More

    ಪರಿಸರಸ್ನೇಹಿ ಗಣೇಶ ಪ್ರತಿಷ್ಠಾಪನೆಗೆ ಆದ್ಯತೆ; ಯಲಬುರ್ಗಾ ಡಿವೈಎಸ್ಪಿ ಎಸ್.ಎಚ್.ಸುಬೇದಾರ ಸಲಹೆ

    ಯಲಬುರ್ಗಾ: ಪ್ರತಿಯೊಬ್ಬರೂ ಗೌರಿ ಗಣೇಶ ಹಬ್ಬವನ್ನು ಶಾಂತಿ-ಸೌಹಾರ್ದತೆಯಿಂದ ಆಚರಿಸಬೇಕು ಎಂದು ಡಿವೈಎಸ್ಪಿ ಎಸ್.ಎಚ್.ಸುಬೇದಾರ ಹೇಳಿದರು.

    ಗೌರಿ ಗಣೇಶ ಹಬ್ಬದ ನಿಮಿತ್ತ ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಮಾತನಾಡಿ, ಹಬ್ಬ ಹರಿದಿನಗಳನ್ನು ಭಕ್ತಿ-ಭಾವ, ಶಾಂತಿ ಮತ್ತು ಸಹಬಾಳ್ವೆ ಆಚರಣೆಗೆ ಯಲಬುರ್ಗಾ ಪಟ್ಟಣ ಜಿಲ್ಲೆಗೆ ಮಾದರಿ. ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಗಣೇಶಮೂರ್ತಿ ಪ್ರತಿಷ್ಠಾಪಿಸುವ ಮೂಲಕ ನಿಯಮ ಪಾಲಿಸಬೇಕು ಎಂದರು.

    ಹಬ್ಬಗಳ ನೆಪದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ಬಾರದಂತೆ ನಡೆದುಕೊಳ್ಳಬೇಕು. ಶಾಂತಿ ಸುವ್ಯವಸ್ಥೆಯಿಂದ ಹಬ್ಬ ಆಚರಿಸಿ, ಇತರರಿಗೆ ಮಾದರಿಯಾಗಬೇಕು. ಕಾನೂನು ಮೀರಿದರೆ ಮುಲ್ಲಾಜಿಲ್ಲದೆ ಕ್ರಮ ಜರುಗಿಸಲಾಗುವುದೆಂದು ಎಚ್ಚರಿಸಿದರು.

    ಸಿಪಿಐ ವೀರಾರಡ್ಡಿ ಮಾತನಾಡಿ, ಪಟ್ಟಣ ಸೇರಿ ತಾಲೂಕಿನಲ್ಲಿ ಈ ಬಾರಿ ಗೌರಿ ಗಣೇಶ ಹಬ್ಬದ ನಿಮಿತ್ತ ಮೂರ್ತಿ ಪ್ರತಿಷ್ಠಾಪನೆಗೆ ಮುಂದಾಗುವ ಸಂಘ-ಸಂಸ್ಥೆಗಳು ಕಡ್ಡಾಯವಾಗಿ ಸಂಬಂಧಿಸಿದ ಇಲಾಖೆಯಿಂದ ಅನುಮತಿ ಪಡೆಯಬೇಕು. ಪಿಒಪಿ ಗಣೇಶ ನಿಷೇಧಿಸಲಾಗಿದ್ದು, ಪರಿಸರಸ್ನೇಹಿ ಗಣೇಶ ಪ್ರತಿಷ್ಠಾಪಿಸಬೇಕು. ಮೂರ್ತಿ ಪ್ರತಿಷ್ಠಾಪಿಸುವ ಸ್ಥಳದಲ್ಲಿ ಸಿಸಿ ಕ್ಯಾಮರ ಅಳವಡಿಕೆ ಕಡ್ಡಾಯ. ಸ್ಥಳೀಯ ಸಂಸ್ಥೆಗಳು ಸೂಚಿಸುವ ಸ್ಥಳದಲ್ಲಿ ನಿಗದಿತ ವೇಳೆಗೆ ಮೆರವಣಿಗೆ ಮುಖಾಂತರ ಮೂರ್ತಿ ವಿಸರ್ಜಿಸಬೇಕೆಂದರು.

    ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಪಿಎಸ್‌ಐ ಶಿವಕುಮಾರ ಮುಗ್ಗಳ್ಳಿ, ಪ್ರಮುಖರಾದ ವೀರಣ್ಣ ಹುಬ್ಬಳ್ಳಿ, ಅಕ್ತರ್‌ಸಾಬ್ ಖಾಜಿ, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಕಳಕಪ್ಪ ತಳವಾರ, ಸದಸ್ಯ ಬಸಲಿಂಗಪ್ಪ ಕೊತ್ತಲ್, ಅಧಿಕಾರಿಗಳಾದ ರಮೇಶ ಚಿಣಗಿ, ಖಾಜಾ ಹುಸೇನ್, ಮಹೇಶ್ ಹುಬ್ಬಳ್ಳಿ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts