More

    ಸಾಲದ ಸುಳಿಯಲ್ಲಿ ಕರ್ನಾಟಕ ವಿದ್ಯುತ್ ನಿಗಮ; ಸರ್ಕಾರದ ಬಾಕಿ 21 ಸಾವಿರ ಕೋಟಿ, ಗೃಹಜ್ಯೋತಿಗೆ 2152 ಕೋಟಿ ರೂ ಬಿಡುಗಡೆ

    ಶಿವಾನಂದ ತಗಡೂರು, ಬೆಂಗಳೂರು:
    ನಾಡಿಗೆ ವಿದ್ಯುತ್ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಕರ್ನಾಟಕ ವಿದ್ಯುತ್ ನಿಗಮ(ಕೆಪಿಸಿ) ನಷ್ಠದಲ್ಲಿ ಮುಳುಗಿ, ತೀವ್ರ ಸಂಕಷ್ಟದಲ್ಲಿ ಸಿಲುಕಿದೆ.
    ಎಲ್ಲಾ ವಿದ್ಯುತ್ ಸರಬರಾಜು ಕಂಪನಿ(ಎಸ್ಕಾಂ)ಗಳಿಂದ ಕೆಪಿಸಿಗೆ ಬರಬೇಕಾಗಿರುವ ಬಾಕಿ ಬರೋಬ್ಬರಿಗೆ 21 ಸಾವಿರ ಕೋಟಿ ರೂಗೆ ಏರಿಕೆ ಆಗಿದೆ. ಕೆಪಿಸಿ ಬ್ಯಾಂಕ್‌ಗಳಲ್ಲಿ ಮಾಡಿದ ಸಾಲದ ಬಡ್ಡಿ ಕಟ್ಟಲು ಪ್ರತಿ ವರ್ಷವೂ ಒದ್ದಾಡುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಸಂಬಳ ಕೊಡಲು ಕಷ್ಟವಾಗುವ ದಿನಗಳು ಬರಲಿವೆ.
    ಕೆಪಿಸಿಯೇ ತನ್ನ ಉತ್ಪಾದನೆಯಲ್ಲಿ ಲಾಭ ಮಾಡಿಕೊಂಡು ಸಾಲ ತೀರಿಸಿಕೊಳ್ಳುವ ಸ್ಥಿತಿಯಲ್ಲೂ ಇಲ್ಲ. ಒಂದೆಡೆ ಸರ್ಕಾರ, ಮತ್ತೊಂದೆಡೆ ವಿದ್ಯುತ್ ಖರೀದಿ ಮಾಡುವ ಎಸ್ಕಾಂಗಳ ನಡುವೆ ಅಡ ಕತ್ತರಿಯಲ್ಲಿ ಸಿಲುಕಿಕೊಂಡಿರುವ ಕೆಪಿಸಿ ನಿತ್ಯ ನರಕ ಸ್ಥಿತಿ ಅನುಭವಿಸುವಂತಾಗಿದೆ.
    ವಿದ್ಯುತ್ ಉತ್ಪಾದಿಸಿ ಸರಬರಾಜು ಮಾಡಿದ ಕೆಪಿಸಿ, ಬಾಕಿ ಬಿಲ್‌ಗಾಗಿ ದಿನ ನಿತ್ಯ ಎಸ್ಕಾಂಗಳ ಕಚೇರಿಯ ಬಾಗಿಲು ಬಡಿಯಬೇಕಾಗಿದೆ. ಇನ್ನೊಂದೆಡೆ ಗ್ರಾಮ ಪಂಚಾಯಿತಿಗಳಿಂದ ಬರಬೇಕಾದ ಬಾಕಿ ಕೊಡಿವಂತೆ ಎಸ್ಕಾಂಗಳು ಸರ್ಕಾರಕ್ಕೆ ಒತ್ತಡ ಹಾಕುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

    ನಷ್ಟದಲ್ಲಿರುವ ಎಸ್ಕಾಂಗಳು
    ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಹೊರತುಪಡಿಸಿದರೆ, ಮಂಗಳೂರು ವಿದ್ಯುತ್ ಸರಬರಾಜು ಕಂಪನಿ(ಮೆಸ್ಕಾಂ), ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ(ಜೆಸ್ಕಾಂ), ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ(ಸೆಸ್ಕ್) ಮತ್ತು ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) ಎಲ್ಲವೂ ನಷ್ಟದಲ್ಲಿವೆ. ಎಸ್ಕಾಂಗಳಿಗೆ ಗ್ರಾಪಂ, ತಾಪಂ, ಜಿಪಂ, ಪುರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಂದಲೇ ಹೆಚ್ಚು ಹಣ ಬರಬೇಕಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಹಲವಾರು ಬಾರಿ ಪ್ರಸ್ತಾವನೆಗಳನ್ನು ಸಲ್ಲಿಸಿ ಗಮನ ಸೆಳೆದರೂ ಅದು ಕಾರ್ಯರೂಪಕ್ಕೆ ಬಂದಿಲ್ಲ.

    ಹಿಂದೆ 3766 ಕೋಟಿ ನೆರವು
    2013-14ರಲ್ಲಿ 12 ಸಾವಿರ ಕೋಟಿ ಇದ್ದ ಬಾಕಿ, ಈಗ 21 ಸಾವಿರ ಕೋಟಿಗೆ ಏರಿಕೆ ಆಗಿದೆ. ಕೆಪಿಸಿ ಸಾಲದ ಹೊರೆ ಹೆಚ್ಚಾಗುತ್ತಿದ್ದು, ಮುಳುಗುವ ಹಂತಕ್ಕೆ ಹೋಗುತ್ತಿದೆ. ನಷ್ಟದಲ್ಲಿದ್ದ ಕೆಪಿಸಿಗೆ 2014ರಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ಡಿ.ಕೆ.ಶಿವಕುಮಾರ್ ಇಂಧನ ಸಚಿವರಾಗಿದ್ದಾಗ ಒಮ್ಮೆ ಮಾತ್ರ ಸರ್ಕಾರ ಕೆಪಿಸಿಗೆ ನೆರವು ನೀಡುವ ಪ್ರಯತ್ನ ಮಾಡಿತ್ತು. ಆಗ ಬಜೆಟ್‌ನಲ್ಲಿ ಕೆಪಿಸಿಗೆ 3,766 ಕೋಟಿ ರೂ ನೆರವು ನೀಡಿದ್ದು ಬಿಟ್ಟರೆ, ನಂತರ ಯಾವ ಸರ್ಕಾರವೂ ಈ ಬಗ್ಗೆ ಪ್ರಯತ್ನ ಮಾಡಲಿಲ್ಲ. ಈಗ ಮತ್ತೆ ಸಿದ್ದರಾಮಯ್ಯ ಈ ಬಗ್ಗೆ ಗಮನ ಹರಿಸುವರೇ? ನೋಡಬೇಕು.

    ಹೆಚ್ಚುತ್ತಿರುವ ಸಾಲದ ಮೇಲಿನ ಬಡ್ಡಿ
    ವಿದ್ಯುತ್ ಉತ್ಪಾದಿಸಿ 6 ದಶಕಗಳಿಂದಲೂ ನಾಡು ಬೆಳಗಿಸುತ್ತಾ ಬಂದಿರುವ ಕರ್ನಾಟಕ ವಿದ್ಯುತ್ ನಿಗಮ ಬ್ಯಾಂಕ್‌ಗಳಲ್ಲಿ ಮಾಡಿರುವ ಸಾಲದ ಮೇಲಿನ ಬಡ್ಡಿ ಮಾತ್ರ ಬೆಳೆಯುತ್ತಲೇ ಇದೆ. ಬಾಂಡ್‌ಗಳ ಮೂಲಕ ಹಣ ಸಂಗ್ರಹಿಸಿ ಸಾಲ ತೀರಿಸಿಕೊಳ್ಳಲು ನಡೆಸಿದ ಪ್ರಯತ್ನಗಳು ಅರ್ಧಕ್ಕೆ ನಿಂತಿವೆ. ಇದೇ ರೀತಿಯಲ್ಲಿ ನಿಗಮ ನಷ್ಟದಲ್ಲಿಯೇ ಮುಂದುವರಿದರೆ ಮುಂದೆ ಖಾಸಗೀಕರಣ ಮಾಡುವ ಅನಿವಾರ್ಯತೆ ಸರ್ಕಾರಕ್ಕೆ ಬಂದರೂ ಅಚ್ಚರಿಯೇನಿಲ್ಲ.

    ಎಸ್ಕಾಂಗಳ ನಷ್ಟ ಯಾಕೆ?
    ವಿದ್ಯುತ್ ಕಂಪನಿಗಳು (ಎಸ್ಕಾಂ) ನಷ್ಟವಾಗುತ್ತಿರುವುದಕ್ಕೆ ಹತ್ತು ಹಲವು ಕಾರಣಗಳಿವೆ. ಗ್ರಾಪಂ, ತಾಪಂ, ಜಿಪಂನಿಂದ ಹಿಡಿದು ನಗರಸಭೆ, ಮಹಾನಗರ ಪಾಲಿಕೆಗಳ ತನಕ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿವೆ. ಇನ್ನು ಬೀದಿ ದೀಪ ಮತ್ತು ಕುಡಿವ ನೀರು ಯೋಜನೆ ಬಿಲ್ ಸರಿಯಾಗಿ ಕಟ್ಟುವ ವ್ಯವಸ್ಥೆ ಆಗಿಲ್ಲ. ಒಂದೊಂದು ಪಂಚಾಯಿತಿಯಲ್ಲಿ ಒಂದೆರಡು ಲಕ್ಷದಿಂದ ಹತ್ತಿಪ್ಪತ್ತು ಲಕ್ಷ ತನಕವೂ ಬಾಕಿ ಇದೆ. ರೈತರ ಪಂಪ್‌ಸೆಟ್‌ಗಳಿಗೆ ಉಚಿತವಾಗಿ ನೀಡುತ್ತಿರುವ ವಿದ್ಯುತ್ ಯೋಜನೆ ಒಂದೆಡೆಯಾರೆ, ಈಗ 200 ಯುನಿಟ್ ತನಕ ಉಚಿತ ವಿದ್ಯುತ್ ನೀಡಿರುವುದು ಕೂಡ ಕಾರಣ. ಕೆಪಿಸಿಗೆ ಕೊಡಬೇಕಾಗಿರುವ ಬಾಕಿ 21 ಸಾವಿರ ಕೋಟಿ ಹಣವನ್ನು ತುಂಬಿಕೊಡಲು ಸರ್ಕಾರ ಮೊದಲು ಕ್ರಮ ಕೈಗೊಳ್ಳಬೇಕಿದೆ. ರೈತರಿಗೆ ಮತ್ತು ಗೃಹ ಜ್ಯೋತಿ ಯೋಜನೆಗಳಿಗೆ ಉಚಿತವಾಗಿ ಸರಬರಾಜಾಗುವ ವಿದ್ಯುತ್‌ಗೆ ಬಿಲ್‌ನ್ನು, ಸರ್ಕಾರವೇ ಸಬ್ಸಿಡಿ ಮೂಲಕ ತುಂಬಿಕೊಡುತ್ತಿದ್ದರೂ, ಅದನ್ನು ಪೂರ್ಣ ಪ್ರಮಾಣದಲ್ಲಿ ಮಾಡುತ್ತಿಲ್ಲ.

    ಸಮಸ್ಯೆ ಯಾಕೆ?
    ಸ್ಥಳೀಯ ಸಂಸ್ಥೆಗಳಿಗೆ ಬಿಡುಗಡೆ ಆಗುತ್ತಿರುವ ಅನುದಾನ ಅವುಗಳ ಕಾರ್ಯ ನಿರ್ವಹಣೆಗೆ ಸಾಕಾಗುತ್ತಿಲ್ಲ. ಬೀದಿ ದೀಪಗಳ ವಿದ್ಯುತ್ ಬಿಲ್ ಕೂಡ ಕಟ್ಟುವ ಸ್ಥಿತಿಯಲ್ಲಿ ಬಹಳಷ್ಟು ಗ್ರಾಮ ಪಂಚಾಯ್ತಿಗಳಿಲ್ಲ. ಬಹಳಷ್ಟು ಪಂಚಾಯಿತಿಗಳಲ್ಲಿ ಬೀದಿ ದೀಪ ಸಂಪರ್ಕ ಕಡಿತ ಮಾಡಿ ಬಾಕಿ ವಸೂಲಿ ಮಾಡಲಾಗಿದೆ. ಪ್ರತಿ ವರ್ಷವೂ ಬೀದಿ ದೀಪಗಳು ಹೆಚ್ಚುತ್ತಲೇ ಇವೆ. ಆದರೆ ವಿದ್ಯುತ್ ಬಿಲ್ ಸಮಸ್ಯೆ ಮಾತ್ರ ತೀರುತ್ತಿಲ್ಲ.

    ಗೃಹಜ್ಯೋತಿಗೆ 2152 ಕೋಟಿ
    ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ 200 ಯುನಿಟ್ ತನಕ ಉಚಿತ ವಿದ್ಯುತ್ ಯೋಜನೆಗೆ ಸಿಎಂ ಸಿದ್ದರಾಮಯ್ಯ ಅವರು ಮೊದಲ ತ್ರೈಮಾಸಿಕ ಕಂತಾಗಿ 2152 ಕೋಟಿ ರೂ ಬಿಡುಗಡೆ ಮಾಡಿದ್ದಾರೆ. ಆದರೆ ಹಳೆ ಬಾಕಿ ಮಾತ್ರ ಹಾಗೆಯೇ ಉಳಿದಿದೆ.

    *ಕರ್ನಾಟಕ ವಿದ್ಯುತ್ ನಿಗಮ(ಕೆಪಿಸಿ) ನಷ್ಟದಲ್ಲಿ ಸಿಲುಕಿರುವುದು ನೋವಿನ ಸಂಗತಿ. ಸರ್ಕಾರ ಮೊದಲು ಈ ಬಗ್ಗೆ ಗಂಭೀರವಾಗಿ ಗಮನ ನೀಡಿ ಕ್ರಮ ಕೈಗೊಳ್ಳದೆ ಹೋದರೆ, ಸಂಸ್ಥೆ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿ ಸಂಬಳ ಕೊಡುವುದಕ್ಕೂ ಕಷ್ಟ ಕಾಲ ಬರಲಿದೆ.
    ಹೆಸರು ಹೇಳಿಕೊಳ್ಳದ ಕೆಪಿಸಿ ಅಧಿಕಾರಿ.

    • ಕರ್ನಾಟಕ ವಿದ್ಯುತ್ ನಿಗಮಕ್ಕೆ(ಕೆಪಿಸಿ) ಬರಬೇಕಾಗಿರುವ ಬಾಕಿ ಹಣದ ಬಗ್ಗೆ ಚರ್ಚೆ ನಡೆದಿದೆ. ಕೂಡಲೆ ಬಾಕಿ ಪಾವತಿ ಮಾಡುವಂತೆ ಆಗಿಂದಾಗ್ಗೆ ಎಲ್ಲಾ ಎಸ್ಕಾಂ ಕಂಪನಿಗಳಿಗೂ ಪತ್ರಗಳನ್ನು ಬರೆಯಲಾಗಿದೆ.
      ಕೆಪಿಸಿ ಅಧಿಕಾರಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts