More

    ಕಾಟಾಚಾರಕ್ಕೆ ಮಾಸ್ಕ್ ಧಾರಣೆ, ದೈಹಿಕ ಅಂತರ ಪಾಲನೆಯೂ ಇಲ್ಲ ಕರೊನಾ ತಡೆ ನಿಯಮಕ್ಕಿಲ್ಲ ಮನ್ನಣೆ

    ಉಡುಪಿ: ಕರೊನಾ ವ್ಯಾಪಕವಾಗಿ ಹರಡುತ್ತಿದ್ದರೂ ಜನರು ಮಾಸ್ಕ್ ಧಾರಣೆ ಮತ್ತು ಸಾಮಾಜಿಕ ಅಂತರ ಪಾಲನೆಯಲ್ಲಿ ಹಿಂದೇಟು ಹಾಕುತ್ತಿರುವುದು ಜಿಲ್ಲೆಯಾದ್ಯಂತ ಕಂಡುಬಂದಿದೆ.

    ಹಬ್ಬದ ಹಿನ್ನೆಲೆಯಲ್ಲಿ ಜನರ ಓಡಾಟ ಹೆಚ್ಚಾಗಿದ್ದು, ಅನೇಕ ಮಂದಿ ಮಾಸ್ಕ್ ಕಾಟಾಚಾರಕ್ಕೆ ಧರಿಸಿ ತಿರುಗುತ್ತಿದ್ದಾರೆ. ಕೆಲವರು ಮೂಗಿನ ಕೆಳಗೆ ಬಾಯಿಗೆ ಮಾತ್ರ ಮಾಸ್ಕ್ ಧರಿಸುತ್ತಿದ್ದಾರೆ. ಇದರಿಂದ ಜನರಲ್ಲಿ ಬಗ್ಗೆ ಜಾಗೃತಿ ಮೂಡಿಲ್ಲ ಎಂಬುದು ಸಾಬೀತಾಗಿದೆ. ಕೆಲವು ವಾಣಿಜ್ಯ ಮಳಿಗೆಗಳಲ್ಲಿ ಮಾತ್ರ ಸಾಮಾಜಿಕ ಅಂತರ ಪಾಲನೆಗೆ ಒತ್ತು ನೀಡಲಾಗುತ್ತಿದೆ. ದೇವಸ್ಥಾನಗಳಲ್ಲಿ ಭಕ್ತರು ದ್ವಾರದವರೆಗೆ ಮಾಸ್ಕ್ ಧರಿಸಿದರೂ ಒಳಗೆ ಮಾಸ್ಕ್ ತೆಗೆದು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಸ್ವಯಂಸೇವಕರು ಸೂಚನೆಗಳನ್ನು ನೀಡುತ್ತಿದ್ದರೂ ಕಿವಿಗೇ ಹಾಕಿಕೊಳ್ಳುತ್ತಿರಲಿಲ್ಲ. ಮಾರುಕಟ್ಟೆಗಳಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿರಲಿಲ್ಲ. ಜನರು ಗಲ್ಲದ ಮೇಲೆ ಮಾಸ್ಕ್ ಇಟ್ಟುಕೊಂಡು ಖರೀದಿಯಲ್ಲಿ ತೊಡಗಿದ್ದರು.

    ಬಸ್‌ಗಳಲ್ಲಿಲ್ಲ ನಿಯಮ ಪಾಲನೆ
    ಉಡುಪಿ ಸರ್ವೀಸ್ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುವ ಅನೇಕ ಮಂದಿ ಮಾಸ್ಕ್ ತೆಗೆದು ಕುಳಿತಿರುವುದು ಕಂಡು ಬಂತು. ವಲಸಿಗ ಕಾರ್ಮಿಕರು ವೀಳ್ಯದೆಲೆಯನ್ನು ಜಗಿದು ಅಲ್ಲೇ ಉಗುಳುತ್ತಿದ್ದಾರೆ. ಜತೆಗೆ ಬಸ್‌ಗಳಲ್ಲಿಯೂ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಪರಸ್ಪರ ಅಂತರ ಪಾಲಿಸಲಾಗುತ್ತಿಲ್ಲ. ಕೆಲವರು ಮಾತ್ರ ಮಾಸ್ಕ್ ಧರಿಸಿ ಸಂಚರಿಸುತ್ತಿದ್ದರು. ಹೆಚ್ಚಿನವರು ಬಸ್ ಹೊರಟ ನಂತರ ಮಾಸ್ಕ್ ತೆಗೆದು ಕುಳಿತುಕೊಂಡಿರುವುದು ಕಂಡುಬಂದಿದೆ.
    13 ಲಕ್ಷ ರೂ. ದಂಡ ವಸೂಲಿ

    ಜಿಲ್ಲೆಯಲ್ಲಿ ಈವರೆಗೆ 13.85 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ 1.6 ಲಕ್ಷ ರೂ., ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ 17,200, ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ 36,300, ಕಾಪು ಪುರಸಭಾ ವ್ಯಾಪ್ತಿಯಲ್ಲಿ 22,500, ಸಾಲಿಗ್ರಾಮ ಪಟ್ಟಣ ಪಂಚಾಯಿತಿಯಲ್ಲಿ 13,400, ಬ್ರಹ್ಮಾವರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 3000 ರೂ. ದಂಡ ಹಾಕಲಾಗಿದೆ. ಉಡುಪಿ ಗ್ರಾಮಾಂತರದಲ್ಲಿ 9900, ಕಾರ್ಕಳದಲ್ಲಿ 8100 , ಕುಂದಾಪುರದಲ್ಲಿ 1100, ಕಾಪುವಿನಲ್ಲಿ 2300, ಬ್ರಹ್ಮಾವರದಲ್ಲಿ 4200, ಹೆಬ್ರಿಯಲ್ಲಿ 3700, ಬೈಂದೂರಿನಲ್ಲಿ 600 ರೂ. ದಂಡ ಪಡೆಯಲಾಗಿದೆ.

    ಕಾಪು ತಾಲೂಕಿನಲ್ಲಿ ನಿಯಮ ಉಲ್ಲಂಘನೆ: ಕಾಪು ತಾಲೂಕಿನಲ್ಲಿ ನಿಯಮ ಉಲ್ಲಂಘನೆ ಹೆಚ್ಚಾಗಿ ಕಂಡು ಬರುತ್ತಿದೆ. ಕೆಲವೆಡೆ ಜಾಗೃತಿ ಮೂಡಿಸಬೇಕಾದ ಜನಪ್ರತಿನಿಧಿಗಳು, ಅಧಿಕಾರಿಗಳೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಸಮರ್ಪಕ ಬಳಕೆಯ ಗಂಭೀರತೆಯನ್ನು ಮರೆಯುತ್ತಿದ್ದಾರೆ. ದೇವಸ್ಥಾನ, ಮದುವೆ, ಸಂತೆ, ವಾಣಿಜ್ಯ ಮಳಿಗೆ, ಹೋಟೆಲ್, ಡಾಬಾ, ಬಸ್‌ಗಳಲ್ಲಿ ಹೆಸರಿಗಷ್ಟೇ ಸ್ಯಾನಿಟೈಸರ್ ಹಾಗೂ ಮಾಸ್ಕ್ ಇಟ್ಟಿರುತ್ತಾರಾದರೂ, ಬೆರಳೆಣಿಕೆ ಮಂದಿ ಮಾತ್ರ ಅದನ್ನು ಬಳಕೆ ಮಾಡುತ್ತಾರೆ. ಮದುವೆ ಇನ್ನಿತರ ಶುಭ ಸಮಾರಂಭಗಳಿಗೆ ಸರ್ಕಾರ ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿ ಸರಿಯಾಗಿ ಪಾಲನೆಯಾಗುತ್ತಿಲ್ಲ.

    ನವರಾತ್ರಿ ಇರುವುದರಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಪಾಲಿಸಬೇಕು ಎಂದು ಸೂಚನೆ ನೀಡಲಾಗಿದೆ. ದಿನಕ್ಕೆ 200ಕ್ಕಿಂತ ಹೆಚ್ಚಿನ ಜನರಿಗೆ ದಂಡ ವಿಧಿಸಲಾಗಿತ್ತಿದೆ. ಇತ್ತೀಚೆಗೆ ಮಾಸ್ಕ್ ಬಗ್ಗೆ ಜಾಗೃತಿ ಉಂಟಾಗಿದೆ. ಹೀಗಾಗಿ ದಂಡದ ಪ್ರಮಾಣವೂ ಕಡಿಮೆಯಾಗುತ್ತಿದೆ. ಅಂಗಡಿಗಳಲ್ಲಿ ಮಾಲೀಕರು ಮಾಸ್ಕ್ ಧರಿಸದಿದ್ದರೆ ಪರವಾನಗಿ ತಾತ್ಕಾಲಿಕ ರದ್ದು ಮಾಡುವಂತೆ ನಗರಸಭೆಗೆ ಸೂಚನೆ ನೀಡಲಾಗಿದೆ. ಮದುವೆ ಅನುಮತಿ ನೀಡುವ ಸಂದರ್ಭದಲ್ಲಿ ನೋಡಲ್ ಅಧಿಕಾರಿಯ ಹೆಸರು ಉಲ್ಲೇಖಿಸಲಾಗುತ್ತದೆ. ನಿಯಮ ಉಲ್ಲಂಘನೆಯಾದರೆ ಅವರೇ ಜವಾಬ್ದಾರರಾಗಿರುತ್ತಾರೆ.
    -ಜಿ. ಜಗದೀಶ್, ಜಿಲ್ಲಾಧಿಕಾರಿ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts