More

    ಕೃಷಿ ಸಿಂಚಾಯಿ ಪರಿಕರ ಖರೀದಿಗೆ ಮುಗಿಬಿದ್ದ ರೈತರು

    ಕೊಟ್ಟೂರು: ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಪರಿಕರ ಕೊಳ್ಳಲು ಪಟ್ಟಣದ ರೈತ ಸಂಪರ್ಕ ಕೇಂದ್ರಕ್ಕೆ ಕೃಷಿಕರು ಮುಗಿಬಿದಿದ್ದಾರೆ.

    ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಂಟಿಯಾಗಿ 2015/16ರಲ್ಲಿ ಫರ್ ಡ್ರಾಪ್ ಮೋರ್ ಕ್ರಾಪ್ ತತ್ವದಡಿ ರೈತರ ಸರ್ವತೋಮುಖ ಅಭಿವೃದ್ಧಿಗಾಗಿ ಈ ಯೋಜನೆ ಜಾರಿಗೊಳಿಸಲಾಯಿತು.

    ಕೊಳವೆಬಾವಿ, ನದಿ ಹಾಗೂ ತೊರೆಯನ್ನು ಆಶ್ರಯಿಸಿ ನೀರಾವರಿ ಮಾಡುವ ರೈತರು ಕೇವಲ 1,876 ರೂ. ಕೃಷಿ ಇಲಾಖೆಗೆ ಪಾವತಿಸಿದರೆ 30 ಪೈಪ್‌ಗಳು, 5 ಜೆಟ್ಸ್, 5 ಸ್ಪಿಂಕ್ಲರ್ ಸೆಟ್ ನೀಡಲಾಗುತ್ತದೆ. ಇವುಗಳನ್ನು ಖರೀದಿಸಿ ಕೊಳವೆಬಾವಿ, ನದಿ ಅಥವಾ ತೆರೆದ ಬಾವಿಯ ಪಂಪ್‌ಸೆಟ್‌ಗೆ ಅಳವಡಿಸಿದರೆ ಮಳೆಯಂತೆ ಹನಿ ಬೆಳೆ ಮೇಲೆ ಬೀಳುವುದರಿಂದ ನೀರು ಉಳಿತಾಯ ಜತೆಗೆ ಅಧಿಕ ಇಳುವರಿ ಪಡೆಯಬಹುದಾಗಿದೆ.

    ಇದನ್ನು ಓದಿ: ತುಂತುರು, ಹನಿ ನೀರಾವರಿ ಯೋಜನೆಗೆ ಸಹಾಯಧನ: ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಮಾಹಿತಿ

    ಕೊಟ್ಟೂರು ರೈತ ಸಂಪರ್ಕ ಕೇಂದ್ರಕ್ಕೆ ಕಳೆದ ವರ್ಷ 240 ಅರ್ಜಿಗಳು ಬಂದಿದ್ದವು. ಇವುಗಳಲ್ಲಿ 208 ರೈತರಿಗೆ ಪೈಪ್, ಜೆಟ್ಸ್ ಮತ್ತು ಸ್ಪಿಂಕ್ಲರ್ ಸೆಟ್ ಪೂರೈಸಿದ್ದು, 32 ರೈತರಿಗೆ ಅನುದಾನದ ಕೊರತೆಯಿಂದ ಪರಿಕರಗಳು ಸರಬರಾಜಾಗಿಲ್ಲ. ಈ ಯೋಜನೆಗೆ ರಾಜ್ಯ ಸರ್ಕಾರ ಶೇ.57, ಕೇಂದ್ರ ಸರ್ಕಾರ ಶೇ.33 ಅನುದಾನ ನೀಡುತ್ತದೆ.

    ಜಾತಿ ತಾರತಮ್ಯ ಇಲ್ಲದೆ ಶೇ.90 ಅನುದಾನ ಕೊಡುತ್ತಿದ್ದು, ಶೇ.10 ಮಾತ್ರ ರೈತರು ಸಂದಾಯಮಾಡಬೇಕಿದೆ. ಆದರೆ 2023/24ನೇ ಸಾಲಿನ ಕೃಷಿ ಪರಿಕರ ಸಾಮಗ್ರಿ ಪೂರೈಕೆಗೆ ಸರ್ಕಾರ ಇನ್ನೂ ಟೆಂಡರ್ ಕರೆದಿಲ್ಲ. ಈಗಾಗಲೇ ಕೊಟ್ಟೂರು ರೈತ ಸಂಪರ್ಕ ಕೇಂದ್ರಕ್ಕೆ ಮುಂಗಡವಾಗಿ ಸಾವಿರ ಅರ್ಜಿಗಳು ಬಂದಿವೆ.

    ರೈತರು ಯೋಜನೆ ಲಾಭ ಪಡೆದು ಕಡಿಮೆ ನೀರಿನೊಂದಿಗೆ ಅಧಿಕ ಬೆಳೆ ತೆಗೆಯಲು ಉತ್ಸುಕರಾಗಿದ್ದು, ಕೃಷಿ ಪರಿಕರ ಪಡೆಯಲು ಶೀಘ್ರವೇ ಅರ್ಜಿ ಆಹ್ವಾನಿಸಬೇಕಿದೆ.

    ಕೃಷಿ ಸಿಂಚಾಯಿ ಯೋಜನೆ ಬಳಕೆಯಲ್ಲಿ ವಿಜಯನಗರ ಜಿಲ್ಲೆಯ ಹರಪನಹಳ್ಳಿ, ಹೂವಿನಹಡಗಲಿ ತಾಲೂಕು ಮುಂಚೂಣಿಯಲ್ಲಿದ್ದು, ಹಗರಿಬೊಮ್ಮನಹಳ್ಳಿ ಮತ್ತು ಕೊಟ್ಟೂರು ದ್ವೀತಿಯ ಸ್ವಾನದಲ್ಲಿವೆ.

    ಕೃಷಿ ಸಿಂಚಾಯಿ ಯೋಜನೆ ರೈತರಿಗೆ ವರದಾನವಾಗಿದೆ. ರೈತರು ಬೆಳೆಗೆ ಸ್ಪಿಂಕ್ಲರ್ ಬದಲು ಹೆಚ್ಚಾಗಿ ನೀರು ಹಾಯಿಸುತ್ತಿದ್ದಾರೆ. ಇದರಿಂದ ನೀರು ಹೆಚ್ಚು ಬಳಕೆಯಾಗುತ್ತದೆ ಮತ್ತು ಮಣ್ಣು ಸವಕಳಿಯಾಗುತ್ತದೆ. ಇದನ್ನು ತಡೆಯಲು ಯೋಜನೆಯಡಿ ದೊರಕುವ ಸ್ಪಿಂಕ್ಲರ್ ಸೆಟ್ ಪಡೆದು ಅಳವಡಿಸಿಕೊಳ್ಳಬೇಕು. ಇದರಿಂದ ಎರಡು ಎಕರೆ ಬದಲು ನಾಲ್ಕು ಎಕರೆಗೆ ನೀರುಣಿಸಬಹುದು.
    ಡಿ. ಶಾಮಸುಂದರ್
    ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ ಕೊಟ್ಟೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts