More

    ಉಡುಪಿ ಕೋವಿಡ್ ಲ್ಯಾಬ್ 10 ದಿನದಲ್ಲಿ ರೆಡಿ, ಸಚಿವ ಸುಧಾಕರ್ ಭರವಸೆ

    ಉಡುಪಿ: ಹೊರ ರಾಜ್ಯಗಳಿಂದ ಬರುವವರ ಕೋವಿಡ್ ಪರೀಕ್ಷೆ ಶೀಘ್ರ ನಡೆಸಬೇಕಿದೆ. ಜಿಲ್ಲಾಸ್ಪತ್ರೆಯಲ್ಲಿ ಸರ್ಕಾರಿ ಕೋವಿಡ್- 19 ಪರೀಕ್ಷಾ ಲ್ಯಾಬ್ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಆದಷ್ಟು ಬೇಗ ಯಂತ್ರೋಪಕರಣ ಒದಗಿಸಲಾಗುವುದು. 10 ದಿನಗಳಲ್ಲಿ ಲ್ಯಾಬ್ ಕಾರ್ಯಾರಂಭಿಸಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ.ಸುಧಾಕರ್ ತಿಳಿಸಿದರು.

    ಬುಧವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೋವಿಡ್-19 ಕುರಿತು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
    ಮಹಾರಾಷ್ಟ್ರ ಮತ್ತಿತರ ರಾಜ್ಯಗಳಿಂದ ಬರುವವರಿಗೆ ಸಾಂಸ್ಥಿಕ ಕ್ವಾರಂಟೈನ್ ಬದಲು ಮನೆಯನ್ನೇ ಸೀಲ್‌ಡೌನ್ ಮಾಡಿ ಅಲ್ಲಿಗೆ ಅಗತ್ಯ ವಸ್ತುಗಳನ್ನು ಪೂರೈಸಲು ಕ್ರಮ ಕೈಗೊಳ್ಳುವಂತೆ ಶಾಸಕರು ಸಲಹೆ ನೀಡಿದರು. ಈ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದ ಸಚಿವರು, ಕರೊನಾ ನಿಯಂತ್ರಣಕ್ಕೆ ಗ್ರಾಮಮಟ್ಟದಿಂದ ಜಿಲ್ಲಾ ಕೇಂದ್ರದಲ್ಲಿನ ವಾರ್ಡ್‌ಗಳವರೆಗೂ ಕಾರ್ಯಪಡೆ ರಚಿಸಿಕೊಂಡು ಕಾರ್ಯ ನಿರ್ವಹಿಸುವಂತೆ ಸೂಚಿಸಿದರು.

    ಧಾರ್ಮಿಕ ದತ್ತಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಪಂ ಅಧ್ಯಕ್ಷ ದಿನಕರ ಬಾಬು, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುನೀಲ್ ಕುಮಾರ್, ರಘುಪತಿ ಭಟ್, ಸುಕುಮಾರ ಶೆಟ್ಟಿ, ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಪಂ ಸಿಇಒ ಪ್ರೀತಿ ಗೆಹ್ಲೋಟ್ ಉಪಸ್ಥಿತರಿದ್ದರು.

    ಜಿಲ್ಲೆಗೆ 2 ಸಾವಿರ ಪಿಪಿಇ ಕಿಟ್ : ಎಲ್ಲ ಖಾಸಗಿ ನರ್ಸಿಂಗ್ ಹೋಂಗಳು ಮತ್ತು ಕ್ಲಿನಿಕ್‌ಗಳು ಸಾರ್ವಜನಿಕರಿಗೆ ಅಗತ್ಯ ಸೇವೆ ನೀಡುತ್ತಿರುವ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಪರಿಶೀಲಿಸಬೇಕು ಎಂದು ಸಚಿವರು ಸೂಚಿಸಿದರು. ಕೋವಿಡ್ ಲ್ಯಾಬ್ ಮತ್ತು ಚಿಕಿತ್ಸೆಗೆ ಅಗತ್ಯವಿರುವ ಸಿಬ್ಬಂದಿಯನ್ನು ಹೊರಗುತ್ತಿಗೆ ಮೂಲಕ ಪಡೆಯುವಂತೆ ತಿಳಿಸಿದರು. ಜಿಲ್ಲೆಗೆ ತಕ್ಷಣ 2000 ಪಿಪಿಇ ಕಿಟ್ ಸರಬರಾಜು ಮಾಡಲಾಗುವುದು ಎಂದರು.

     ಶೇ.98 ಮಂದಿಗೆ ರೋಗ ಲಕ್ಷಣಗಳಿಲ್ಲ: ಜಿಲ್ಲೆಯಲ್ಲಿ ಇದುವರೆಗೆ 13,542 ಜನರನ್ನು ಕ್ವಾರಂಟೈನ್ ಮಾಡಿದ್ದು, ಜಿಲ್ಲೆಗೆ ಮೇ ತಿಂಗಳಲ್ಲಿ 8624 ಮಂದಿ ಆಗಮಿಸಿದ್ದಾರೆ. ಅದರಲ್ಲಿ 152 ಮಂದಿ ವಿದೇಶದಿಂದ ಮತ್ತು 8472 ಮಂದಿ ಇತರೆ ರಾಜ್ಯಗಳಿಂದ ಆಗಮಿಸಿದ್ದಾರೆ. ಇದರಲ್ಲಿ 7697 ಮಂದಿ ಮಹಾರಾಷ್ಟ್ರದಿಂದ ಬಂದಿದ್ದು, ಜಿಲ್ಲೆಯಲ್ಲಿ ಪ್ರತಿ ಒಂದು ಲಕ್ಷ ಜನಸಂಖ್ಯೆಗೆ 539 ಮಂದಿಗೆ ಪರೀಕ್ಷೆ ಮಾಡಲಾಗಿದೆ. ಪ್ರಕರಣ ಕಂಡು ಬಂದಿರುವಲ್ಲಿ ಶೇ.98 ಅಂದರೆ 400 ಮಂದಿಗೆ ರೋಗ ಲಕ್ಷಣಗಳಿಲ್ಲ. ಒಟ್ಟು 63 ಕಂಟೇನ್ಮೆಂಟ್ ಜೋನ್ ರಚಿಸಲಾಗಿದ್ದು, ಪ್ರಸ್ತುತ 61 ಕಂಟೇನ್ಮೆಂಟ್ ಜೋನ್‌ಗಳಿವೆ ಎಂದು ಜಿಲ್ಲಾ ಕೋವಿಡ್-19 ನೋಡೆಲ್ ಅಧಿಕಾರಿ ಪ್ರಶಾಂತ್ ಭಟ್ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts