುಟುಂಬಗಳು ನಿರಾಶ್ರಿತವಾಗಿದ್ದವು. ಮನೆ ಇಲ್ಲದ ಕುಟುಂಬಗಳಿಗೆ ತಾತ್ಕಾಲಿಕ ವಾಸ್ತವ್ಯಕ್ಕೆ ಕೆಪಿಸಿ ಮಾನವೀಯತೆ ನೆಲೆಯಲ್ಲಿ ತನ್ನ ಖಾಲಿ ಕ್ವಾರ್ಟರ್ಸ್​ಗಳನ್ನು ಉಚಿತವಾಗಿ ನೀಡಿತ್ತು. ಆದರೆ, ಮೂರು ವರ್ಷ ಕಳೆದರೂ ಕ್ವಾರ್ಟರ್ಸ್​ಗಳನ್ನು ಖಾಲಿ ಮಾಡಿಲ್ಲ ಎಂಬ ಭಾವನೆಯಲ್ಲಿರುವ ಕೆಪಿಸಿ ಅಧಿಕಾರಿಗಳು 14 ಕುಟುಂಬಗಳಿಗೆ ತಕ್ಷಣ ಮನೆ ಖಾಲಿ ಮಾಡುವಂತೆ ನೋಟಿಸ್ ನೀಡಿದ್ದಾರೆ.

    ಸಿಗದ ಪರಿಹಾರ: ನೆರೆಯಿಂದ ಮನೆ ಕಳೆದುಕೊಂಡ ಕಾಯಂ ಜಾಗ ಇದ್ದವರಿಗೆ ಹೊಸ ಮನೆ ಕಟ್ಟಿಕೊಳ್ಳಲು ಸರ್ಕಾರ 5 ಲಕ್ಷ ರೂ. ರಾಜೀವ ಗಾಂಧಿ ವಸತಿ ನಿಗಮದಡಿ ಸಹಾಯಧನ ನೀಡಿದೆ. ಆದರೆ, ಕದ್ರಾದಲ್ಲಿ ಹೆಚ್ಚಿನ ಜನ ಅತಿಕ್ರಮಣ ಜಾಗದಲ್ಲಿದ್ದವರು ಮನೆ ಕಳೆದುಕೊಂಡಿದ್ದು, ಅವರಿಗೆ ಮನೆಯ ಸಾಮಗ್ರಿ ಕಳೆದುಕೊಂಡಿದ್ದಕ್ಕಾಗಿ ಸರ್ಕಾರ ಕೊಟ್ಟ 10 ಸಾವಿರ ರೂ. ಬಿಟ್ಟರೆ ಬೇರೆ ಪರಿಹಾರ ದೊರಕಿಲ್ಲ. ಕದ್ರಾದಲ್ಲಿ ನೆರೆಯಿಂದ ಮನೆ ಕಳೆದುಕೊಂಡವರಿಗೆ ಶಾಶ್ವತ ವಸತಿ ವ್ಯವಸ್ಥೆ ಮಾಡುವುದಾಗಿ ಆಗ ಆಗಮಿಸಿದ್ದ ಜನಪ್ರತಿನಿಧಿಗಳು, ಭರವಸೆ ನೀಡಿದ್ದರು. ಜಿಲ್ಲಾಡಳಿತವೂ ಆಗಾಗ ಭರವಸೆ ನೀಡುತ್ತಲೇ ಬಂದಿದೆ. ಆದರೆ, ಇದುವರೆಗೂ ಪರ್ಯಾಯ ಪುನರ್ವಸತಿ ವ್ಯವಸ್ಥೆಯಾಗಿಲ್ಲ. ಇದರಿಂದ ನಾವು ಕೆಪಿಸಿ ಮನೆಯಲ್ಲಿಯೇ ಉಳಿಯುವುದು ಅನಿವಾರ್ಯವಾಗಿದೆ ಎಂಬುದು ಕದ್ರಾ ನೆರೆ ನಿರಾಶ್ರಿತರ ಗೋಳು.

    ನಿರಂತರ ನೆರೆ: 2019ರ ಆಗಸ್ಟ್​ನಲ್ಲಿ ನೆರೆ ಬಂದಿತ್ತು. ಅದರ ನಂತರ ಪ್ರತಿ ವರ್ಷ ಮಳೆಗಾದಲ್ಲಿ ಕದ್ರಾ ಭಾಗದಲ್ಲಿ ನೆರೆ ಆವರಿಸುತ್ತಲೇ ಇದೆ. ಕದ್ರಾ ಲೇಬರ್ ಕಾಲನಿ, ಮಲ್ಲಾಪುರ ಗ್ರಾಪಂ ವ್ಯಾಪ್ತಿಯ ಕೆಲ ಕಾಲನಿಗಳ ಹಲವು ಅತಿಕ್ರಮಣ ಕುಟುಂಬಗಳು ನಿರಾಶ್ರಿತವಾಗಿವೆ. ಕೆಪಿಸಿ ಒಟ್ಟು 90ಕ್ಕೂ ಅಧಿಕ ಮನೆಗಳನ್ನು ನೆರೆ ನಿರಾಶ್ರಿತರಿಗೆ ತಾತ್ಕಾಲಿಕವಾಗಿ ಉಳಿದುಕೊಳ್ಳಲು ನೀಡಿದೆ. ಮುಂದಿನ ದಿನದಲ್ಲಿ ಉಳಿದವರ ಮನೆಗಳನ್ನೂ ಖಾಲಿ ಮಾಡಿಸಲು ಮುಂದಾಗುವ ಆತಂಕ ನಿರಾಶ್ರಿತರಲ್ಲಿದೆ. ಸಮೀಪದಲ್ಲೇ ಸುಮಾರು ಮೂರು ಎಕರೆ ಸರ್ಕಾರಿ ಜಾಗವಿದ್ದು, ತಮಗೆ ಅಲ್ಲಿಯೇ ಮನೆ ಕಟ್ಟಿಕೊಳ್ಳಲು ಅವಕಾಶ ನೀಡಿ ಎಂಬುದು ನೆರೆ ನಿರಾಶ್ರಿತರ ಒತ್ತಾಯವಾಗಿದೆ.

    ಕದ್ರಾ, ಮಲ್ಲಾಪುರ ಭಾಗದ ನೆರೆ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವ ಸಲುವಾಗಿ ಉಳಗಾದಲ್ಲಿ ರೆವೆನ್ಯು ಇಲಾಖೆ ಜಾಗ ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರದ ಹಂತದಲ್ಲಿ ನಿರ್ಣಯವಾದರೆ ನಾವು ಮುಂದಿನ ಕ್ರಮ ವಹಿಸಬಹುದಾಗಿದೆ.

    | ನಿಶ್ಚಲ ನರೋನಾ

    ತಹಸೀಲ್ದಾರ್ ಕಾರವಾರ

    ಪೂರ್ವ ಸೂಚನೆ ಇಲ್ಲದೇ ಇದ್ದಕ್ಕಿದ್ದಂತೆ ಹೆಚ್ಚು ನೀರು ಬಿಟ್ಟಿದ್ದರಿಂದಲೇ ನಮ್ಮ ಮನೆಗಳಿಗೆ ನೀರು ನುಗ್ಗಿ ಅವು ಕೊಚ್ಚಿ ಹೋದವು. ನಮಗೆ ಇದುವರೆಗೂ ಮನೆ ನಿರ್ವಣಕ್ಕೆ ಸರ್ಕಾರದಿಂದ ಪರಿಹಾರ ಸಿಕ್ಕಿಲ್ಲ. ನಮ್ಮನ್ನು ನಿರಾಶ್ರಿತರನ್ನಾಗಿ ಮಾಡಿದ ಕೆಪಿಸಿ ಕೂಡ ಕನಿಕರ ಇಲ್ಲದೇ ಮನೆ ಖಾಲಿ ಮಾಡುವಂತೆ ನೋಟಿಸ್ ನೀಡಿದೆ. ನಾವು ಎಲ್ಲಿ ಹೋಗುವುದು ಎಂದು ತಿಳಿಯದಾಗಿದ್ದೇವೆ.

    | ಯಲ್ಲವ್ವ

    ನೆರೆ ನಿರಾಶ್ರಿತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts