More

    ಕೊರಗ ಕಾಲನಿಗಿಲ್ಲ ಶುದ್ಧ ನೀರು, ಜೀವಜಲಕ್ಕಾಗಿ ಅಲೆದಾಟ, ಅರ್ಧಕ್ಕೆ ನಿಂತ ಮನೆ ಕಾಮಗಾರಿ

    -ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
    ಬೈಂದೂರು ತಾಲೂಕು ಹಕ್ಲಾಡಿ ಗ್ರಾಮದ ಬ್ರಹ್ಮೇರಿ ಕೊರಗ ಕಾಲನಿ ನಿವಾಸಿಗಳು ಮೂಲ ಅವಶ್ಯಕತೆಗಳಿಲ್ಲದೆ ಪರದಾಡುತ್ತಿದ್ದಾರೆ. ಸೌಕರ್ಯವಿಲ್ಲದ ಹರುಕಲು ಮನೆಗಳಲ್ಲಿ ವಾಸಿಸುವ ಇಲ್ಲಿನ ವಾಸಿಗಳು ಶುದ್ಧ ನೀರು ಬೇಕೆಂದರೆ ಪ್ರತಿದಿನ ಕಿಲೋ ಮೀಟರ್ ದೂರ ಬೆಟ್ಟ ಹತ್ತಿ ಇಳಿಯಬೇಕು.

    ಕಾಲನಿಯ ಎರಡು ಮನೆಯಲ್ಲಿ 20 ಜನ ವಾಸವಿದ್ದಾರೆ. ಅಷ್ಟೂ ಜನ ಒಂದೇ ಮನೆಯಲ್ಲಿ ಇದ್ದರು. ಒಂದು ವರ್ಷದ ಹಿಂದೆ ಮತ್ತೊಂದು ಮನೆಯೆದ್ದಿದ್ದು, ಅದನ್ನು ಮನೆ ಎನ್ನುವುದಕ್ಕಿಂತ ಗುಡಿಸಲು ಎನ್ನಬಹುದು. ಸೀರೆ ಕಟ್ಟಿ ಬಚ್ಚಲು ಮನೆ ಮಾಡಲಾಗಿದೆ. ಒಂದು ಮನೆಗೆ ವಿದ್ಯುತ್, ಶೌಚಗೃಹ ಇಲ್ಲ. ಕಾಲನಿ ಸಮೀಪದ ಕೊಳವೆ ಬಾವಿ ನೀರು ಕೆಟ್ಟ ವಾಸನೆ ಬರುತ್ತಿದ್ದು ಬಳಸಲಾಗುತ್ತಿಲ್ಲ.

    70 ವರ್ಷ ಹಿಂದೆ ನೂಜಾಡಿಯಿಂದ ಬಡಿಯಾ ಎಂಬುವರು ಬಂದು ಬ್ರಹ್ಮೇರಿಯಲ್ಲಿ ನೆಲೆಸಿದ್ದರು. ಅವರ ಕುಟುಂಬ ಬೆಳೆಯುತ್ತ ಮಕ್ಕಳು ಮೊಮ್ಮಕ್ಕಳು ಸೇರಿ 20ಕ್ಕೇರಿದೆ. ಮನೆ ಕೂಡ ಭದ್ರವಾಗಿಲ್ಲ. ನಾಲ್ಕು ವರ್ಷದ ಹಿಂದೆ ಐಟಿಡಿಪಿ ಮೂಲಕ ಮನೆ ಮಂಜೂರಾಗಿ ಗೋಡೆ ಏರಿದೆ.
    ಬ್ರಹ್ಮೇರಿ ಸರ್ವೇ ನಂಬರ್ 168ರಲ್ಲಿ ಕಾಲನಿಯಿದ್ದು, ಹಕ್ಕುಪತ್ರ ಸಿಕ್ಕಿಲ್ಲ. 10 ವರ್ಷದ ಹಿಂದೆ ವಿದ್ಯುತ್ ಬಂದಿದೆ. ಈ ಕುಟುಂಬ ಸದಸ್ಯರು ಕೃಷಿ ಕಾರ್ಮಿಕರು. ಹಿರಿಯರಲ್ಲಿ ಒಬ್ಬರು 5ನೇ ತರಗತಿ ಓದಿದ್ದು ಬಿಟ್ಟರೆ ಮತ್ತೆಲ್ಲರೂ ಅನಕ್ಷರಸ್ಥರು. ಮಕ್ಕಳಲ್ಲಿ 4ನೇ ತರಗತಿಯಿಂದ 10ನೇ ತರಗತಿ ತನಕ ಕಲಿಯುವವರಿದ್ದಾರೆ. ಶಾಲೆಗೆ ಹೋಗುವ ದಾರಿಯಲ್ಲಿ ಅಡ್ಡ ಹಳ್ಳ ಇರುವುದರಿಂದ ಮಳೆಗಾಲದಲ್ಲಿ ಪಾಲಕರು ದಾಟಿಸಿ ಮತ್ತೆ ಸಂಜೆ ಕರೆತರಬೇಕಿರುವುದರಿಂದ ಕೂಲಿಗೂ ಹೋಗಲಾಗುತ್ತಿಲ್ಲ.

    ಬ್ರಹ್ಮೇರಿ ಕೊರಗ ಕಾಲನಿ ನೀರಿನ ಸಮಸ್ಯೆ ಪರಿಹಾರಕ್ಕೆ ಏನು ಮಾಡಬಹುದು ಎಂಬ ಬಗ್ಗೆ ಚಿಂತಿಸಲಾಗುತ್ತದೆ. ಕಾಲನಿ ಅಭಿವೃದ್ಧಿಗೆ ಐಟಿಡಿಪಿಯಲ್ಲಿ ಹಣದ ಸಮಸ್ಯೆ ಇಲ್ಲ. ಮನೆ ಏಕೆ ಅರ್ಧಕ್ಕೆ ನಿಂತಿದೆ ಎಂಬ ಮಾಹಿತಿ ಪಡೆದು ಕಾಲನಿಗೆ ಎಲ್ಲ ಸೌಲಭ್ಯ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುತ್ತದೆ.
    -ಜಿ.ಜಗದೀಶ್, ಜಿಲ್ಲಾಧಿಕಾರಿ, ಉಡುಪಿ

    ಕೊಳವೆ ಬಾವಿ ನೀರು ಕಿಲುಬಾಗಿ ನೀರು ವಾಸನೆ ಬರುತ್ತಿದ್ದು, ಕುಡಿಯಲಾಗದು. ಈ ನೀರು ಬಳಸಿದ ಅಡುಗೆ ಕೂಡ ಹಾಳಾಗುತ್ತದೆ. ನಾವೇ ಬಾವಿ ತೆಗೆದಿದ್ದು, ಶಿಲೆಕಲ್ಲು ಬಂದಿದ್ದರಿಂದ ಆಳ ಮಾಡಲಾಗಲಿಲ್ಲ. ಅರ್ಧಂಬರ್ಧ ಆದ ಬಾವಿಯಲ್ಲಿ ನೀರಿರುವಷ್ಟು ದಿನ ಸೋಸಿ ಬಳಸುತ್ತೇವೆ. ಇರುವ ಮನೆ ಬೀಳುವ ಹಂತದಲ್ಲಿದೆ. ನೀರಿನ ಸಮಸ್ಯೆ ಪರಿಹಾರ ಮಾಡದಿದ್ದರೆ ಗ್ರಾಪಂ ಮುಂದೆ ಬಿಡಾರ ಹೂಡುತ್ತೇವೆ.
    – ಬೇಬಿ, ಬ್ರಹ್ಮೇರಿ ಕಾಲನಿ ನಿವಾಸಿ

    ಕೂಲಿ ಕೆಲಸ ಮಾಡುವ ನಮಗೆ ನೀರು ಹೊರೋದೇ ಸಮಸ್ಯೆಯಾಗಿ ಕೆಲಸಕ್ಕೆ ಹೋಗೋದಕ್ಕೆ ತಡವಾಗುತ್ತದೆ. ಕೊಳವೆ ಬಾವಿ ಪೈಪ್ ಬದಲಿಸಿ, ಫಿಲ್ಟರ್ ಅಳವಡಿಸಿದರೆ ಸಮಸ್ಯೆ ಪರಿಹಾರ ಆಗಬಹುದು. ಸಮೀಪದ ಹಳ್ಳಕ್ಕೆ ಕಾಲುಸಂಕ ಮಾಡಿಕೊಡಬೇಕು.
    – ಸಂಜು, ಕಾಲನಿ ನಿವಾಸಿ

    ಅನುದಾನವಿದ್ದರೂ ಅನುಷ್ಠಾನವೇಕಿಲ್ಲ?: ಕಾಲನಿ ಮಕ್ಕಳು ನೂಜಾಡಿ ಹಾಗೂ ಪ್ರೌಢ ಶಿಕ್ಷಣಕ್ಕೆ ಹಕ್ಲಾಡಿ ಶಾಲೆಗೆ ಹೋಗಬೇಕು. ಕಾಲನಿ ಅಭಿವೃದ್ಧಿ ಹೆಸರಲ್ಲಿ ಕೊರಗರೇ ಇಲ್ಲದ ಕಡೆ ಸಿಮೆಂಟ್ ರಸ್ತೆ ಆಗುತ್ತಿದ್ದರೂ ನಮ್ಮ ಕಾಲನಿಗೆ ಏಕೆ ಆಗೋದಿಲ್ಲ ಎಂದು ಕಾಲನಿ ವಾಸಿಗಳು ಪ್ರಶ್ನಿಸುತ್ತಾರೆ. ಕಾಲನಿಯಲ್ಲಿ ವಿಶೇಷ ಹುಡುಗನಿದ್ದು, ಆತನಿಗೆ ವೈದ್ಯಕೀಯ ನೆರವು, ಶಿಕ್ಷಣ ಕೂಡ ನೀಡಬೇಕಿದೆ. ಕಾಲನಿಗೆ ಸುಸಜ್ಜಿತ ಎರಡು ಮನೆ, ಸಂಪರ್ಕ ವ್ಯವಸ್ಥೆ, ಜಾಗದ ಹಕ್ಕುಪತ್ರ, ಶೌಚಗೃಹ ಅವಶ್ಯವಿದೆ. ಕೊರಗರಿಗಾಗಿಯೇ ಸಾಕಷ್ಟು ಯೋಜನೆ ಅನುದಾನವಿದ್ದರೂ ಕೊರಗರ ಬದುಕು ಸುಧಾರಿಸದಿರುವುದು ವಿಪರ್ಯಾಸ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts