More

    ಯತ್ನಾಳ್, ಕಾಶಪ್ಪನವರ್ ಕ್ಷಮೆ ಕೇಳಲಿ: ಕೊಪ್ಪಳದಲ್ಲಿ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರತಿಭಟನಾ ಮೆರವಣಿಗೆ

    ಕೊಪ್ಪಳ: ಸಮುದಾಯದ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಶಾಸಕ ಬಸನಗೌಡ ಯತ್ನಾಳ್, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ನಡೆ ಖಂಡಿಸಿ ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಸೋಮವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

    ಸಮುದಾಯದ ಮುಖಂಡ ಗವಿಸಿದ್ದಪ್ಪ ಕೊಪ್ಪಳ ಮಾತನಾಡಿ, ನಾವು ಶರಣ ಸಂಸ್ಕೃತಿ ಅನುಸರಿಸುವವರು. ಯಾರನ್ನೂ ದ್ವೇಷಿಸಲ್ಲ. ಆದರೆ, ಶಾಸಕ ಬಸನಗೌಡ ಯತ್ನಾಳ್, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಮಾತನಾಡುವಾಗ, ಬಣಜಿಗರು ಮೋಸಗಾರರು, ಸುಳ್ಳು ಹೇಳುವವರು, ಇನ್ನೊಂದು ಸಮುದಾಯಕ್ಕೆ ಅನ್ಯಾಯ ಮಾಡಿದವರೆಂದು ದೂಷಿಸಿದ್ದಾರೆ. ದೇಶಾದ್ಯಂತ ಭಾರತ್ ಜೋಡೋ ಮಾಡುತ್ತಿರುವ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಕಾಶಪ್ಪನವರ್‌ಗೆ ಬುದ್ಧಿ ಹೇಳಬೇಕು. ಮಾತೆತ್ತಿದರೆ ನಮ್ಮ ಧಮ್ ತೋರಿಸುತೇವೆ ಎನ್ನುವ ಸಿಎಂ ಬಸವರಾಜ ಬೊಮ್ಮಾಯಿ, ತಮ್ಮದೇ ಪಕ್ಷದ ಶಾಸಕ ಒಂದು ಸಮುದಾಯವನ್ನು ನಿಂದಿಸುತ್ತಿದ್ದರೂ ಸುಮ್ಮನಿರುವ ಬದಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿದರು.

    ಸಂಘದ ರಾಜ್ಯಾಧ್ಯಕ್ಷ ಅಂದಪ್ಪ ಜವಳಿ ಮಾತನಾಡಿ, ಕೆಲ ವರ್ಷಗಳ ಹಿಂದೆಯೂ ಸಮುದಾಯವನ್ನು ನಿಂದಿಸಿದ್ದರು. ಆಗಲೂ ಎಚ್ಚರಿಕೆ ನೀಡಿದ್ದೆವು. ಆದರೂ, ಅವರಿಬ್ಬರು ಸುಧಾರಿಸುತ್ತಿಲ್ಲ. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಹೋರಾಟಕ್ಕೆ ಬಂದಾಗ ಶ್ರೀಗಳನ್ನು ನಾವು ಸ್ವಾಗತಿಸಿ, ಬೆಂಬಲಿಸಿದ್ದೇವೆ ಎಂದರು.

    ತಾಲೂಕು ಮಹಿಳಾ ಘಟಕ ಅಧ್ಯಕ್ಷೆ ಅಪರ್ಣಾ ಬಳ್ಳೊಳ್ಳಿ ಮಾತನಾಡಿ, ನಾವು ಶಾಂತಿ ಪ್ರಿಯರು. ಹಾಗಂತ ಸಮುದಾಯ ನಿಂದಿಸಿದರೆ ಸಹಿಸುವುದಿಲ್ಲವೆಂದರು. ನಗರದ ಕೋಟೆ ಮಹೇಶ್ವರ ದೇವಸ್ಥಾನದಿಂದ ಅಶೋಕ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಯತ್ನಾಳ್, ಕಾಶಪ್ಪನವರ್ ವಿರುದ್ಧ ಧಿಕ್ಕಾರ ಕೂಗಿದರು. ಬಳಿಕ ತಹಸೀಲ್ದಾರ್ ಅಮರೇಶ ಬಿರಾದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಸಂಘದ ಜಿಲ್ಲಾಧ್ಯಕ್ಷ ವಿಶ್ವನಾಥ ಬಳ್ಳೊಳ್ಳಿ, ಪ್ರಧಾನ ಕಾರ್ಯದರ್ಶಿ ಬಸವರಾಜ ಕಮಲಾಪುರ, ತಾಲೂಕು ಅಧ್ಯಕ್ಷ ವೀರಣ್ಣ ಬುಳ್ಳಾ, ನಗರ ಅಧ್ಯಕ್ಷ ಅರವಿಂದ ಅಗಡಿ, ರಾಜೇಶ ವಾಲಿ, ಸುಧಾ ಶೆಟ್ಟರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts