More

    ಹಾವೇರಿ ಜಿಲ್ಲೆಯ 419 ಹಳ್ಳಿಗಳಲ್ಲಿ ಕೋವಿಡ್ ಸೋಂಕು

    ಪರಶುರಾಮ ಕೆರಿ ಹಾವೇರಿ
    ಕರೊನಾ 2ನೇ ಅಲೆಗೆ ಹಳ್ಳಿಗಳೇ ಹಾಟ್​ಸ್ಪಾಟ್ ಆಗಿವೆ. ಜಿಲ್ಲೆಯಲ್ಲಿರುವ 699 ಕಂದಾಯ ಗ್ರಾಮಗಳಲ್ಲಿ 419 ಗ್ರಾಮಗಳಲ್ಲಿ ಕರೊನಾ ಸೋಂಕು ಹರಡಿದೆ. ಕೇವಲ 180 ಹಳ್ಳಿಗಳು ಮಾತ್ರ ಕರೊನಾ ಸೋಂಕು ಹರಡುವಿಕೆಯಿಂದ ಮುಕ್ತವಾಗಿವೆ.
    ಜಿಲ್ಲೆಯ 223 ಗ್ರಾಪಂಗಳ ವ್ಯಾಪ್ತಿಯಲ್ಲಿ 699 ಗ್ರಾಮಗಳಿವೆ. ಅದರಲ್ಲಿ ಶೇ. 80ರಷ್ಟು ಗ್ರಾಮಗಳಿಗೆ ಈಗಾಗಲೇ ಕರೊನಾ 2ನೇ ಅಲೆಯ ಸೋಂಕು ಹರಡಿದೆ. ನಗರಗಳಿಂದ ಹಳ್ಳಿಗೆ ಮರಳುವವರನ್ನು ನಿಯಂತ್ರಿಸದ ಕಾರಣ ಹಳ್ಳಿಗಳಲ್ಲಿ ಕರೊನಾ ಪ್ರಕರಣಗಳು ಹೆಚ್ಚಾಗಿ ಜನರು ಆತಂಕದಲ್ಲಿ ಕಾಲ ಕಳೆಯುವ ಸ್ಥಿತಿ ನಿರ್ವಣವಾಗಿದೆ.
    ತಡವಾಗಿ ನಿಯಂತ್ರಣಕ್ಕೆ ಸರ್ಕಸ್: 2ನೇ ಅಲೆ ಆರಂಭವಾದ ಕೂಡಲೆ ಹಳ್ಳಿಗಳಲ್ಲಿ ಹೊರಗಿನಿಂದ ಬಂದವರ ಮೇಲೆ ನಿಗಾ ವಹಿಸುವುದು, ಅವರನ್ನು ಕ್ವಾರಂಟೈನ್ ಮಾಡುವುದನ್ನು ಕಟ್ಟುನಿಟ್ಟಾಗಿ ಪಾಲಿಸಲಿಲ್ಲ. ಈ ನಿಟ್ಟಿನಲ್ಲಿ ಪಿಡಿಒ, ಆಶಾ ಕಾರ್ಯಕರ್ತೆಯರಿಗೂ ಸೂಚನೆ ನೀಡಲಿಲ್ಲ. ಯಾವಾಗ ಕರೊನಾ ಸೋಂಕು ಹಳ್ಳಿಗಳಲ್ಲಿಯೂ ವ್ಯಾಪಕವಾಗತೊಡಗಿತೋ ಆಗ ಕಠಿಣ ಕ್ರಮಕ್ಕೆ ಮುಂದಾದರು. ಅಲ್ಲದೆ, ಗ್ರಾಮೀಣ ಪ್ರದೇಶಗಳಲ್ಲಿ ಮದುವೆ ಸೇರಿ ವಿವಿಧ ಕಾರ್ಯಕ್ರಮಗಳನ್ನು ನಡೆಸಲು ಕೆಲ ನಿರ್ಬಂಧಗಳನ್ನು ಹಾಕಿ ಅನುಮತಿ ನೀಡಿದರು. ಆದರೆ, ಸರ್ಕಾರ ಸೂಚಿಸಿದ್ದ 50ಕ್ಕಿಂತ ಹೆಚ್ಚಿನ ಜನರು ಸೇರದಂತೆ ತಡೆಯಲು ಯಾವ ಅಧಿಕಾರಿಗಳೂ ಮುಂದಾಗಲಿಲ್ಲ. ಮದುವೆಗಳಲ್ಲಿ 200ರಿಂದ 500ರಷ್ಟು ಜನರು ನಿರಾತಂಕವಾಗಿ ಸೇರುತ್ತಿದ್ದರು. ನಿಯಮ ಮೀರಿ ನೂರಾರು ಮದುವೆಗಳು ನಡೆದರೂ ಒಂದೇ ಒಂದು ದೂರನ್ನು ಸಹ ಅಧಿಕಾರಿಗಳು ದಾಖಲಿಸಲಿಲ್ಲ. ಹೀಗಾಗಿ ಹಳ್ಳಿಗಳಲ್ಲಿ ಕರೊನಾ ಸೋಂಕು ವೇಗವಾಗಿ ಹರಡಿದೆ ಎಂಬ ಮಾತುಗಳು ಕೇಳಿಬಂದವು.
    ಜನರಿಂದಲೂ ನಿರ್ಬಂಧವಿಲ್ಲ: ಕರೊನಾ ಮೊದಲ ಅಲೆಯ ಸಮಯದಲ್ಲಿ ಹಳ್ಳಿಗಳಲ್ಲಿ ಗ್ರಾಮಸ್ಥರೇ ಸ್ವಯಂ ಲಾಕ್​ಡೌನ್ ಘೊಷಿಸಿಕೊಂಡಿದ್ದರು. ಬೇರೆ ಕಡೆಯಿಂದ ಗ್ರಾಮಕ್ಕೆ ಯಾರೂ ಪ್ರವೇಶಿಸದಂತೆ ಮುಳ್ಳು ಬೇಲಿಗಳನ್ನು ನಿರ್ವಿುಸಿಕೊಂಡಿದ್ದರು. ನಗರದಿಂದ ಗ್ರಾಮದವರೇ ಬಂದರೂ ಅವರನ್ನು ತೋಟದ ಮನೆಗಳಲ್ಲಿ ಕ್ವಾರಂಟೈನ್ ಮಾಡುತ್ತಿದ್ದರು. ಅಲ್ಲದೆ, ಆರೋಗ್ಯ ಇಲಾಖೆಯಿಂದ ಮನೆಮನೆ ಸಮೀಕ್ಷೆಯ ಮೂಲಕ ಜ್ವರ, ಕೆಮ್ಮು, ನೆಗಡಿಯ ಮಾಹಿತಿ ಸಂಗ್ರಹಿಸಿ, ಕರೊನಾ ಲಕ್ಷಣವುಳ್ಳವರನ್ನು ಪರೀಕ್ಷೆ ಮಾಡಿ ಕ್ವಾರಂಟೈನ್ ಹಾಗೂ ಆಸ್ಪತ್ರೆಗೆ ದಾಖಲಿಸುವ ಕೆಲಸ ಮಾಡಲಾಗಿತ್ತು. ಹೀಗಾಗಿ ಮೊದಲ ಅಲೆಯಲ್ಲಿ ಹಳ್ಳಿಗಳು ಸಾಕಷ್ಟು ಪ್ರಮಾಣದಲ್ಲಿ ಕರೊನಾದಿಂದ ಮುಕ್ತವಾಗಿದ್ದವು. ಆದರೆ, ಈ ಬಾರಿ ಅಂತಹ ಯಾವುದೇ ನಿರ್ಬಂಧಗಳನ್ನು ವಿಧಿಸದ ಪರಿಣಾಮ ಹಳ್ಳಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಕರೊನಾ ಹಾಟ್​ಸ್ಪಾಟ್ ಆಗಲು ಪ್ರಮುಖ ಕಾರಣವಾಗಿದೆ. ಈ ಬಾರಿ ಜಿಲ್ಲೆಯ ಹಿರಿಯ ಅಧಿಕಾರಿಗಳು ಕಚೇರಿ ಬಿಟ್ಟು ಹೊರಗೆ ಬರುತ್ತಿಲ್ಲ. ಹೀಗಾಗಿ ಗ್ರಾಮಗಳಲ್ಲಿ ಕರೊನಾ ನಿಯಂತ್ರಣದ ಕೆಲಸ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಗ್ರಾಪಂ ಅಧ್ಯಕ್ಷರೊಬ್ಬರು ‘ವಿಜಯವಾಣಿ’ಗೆ ತಿಳಿಸಿದರು.
    ಹಾವೇರಿಯಲ್ಲಿ ಅತಿ ಹೆಚ್ಚು, ಹಾನಗಲ್ಲನಲ್ಲಿ ಕಡಿಮೆ: ಜಿಲ್ಲೆಯಲ್ಲಿ 223 ಗ್ರಾಪಂಗಳಿದ್ದು, ಅದರಲ್ಲಿ ಹಾನಗಲ್ಲ ತಾಲೂಕಿನಲ್ಲಿ ಅತಿಹೆಚ್ಚು 42 ಗ್ರಾಪಂಗಳು 154 ಗ್ರಾಮಗಳಿವೆ. ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಗ್ರಾಮಗಳು ಕರೊನಾದಿಂದ ಮುಕ್ತವಾಗಿವೆ. ಹಾವೇರಿ ತಾಲೂಕಿನಲ್ಲಿ 32 ಗ್ರಾಪಂಗಳಿದ್ದು, 89 ಗ್ರಾಮಗಳಿವೆ. ಇದರಲ್ಲಿ 5 ಗ್ರಾಮಗಳನ್ನು ಹೊರತುಪಡಿಸಿ ಉಳಿದೆಲ್ಲ ಗ್ರಾಮಗಳಲ್ಲಿ ಕರೊನಾ ಸೋಂಕು ಹರಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts