More

    ವೈಟ್ ಬೋರ್ಡ್ ಟ್ಯಾಕ್ಸಿ ವಿರುದ್ಧ ಕ್ರಮ ಕೈಗೊಳ್ಳಿ; ಚಾಲಕರ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಒತ್ತಾಯ

    ಕೊಪ್ಪಳ: ಕೆಲವರು ವೈಟ್ ಬೋರ್ಡ್ ಟ್ಯಾಕ್ಸಿಯನ್ನು ಬಾಡಿಗೆ ನೀಡುವ ಮೂಲಕ ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೂ ಕ್ರಮ ಕೈಗೊಳ್ಳುತ್ತಿಲ್ಲ. ಇನ್ನು ಮುಂದಾದರೂ ಕ್ರಮ ಜರುಗಿಸದಿದ್ದಲ್ಲಿ ಹೋರಾಟ ನಡೆಸಲಾಗುವುದೆಂದು ಕರ್ನಾಟಕ ಟ್ಯಾಕ್ಸಿ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಹೇಳಿದರು.

    ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ವೈಟ್ ಬೋರ್ಡ್ ಟ್ಯಾಕ್ಸಿಗಳು ಹೆಚ್ಚಾಗುತ್ತಿವೆ. ಈ ಟ್ಯಾಕ್ಸಿಗಳನ್ನು ವೈಯಕ್ತಿಕ ಬಳಕೆಗೆ ಮಾತ್ರ ಉಪಯೋಗಿಸಬೇಕು. ಬಾಡಿಗೆ ಓಡಿಸುವಂತಿಲ್ಲ. ಆದರೆ, ಕೆಲವರು ದುಡ್ಡಿನ ಆಸೆಗೆ ಹೀಗೆ ಮಾಡುತ್ತಿದ್ದಾರೆ. ಅವರಿಗೆ ಬಾಡಿಗೆ ಓಡಿಸುವ ಉದ್ದೇಶವಿದ್ದಲ್ಲಿ ಯಲ್ಲೋ ಬೋರ್ಡ್ ವಾಹನ ಖರೀದಿಸಿ ಓಡಿಸಲಿ. ನಮ್ಮದೇನು ಅಭ್ಯಂತರವಿಲ್ಲ. ಈ ಬಗ್ಗೆ ಸಾರಿಗೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೂ, ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.

    ಒಂದೊಮ್ಮೆ ವೈಟ್ ಬೋರ್ಡ್ ಗಾಡಿ ಅಪಘಾತವಾದಲ್ಲಿ ಪ್ರಯಾಣಿಕರಿಗೆ ಯಾವುದೇ ವಿಮೆ ಸೌಲಭ್ಯ ಸಿಗುವುದಿಲ್ಲ. ರಾಜ್ಯ ಸರ್ಕಾರಕ್ಕೆ ತೆರಿಗೆ ನಷ್ಟವಾಗಲಿದೆ. ನಮಗೆಲ್ಲ ನಷ್ಟವಾಗುತ್ತದೆ. ಸಾರ್ವಜನಿಕರ ಜೀವನದೊಂದಿಗೆ ಚೆಲ್ಲಾಟವಾಡಿದಂತಾಗಲಿದೆ. ಕೂಡಲೇ ಸಾರಿಗೆ ಅಧಿಕಾರಿಗಳು ಎಚ್ಚೆತ್ತು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿ ಬಳಿಕ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಪದಾಧಿಕಾರಿಗಳಾದ ಬಸವರಾಜ ನಾಯಕ, ವಸಂತ ಕುಮಾರ, ಮಹಾಂತೇಶ, ಮಂಜುನಾಥ ಹುಗ್ಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts