More

    ನಿರ್ಮಾಣ ಹಂತದಲ್ಲಿ ಕೊಟ್ಟೂರು ಕ್ರೀಡಾಂಗಣ

    ಉಜ್ಜಿನಿ ರುದ್ರಪ್ಪ ಕೊಟ್ಟೂರು
    ಏಳು ಪಿಯುಸಿ ಕಾಲೇಜು, ಮೂರು ಡಿಗ್ರಿ ಕಾಲೇಜು, ಇಪ್ಪತ್ತೊಂದು ಪ್ರೌಢಶಾಲೆಗಳಿರುವ ತಾಲೂಕಿನಲ್ಲಿ ಕ್ರೀಡಾಪಟುಗಳಿಗೆ ಬರವಿಲ್ಲ. ಆದರೆ ಸುಸಜ್ಜಿತ ಕ್ರೀಡಾಂಗಣದ ಕೊರತೆ ಕಾಡುತ್ತ ಬಂದಿದ್ದರೂ, ಕಳೆದ ವರ್ಷ ತಾಲೂಕು ಕ್ರೀಡಾಂಗಣ ನಿರ್ಮಾಣ ಕಾರ್ಯ ನಡೆದಿದೆ ಎಂಬುದು ಸಮಾಧಾನ ತಂದಿದೆ.

    ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿರುವ ಇಲ್ಲಿನ ಯುವಕ-ಯುವತಿಯರು ಕ್ರೀಡಾಕ್ಷೇತ್ರದಲ್ಲೂ ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಖ್ಯಾತಿಗಳಿಸುತ್ತಿದ್ದಾರೆ. ವಿಶಾಲವಾದ ಹೈಸ್ಕೂಲ್ ಮೈದಾನದಲ್ಲೇ ಕಠಿಣ ಅಭ್ಯಾಸ ಮಾಡಿ ಜಿಲ್ಲಾ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ ವಿಜೇತರಾಗಿ ತಾಲೂಕಿಗೆ ಕೀರ್ತಿ ತಂದಿದ್ದಾರೆ.

    ನಿರ್ಮಾಣ ಹಂತದಲ್ಲಿ ಕೊಟ್ಟೂರು ಕ್ರೀಡಾಂಗಣ
    ಕೊಟ್ಟೂರಿನಲ್ಲಿ ನಿರ್ಮಾಣವಾಗುತ್ತಿರುವ ಒಳಾಂಗಣ ಕ್ರೀಡಾಂಗಣ

    ಸುಸಜ್ಜಿತ ಕ್ರೀಡಾಂಗಣದ ಕೊರತೆಯನ್ನು ಎದುರಿಸುತ್ತಿದ್ದು, ಕೊಸ ಸ್ಟೇಡಿಯಂ ಪೂರ್ಣಗೊಂಡು ಲೋಕಾರ್ಪಣೆಗೊಳ್ಳುವವರೆಗೆ ಈ ಕೊರತೆ ಮುಂದುವರಿಯಲಿದೆ. ಕೊಟ್ಟೂರು ಪ್ರತ್ಯೇಕ ವಿಧಾನ ಸಭಾ ಕ್ಷೇತ್ರವಾಗಿದ್ದಾಗ ಈ ಕ್ಷೇತ್ರವನ್ನು ಪ್ರತಿನಿಧಿಸಿದ ಶಾಸಕರು, ಸಚಿವವರು ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗಿರಲಿಲ್ಲ.

    ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಕೊಟ್ಟೂರು ಸೇರಿದ ಮೇಲೆ 2010-11ರಲ್ಲಿ ಅಂದಿನ ಶಾಸಕ ನೇಮಿರಾಜ್ ನಾಯ್ಕ ಕ್ರೀಡಾಂಗಣ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದರು. ಕ್ರೀಡಾಂಗಣದ ಜಾಗ ಯುವ ಜನ ಕ್ರೀಡಾ ಇಲಾಖೆಗೆ ಸೇರಿದ ಮೇಲೆ ಡಿ.ಎಂ.ಎಫ್.ಅನುದಾನಲ್ಲಿ 4 ಕೋಟಿ ರೂ.ಬಿಡುಗಡೆಯಾಯಿತು.

    2022ರ ಜೂ.8ರಂದು ಶಾಸಕ ಭೀಮಾನಾಯ್ಕ 125 ಮೀಟರ್ ಉದ್ದ, 40 ಮೀಟರ್ ಅಗಲ ಇರುವ ಕ್ರೀಡಾಂಗಣ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು. ನಿರ್ಮಾಣದ ಹೊಣೆಯನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲಾಯಿತು. ಆದರೆ, ನಿರ್ಮಾಣ ಕಾರ್ಯ ಆಮೆ ವೇಗದಲ್ಲಿ ನಡೆಯತೊಡಗಿದೆ.

    ಇದನ್ನೂ ಓದಿ: ಶುರುವಾಗಿದೆ ಸ್ಟೇಡಿಯಂ ನಿರ್ಮಾಣ

    ರೂ.4 ಕೋಟಿ ವೆಚ್ಚದಲ್ಲಿ ನಿರ್ಮಾಣ

    ಜಿಲ್ಲಾ ಮೈನಿಂಗ್ ಫಂಡ್ ಈಗಾಗಲೇ 4 ಕೋಟಿ ರೂ. ಬಿಡುಗಡೆಗೊಳಿಸಿದ್ದು, ಲೋಕೋಪಯೋಗಿ ಇಲಾಖೆ ಸ್ಟೇಡಿಯಂ ನಿರ್ಮಾಣ ಕಾರ್ಯ ನಡೆಸುತ್ತಿದೆ. ಕ್ರೀಡಾಂಗಣದೊಳಗೆ ಬಾಲಕಿಯರಿಗೆ ಮತ್ತು ಬಾಲಕರಿಗೆ ಪ್ರತ್ಯೇಕ ಡ್ರೆಸಿಂಗ್ ರೂಮ್, ಜಿಮ್‌ಗಳು, ಒಳಾಂಗಣ ಕ್ರೀಡಾಂಗಣಗಳು ಇರಲಿವೆ. ಸುಸಜ್ಜಿತ ಟೆನ್ನೀಸ್ ಬಾಸ್ಕೆಟ್ ಬಾಲ್ ಕೋರ್ಟ್ ತಲೆ ಎತ್ತಲಿವೆ. ಆದರೆ, ಈಜುಕೊಳ ನಿರ್ಮಾಣದ ಅಗತ್ಯ ಬಹಳವಿದೆ. ತ್ವರಿತವಾಗಿ ನಿರ್ಮಾಣ ಆಗಬೇಕಿದೆ.

    ಓಪನ್ ಬಾರ್ ಆಗಿತ್ತು ಮೈದಾನ

    ಪಟ್ಟಣದ ನಡುವೆ ಹೈಸ್ಕೂಲ್ ಗ್ರೌಂಡ್ ಇದ್ದು, ಈಗ ಇಲ್ಲೇ ಕ್ರೀಡಾಂಗಣ ನಿರ್ಮಾಣ ನಡೆಯುತ್ತಿದೆ. ಇದಕ್ಕೂ ಮೊದಲು ಇಡೀ ಮೈದಾನ ಓಪನ್ ಬಾರ್ ಆಗಿತ್ತು. ಕುಡಿದು ಬಿಸಾಡಿದ ಖಾಲಿ ಬಾಟಲ್‌ಗಳು ಬಿದ್ದಿರುತ್ತಿದ್ದವು. ವಾಯು ವಿಹಾರಕ್ಕೆ ಬರುವವರಿಗೆ, ಕ್ರೀಡಾಭ್ಯಾಸ ಮಾಡಲು ಬರುವವರಿಗೆ ಗಾಜಿನ ಚೂರುಗಳು ಚುಚ್ಚಿಕೊಳ್ಳುತ್ತಿದ್ದವು.

    ಮೈದಾನಕ್ಕೆ ಹೊಂದಿಕೊಂಡಂತೆ ಉತ್ತರಕ್ಕೆ ಹೈಸ್ಕೂಲ್, ಜೂನಿಯರ್ ಕಾಲೇಜ್, ಪೂರ್ವಕ್ಕೆ ಕೊಟ್ಟೂರೇಶ್ವರ ಕಾಲೇಜ್ ಇರುವ ಕಾರಣ ಹುಡುಗಿಯರು ಈ ಮಾರ್ಗವಾಗಿ ಓಡಾಡುವುದು ಕಷ್ಟವಾಗುತ್ತಿತ್ತು. ನಂತರ ಪೊಲೀಸರು ಪುಂಡರಿಂದ ಈ ಮೈದಾನವನ್ನು ಮುಕ್ತ ಗೊಳಿಸಿದ್ದರು.

    ಗತಿಯಾಗಿದೆ ಖಾಸಗಿ ಮೈದಾನ

    ಕೊಟ್ಟೂರಿನಲ್ಲಿ ಯಾವುದೇ ಕ್ರೀಡಾಕೂಟ ಏರ್ಪಡಿಸಿದ್ದರೂ ಖಾಸಗಿ ಒಡೆತನದ ಸಿಪಿಇಡಿ ಮೈದಾನವೇ ಗತಿಯಾಗಿದೆ. ಕ್ರೀಡಾಕೂಟಕ್ಕೆ ಇರಬೇಕಾದ ಯಾವುದೇ ಸೌಲಭ್ಯಗಳಿಲ್ಲದಿದ್ದರೂ, ಇದೇ ಮೈದಾನದಲ್ಲಿ ಆಟೋಟ ನಡೆಸುವುದು ಅನಿವಾರ್ಯವಾಗಿದೆ. ಆದಷ್ಟು ಶೀಘ್ರ ಸ್ಟೇಡಿಯಂ ನಿರ್ಮಾಣವಾದರೆ ಮುಕ್ತಿದೊರೆಯಲಿದೆ.

    ಕ್ರೀಡೆಯಲ್ಲಿ ಕೊಟ್ಟೂರಿನವರ ಸಾಧನೆ

    ಕೊಟ್ಟೂರು ಹೋಬಳಿ ಕೇಂದ್ರವಾಗಿದ್ದಾಗಲೇ ಕ್ರೀಡಾಂಗಣವಿಲ್ಲದಿದ್ದರೂ ಇಲ್ಲಿನ ಹುಡುಗ-ಹುಡುಗಿಯರು ಆಟೋಟಗಳಲ್ಲಿ ಸಾಧನೆ ಮಾಡಿದ್ದರು. ತಾಲೂಕು, ಜಿಲ್ಲೆ, ವಿಶ್ವವಿದ್ಯಾಲಯ ಮತ್ತು ರಾಜ್ಯ ಮಟ್ಟದಲ್ಲಿ ಖೋಖೋ, ಓಟ, ತ್ರಿವಿಧ ಓಟ, ಬಾಲ್‌ಬ್ಯಾಡ್ಮಿಂಟನ್ ಮತ್ತಿತರ ಕ್ರೀಡೆಗಳಲ್ಲಿ ಜಯಿಸಿ, ಕೊಟ್ಟೂರಿಗೆ ಕೀರ್ತಿ ತಂದಿದ್ದರು.

    ಕೊಟ್ಟೂರು ತಾಲೂಕು ಕ್ರೀಡಾಂಗಣದ ಬೇಡಿಕೆ ದಶಕಗಳ ಹಿಂದಿನದು. ಕ್ರೀಡಾಂಗಣದ ಕೊರತೆಯ ನಡುವೆಯೂ ಇಲ್ಲಿನ ಕ್ರೀಡಾಪಟುಗಳು ಜಿಲ್ಲೆ, ರಾಜ್ಯಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಈಗ ಸುಸಜ್ಜಿತ ಒಳ ಮತ್ತು ಹೊರ ಕ್ರೀಡಾಂಗಣ ನಿರ್ಮಾಣ ನಡೆಯುತ್ತಿದೆ.
    ಎಂ. ಶಶಿಧರ, ದೈಹಿಕ ಶಿಕ್ಷಣ ಶಿಕ್ಷಕ, ಕೊಟ್ಟೂರು

    ನಮಗೆ ಕ್ರೀಡೆಯಲ್ಲಿ ಆತೀವ ಆಸಕ್ತಿ ಇತ್ತು. ಆದರೆ, ಅಭ್ಯಾಸ ಮಾಡಲು ಸರಿಯಾದ ಮೈದಾನವಿರಲಿಲ್ಲ. ಅಲ್ಲಿ ಇಲ್ಲಿ ಪ್ರಾಕ್ಟೀಸ್ ಮಾಡಿ ಖೋಖೋದಲ್ಲಿ ಜಿಲ್ಲಾ ರಾಜ್ಯಮಟ್ಟದಲ್ಲಿ ಹೆಸರು ಮಾಡಿದೆ. ಈಗ ಸುಸಜ್ಜಿತ ಸ್ಟೇಡಿಯಂ ನಿರ್ಮಾಣವಾಗುತ್ತಿದೆ. ಇದು ನಿಜಕ್ಕೂ ಸಂತೋಷದ ಸಂಗತಿ.
    ಬಣಕಾರ ಬಸವರಾಜ್, ಖೋಖೋ ಕ್ರೀಡಾಪಟು, ಕೊಟ್ಟೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts