More

    ಕೋಟಂಬೈಲು ಅಣೆಕಟ್ಟು ಶೀಘ್ರ ಪೂರ್ಣ

    ಅನಂತ ನಾಯಕ್ ಮುದ್ದೂರು
    ಸಣ್ಣ ನೀರಾವರಿ ಇಲಾಖೆ ಮೂಲಕ ಉಡುಪಿ ಶಾಸಕ ಕೆ.ರಘುಪತಿ ಭಟ್ ಮತ್ತು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮುತುವರ್ಜಿಯಲ್ಲಿ ಐದು ಕೋಟಿ ರೂ. ವೆಚ್ಚದಲ್ಲಿ ಕೊಕ್ಕರ್ಣೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಕುದಿ ಗ್ರಾಮದ ಕೋಟಂಬೈಲು ಎಂಬಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿ ಭರದಿಂದ ಸಾಗಿದ್ದು ಮಾರ್ಚ್ ಅಂತ್ಯಕ್ಕೆ ಲಘುವಾಹನ ಸಂಚಾರಕ್ಕೆ ಮುಕ್ತವಾಗಲಿದೆ.

    ನಾಲ್ಕೂರು, ಕೊಕ್ಕರ್ಣೆ, ಚೆಗ್ರಿಬೆಟ್ಟು, ಕೆಂಜೂರು, ಬೈದೆಬೆಟ್ಟು ಸಂಪರ್ಕಿಸುವ ಅಣೆಕಟ್ಟಿನಲ್ಲಿ ಲಘು ವಾಹನಗಳು ಸಂಚರಿಸಲಿವೆ. ಕೊಕ್ಕರ್ಣೆ ಮತ್ತು ಹೆಗ್ಗುಂಜೆ ಗ್ರಾಮದ ಕೋಟಂಬೈಲು, ಶಿರೂರು ಕೋಟೆಹಾಡಿ, ಬಿಯಾಳಿ, ನುಕ್ಕೂರು ಈ ಭಾಗದ ನೂರಾರು ಎಕರೆ ಜಮೀನಿಗೆ ನೀರುಣಿಸಲು ಪೂರಕವಾದ ಸೇತುವೆ ಸಹಿತ ಅಣೆಕಟ್ಟು ಕೃಷಿಕರ ಕನಸು ನನಸು ಮಾಡಿದೆ. ಕಳೆದ ವರ್ಷ ಪ್ರಾರಂಭವಾದ ಕಿಂಡಿ ಅಣೆಕಟ್ಟು ಕಾಮಗಾರಿ ಪೂರ್ಣಗೊಂಡಿದ್ದು, ಸಂಪರ್ಕ ರಸ್ತೆ ಕಾಮಗಾರಿಗೆ ಕೃಷಿಕರ ಜಮೀನು ಇರುವುದರಿಂದ ವಿಳಂಬವಾಗುತ್ತಿದೆ.

    ಈ ಸೇತುವೆಯಿಂದಾಗಿ ಮಂದಾರ್ತಿ, ಶಿರೂರು, ಹೊಳೆಬಾಗಿಲು, ಮುದ್ದುಮನೆ ಸಂಪರ್ಕ ಸಮೀಪವಾಗಿದೆ. ಸೀತಾನದಿಯಲ್ಲಿ ನೀರಿನ ಹರಿವು ಕಡಿಮೆಯಾದ ತಕ್ಷಣ ನಿತ್ಯ ಓಡಾಟಕ್ಕೆ ಈ ಮಾರ್ಗ ಬಳಸಲಾಗುತ್ತಿತ್ತು. ಇದೀಗ ಸೇತುವೆ ನಿರ್ಮಾಣಗೊಂಡ ಪರಿಣಾಮ ಜನರಿಗೆ ಸರ್ವಋತು ಸಂಚಾರ ಸಾಧ್ಯವಾಗಲಿದೆ. ಕಿಂಡಿ ಅಣೆಕಟ್ಟಿನಿಂದ ಪರಿಸರದ ರೈತರಿಗೂ ಅನುಕೂಲವಾಗಲಿದೆ. ಎರಡೂ ಗ್ರಾಮದ ನೂರಾರು ಎಕರೆ ಕೃಷಿ ಭೂಮಿ ಹಸಿರಾಗಲಿದೆ. ಪ್ರತಿ ಮಳೆಗಾಲ ಮುಗಿದಾಗ ಕೃಷಿಗೆ ಸೀತಾನದಿಯ ದೊಡ್ಡ ದೊಡ್ಡ ಗುಂಡಿಗಳಲ್ಲಿ ಇದ್ದ ನೀರನ್ನೆ ಅವಲಂಬಿಸಿ ಹರಸಾಹಸಪಡುತ್ತಿದ್ದರು. ಈ ಭಾರಿ ನೂತನ ಅಣೆಕಟ್ಟು ನಿರ್ಮಾಣವಾಗುವುದರಿಂದ ಈ ತೊಂದರೆ ತಪ್ಪಲಿದೆ.
    ಈ ಕಿಂಡಿ ಅಣೆಕಟ್ಟು 17 ಪಿಲ್ಲರ್ ಹೊಂದಿದ್ದು, ಉದ್ದ 185 ಮೀಟರ್, ಸೇತುವೆಯ ಎರಡು ಕಡೆಗಳಲ್ಲಿ ಕಾಂಕ್ರೀಟ್ ವಾಲ್‌ಗಳನ್ನು ನಿರ್ಮಿಸಲಾಗಿದೆ. ಸ್ಲ್ಯಾಬ್ ಕಾಮಗಾರಿ ಕೂಡ ನಡೆದಿದೆ. ಕಿಂಡಿ ಅಣೆಕಟ್ಟಿನ ಮೇಲೆ ಲಘು ವಾಹನಗಳು ಸಂಚರಿಸಲು 12ಫೀಟ್ ಅಗಲದ ಕಾಂಕ್ರೀಟ್ ರಸ್ತೆ ಮಾಡಲಾಗಿದೆ.

    ಕಿಂಡಿ ಅಣೆಕಟ್ಟು ಮತ್ತು ಸಂಪರ್ಕ ಸೇತುವೆಗೆ ಜಾಗದ ಸಮಸ್ಯೆ ಇದ್ದು ಪಟ್ಟ ಜಾಗದಲ್ಲಿ ರಸ್ತೆ ನಿರ್ಮಿಸಲು ಜಮೀನು ನೀಡಲಾಗಿದೆ. ಎರಡೂ ಗ್ರಾಮದ ಜನರಿಗೆ ಪ್ರಯೋಜನವಾಗುವ ದೃಷ್ಟಿಯಿಂದ ಈ ಜಾಗದಲ್ಲಿದ್ದ ಫಲಭರಿತ ಅಡಕೆ ಹಾಗೂ ತೆಂಗಿನ ಮರಗಳನ್ನು ತೆರವುಗೊಳಿಸಿ ರಸ್ತೆ ನಿರ್ಮಾಣಕ್ಕೆ ಜಮೀನು ನೀಡಿದ್ದೇನೆ.

    ಪ್ರಮೋದ್ ಶೆಟ್ಟಿ ಕೋಟೆಹಾಡಿ ಶಿರೂರು ಸ್ಥಳೀಯರು

    ಕಿಂಡಿ ಅಣೆಕಟ್ಟಿನಲ್ಲಿ ನೀರು ಸಂಗ್ರಹಗೊಂಡಲ್ಲಿ ಸ್ಥಳೀಯ ರೈತರಿಗೆ ಸಹಕಾರಿಯಾಗಲಿದೆ. ಈ ಕಿಂಡಿ ಅಣೆಕಟ್ಟಿನ ಜವಾಬ್ದಾರಿ ಒಂದು ವರ್ಷದ ತನಕ ಇದ್ದು ನಂತರ ಇಲಾಖೆಗೆ ಹಸ್ತಾಂತರಿಸಲಾಗುವುದು. ಕಿಂಡಿ ಅಣೆಕಟ್ಟಿನ ಕಾರ್ಯ ಸಂಪೂರ್ಣ ಯಾಂತ್ರೀಕೃತವಾಗಿದೆ. ಇದಕ್ಕೆ ಹೆಚ್ಚುವರಿ ಒಂದು ಕೋಟಿ ರೂ. ನೆರವು ದೊರಕಿದೆ.

    ಉದಯ್ ಶೆಟ್ಟಿ ಪ್ರಾಜೆಕ್ಟ್ ಮ್ಯಾನೇಜರ್

    ಕಿಂಡಿ ಅಣೆಕಟ್ಟಿನ ಸಮೀಪದ ಕೃಷಿಕರ ಪಟ್ಟ ಜಾಗದಲ್ಲಿ ತರಕಾರಿ ಬೆಳೆಗಳು, ಅಡಕೆ ತೋಟ ಇರುವುದರಿಂದ ರಸ್ತೆ ನಿರ್ಮಿಸಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಕೃಷಿಕರೆಲ್ಲರೂ ಸೇರಿ ತಮ್ಮ ವ್ಯಾಪ್ತಿಗೆ ಬರುವ ಕೃಷಿ ಜಮೀನನ್ನು ರಸ್ತೆ ನಿರ್ಮಾಣಕ್ಕೆ ಬಿಟ್ಟು ಸಂಚಾರ ಸುಗಮವಾಗಲು ಅನುವು ಮಾಡಿಕೊಡುತ್ತೇವೆ.

    ಶೀನ ನಾಯ್ಕ ನಿಂಜೂರುಬೆಟ್ಟು ಸ್ಥಳೀಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts