More

    ಶಿಥಿಲಾವಸ್ಥೆಯಲ್ಲಿ ಕೋಟಿಗದ್ದೆ ಸೇತುವೆ

    ಶಶಿ ಈಶ್ವರಮಂಗಲ

    ಈಶ್ವರಮಂಗಲದಿಂದ ಪಂಚೋಡಿ, ಕರ್ನೂರು ಮೂಲಕವಾಗಿ ಗಾಳಿಮುಖಕ್ಕೆ ಸಂಪರ್ಕ ಕಲ್ಪಿಸುವ ಗಡಿನಾಡ ಅಂತಾರಾಜ್ಯ ಸಂಪರ್ಕ ರಸ್ತೆಯ ಕೋಟಿಗದ್ದೆ ಎಂಬಲ್ಲಿರುವ ಕಿರುಸೇತುವೆ ತೀರಾ ಶಿಥಿಲಾವಸ್ಥೆಗೆ ತಲುಪಿದೆ.

    ಕರ್ನೂರಿನಿಂದ ಗಾಳಿಮಖದ ತನಕ ಸುಮಾರು 1.5 ಕಿ.ಮೀ.ನಷ್ಟು ಭಾಗದಲ್ಲಿ ಸಂಪೂರ್ಣ ಹದಗೆಟ್ಟು ಸಂಚಾರಕ್ಕೆ ಅಯೋಗ್ಯವಾಗಿತ್ತು. ಹದಗೆಟ್ಟ ಈ ರಸ್ತೆ ಭಾಗ ಈಗ ಶಾಸಕರ 40 ಲಕ್ಷ ರೂ. ಅನುದಾನದಲ್ಲಿ ಅಭಿವೃದ್ಧಿಗೊಳ್ಳುತ್ತಿದೆ. ಆದರೆ ಕೋಟಿಗದ್ದೆಯ ಶಿಥಿಲ ಸೇತುವೆ ಅಭಿವೃದ್ಧಿಯಾಗದೆ ರಸ್ತೆ ಅಭಿವೃದ್ಧಿ ಅಪೂರ್ಣವೆನಿಸಿದೆ.

    ಕಿರುಸೇತುವೆಯ ಅಡಿಭಾಗದಲ್ಲಿ ಕಾಂಕ್ರಿಟ್ ಎದ್ದು ಹೋಗಿ ಕಬ್ಬಿಣದ ಸರಳುಗಳು ತುಕ್ಕು ಹಿಡಿದಿವೆ. ಮಳೆಗಾಲದಲ್ಲಿ ಸರಳುಗಳು ಕಿತ್ತು ಹೋಗಿ ನೀರು ಪಾಲಾಗುವ ಸಾಧ್ಯತೆಗಳಿವೆ. ಸೇತುವೆ ಕುಸಿದಲ್ಲಿ ಬಹಳಷ್ಟು ಜನಸಂಖ್ಯೆ ಇರುವ ಕರ್ನೂರು, ಗಾಳಿಮುಖ ವ್ಯಾಪ್ತಿಯ ಗಡಿನಾಡ ಮಂದಿಗೆ ಸಂಕಷ್ಟ ಎದುರಾಗಲಿದೆ.

    ಮೂರು ವರ್ಷದ ಹಿಂದೆಯೇ ಇದು ಅಪಾಯಕಾರಿ ಸ್ಥಿತಿಗೆ ತಲುಪಿತ್ತು. ಆ ವೇಳೆ ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಅನಿತಾ ಹೇಮನಾಥ ಶೆಟ್ಟಿ ಹಾಗೂ ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು. ಆದರೆ ಪ್ರಯೋಜನ ಶೂನ್ಯ. ವರ್ಷದಿಂದ ವರ್ಷಕ್ಕೆ ಸೇತುವೆ ಸ್ಥಿತಿ ಮತ್ತಷ್ಟು ಶಿಥಿಲವಾಗುತ್ತಿದೆ.

    ಸೇತುವೆ ಬಗ್ಗೆ ಜಿಲ್ಲಾಪಂಚಾಯಿತಿ ಇಂಜಿನಿರ್‌ಗಳಲ್ಲಿ ಪ್ರಶ್ನಿಸಿದಾಗ ಈ ರಸ್ತೆ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುತ್ತದೆ ಎಂದು ಕೈತೋರಿಸಿದ್ದಾರೆ. ಲೋಕೋಪಯೋಗಿ ಇಂಜಿನಿಯರ್‌ಗಳಲ್ಲಿ ಕೇಳಿದಾಗ ನಮಗೆ ಹಸ್ತಾಂತರವೇ ಆಗಿಲ್ಲ ಎಂದಿದ್ದಾರೆ.

    ಅಧಿಕ ಭಾರದ ಲಾರಿ ಸಂಚಾರ : ಗಾಳಿಮುಖ ಭಾಗದಲ್ಲಿ ಜಲ್ಲಿ ಕ್ರಷರ್ ಕಾರ್ಯಾಚರಿಸುತ್ತಿದ್ದು, ಇಲ್ಲಿಂದ ಈ ರಸ್ತೆಯಾಗಿ ಅಧಿಕ ಹೊರೆಯ ಜಲ್ಲಿ ಹೇರಿಕೊಂಡು ಟಿಪ್ಪರ್‌ಗಳಲ್ಲಿ ಸಾಗಾಟ ಮಾಡಲಾಗುತ್ತಿದೆ. ಇದೇ ರಸ್ತೆಯಾಗಿ ಮಡಿಕೇರಿ, ಮೈಸೂರು ಮೊದಲಾದೆಡೆ ಲಾರಿಗಳು ಓಡಾಡುತ್ತವೆ. ಕೇರಳದ ಪೊಲೀಸರ ಭಯದಿಂದಾಗಿ ಕಲ್ಲಿನ ಕ್ವಾರಿಯವರು ಈ ರಸ್ತೆಯನ್ನು ಬಳಸಿಕೊಳ್ಳುತ್ತಿದ್ದಾರೆ. ಅಕ್ರಮ ಮರಳು, ಕಲ್ಲು ಸಾಗಾಟವೂ ಇಲ್ಲಿಂದ ನಡೆಯುತ್ತಿದೆ.

    ಭಾರೀ ವಾಹನಗಳ ಸಂಚಾರ ನಿಷೇಧಕ್ಕೆ ಮನವಿ: ಅಧಿಕ ಭಾರವನ್ನು ತಾಳುವ ಸಾಮರ್ಥ್ಯ ಈ ಸೇತುವೆಗಿಲ್ಲ. ಹಾಗಾಗಿ ಇಲ್ಲಿಂದ ಭಾರೀ ವಾಹನಗಳ ಸಂಚಾರವನ್ನು ಸಂಪೂರ್ಣ ನಿಷೇಧಿಸಬೇಕು ಎಂದು ಕರ್ನೂರು ಭಾಗದ ನಿವಾಸಿಗಳು ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದಾರೆ.

    ಪಂಚೋಡಿ-ಕರ್ನೂರು-ಗಾಳಿಮುಖ ರಸ್ತೆಯನ್ನು ಜಿಲ್ಲಾ ಮುಖ್ಯ ರಸ್ತೆಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಈ ರಸ್ತೆಯು ಕೆಆರ್‌ಡಿಸಿಎಲ್ ವತಿಯಿಂದ ಈ ರಸ್ತೆಯ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ನಾವು ಈ ರಸ್ತೆಯನ್ನು ಲೋಕೋಪಯೋಗಿ ಇಲಾಖೆಗೆ ಹಸ್ತಾಂತರ ಮಾಡಿಕೊಡುತ್ತೇವೆ.
    ಸಂದೀಪ್ ಪೂಜಾರಿ,
    ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ಇಲಾಖೆಯ ಇಂಜಿನಿಯರ್

    ಈ ರಸ್ತೆಯನ್ನು ಕಳೆದ ಸಾಲಿನಲ್ಲಿ ಜಿಲ್ಲಾ ಮುಖ್ಯರಸ್ತೆಯಾಗಿ ಮೇಲ್ದರ್ಜೆಗೇರಿಸಲಾಗಿದ್ದರೂ ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ಇಲಾಖೆಯಿಂದ ನಮಗೆ ಹಸ್ತಾಂತರ ಆಗಿಲ್ಲ. ಈ ಬಗ್ಗೆ ಆದೇಶವೂ ಬಂದಿಲ್ಲ. ಹಸ್ತಾಂತರ ಆಗದೆ ಇರುವುದರಿಂದ ನಾವು ನಿರ್ವಹಣೆ ಮಾಡುವ ಆಗಿಲ್ಲ. ಸದ್ಯಕ್ಕೆ ಅವರೇ ನಿರ್ವಹಣೆ ಮಾಡಬೇಕು.
    ಬಾಲಕೃಷ್ಣ ಭಟ್, ಲೋಕೋಪಯೋಗಿ ಇಲಾಖೆಯ ಇಂಜಿನಿಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts