More

    ಸಿಂಗಟಾಲೂರು ಏತ ನೀರಾವರಿ ಅನುಷ್ಠಾನಕ್ಕೆ ಸಭೆ: 23ರಂದು ಮೀಟಿಂಗ್ ಕರೆದ ಸಿಎಂ ಬಸವರಾಜ ಬೊಮ್ಮಾಯಿ

    ಕೊಪ್ಪಳ: ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಆರಂಭ ಹಾಗೂ ಸಿಂಗಟಾಲೂರು ಏತ ನೀರಾವರಿ ಅನುಷ್ಠಾನ ಕುರಿತು ಜ.23ರಂದು ಸಿಎಂ ಬಸವರಾಜ ಬೊಮ್ಮಾಯಿ ಬೆಂಗಳೂರಿನಲ್ಲಿ ವಿಶೇಷ ಸಭೆ ಕರೆದಿದ್ದು, ದಶಕಗಳ ಬೇಡಿಕೆ ಈಡೇರುವುದೇ ಎಂಬ ಕುತೂಹಲ ಮೂಡಿಸಿದೆ.

    ಜಿಲ್ಲಾ ಕೇಂದ್ರ ಕೊಪ್ಪಳ ತಾಲೂಕು ಬಹುಪಾಲು ಮಳೆಯಾಶ್ರಿತ ಪ್ರದೇಶವಾಗಿದ್ದು ಪಕ್ಕದಲ್ಲೇ ತುಂಗಭದ್ರಾ ಜಲಾಶಯವಿದ್ದರೂ, ನೀರಾವರಿ ಸೌಲಭ್ಯ ಕಂಡಿಲ್ಲ. ಸಿಂಗಟಾಲೂರು ಏತ ನೀರಾವರಿ ಮೂಲಕ ನೀರಾವರಿ ಸೌಕರ್ಯ ಕಲ್ಪಿಸುವುದಾಗಿ ಹೇಳಿ ಎರಡು ದಶಕಗಳ ಹಿಂದೆ ಯೋಜನೆಗೆ ಚಾಲನೆ ನೀಡಲಾಗಿದೆ. 8 ವರ್ಷಗಳ ಹಿಂದೆ ಬಲಭಾಗದ ಹೂವಿನಹಡಗಲಿ ತಾಲೂಕು ನೀರಾವರಿಗೆ ಒಳಪಟ್ಟಿದೆ. ಆದರೆ, ಎಡ ಭಾಗದ ಗದಗ ಜಿಲ್ಲೆಯ ಮುಂಡರಗಿ ಹಾಗೂ ಕೊಪ್ಪಳ ತಾಲೂಕುಗಳಿಗೆ ಈವರೆಗೂ ಹನಿ ನೀರು ಬಂದಿಲ್ಲ. ಕೇವಲ ಕಾಲುವೆ ಮೂಲಕ ನದಿಗೆ ನೀರು ಹರಿಸಲಾಗುತ್ತಿದೆ. ಮೊದಲು ಕಾಲುವೆ ಮೂಲಕ ನೀರಾವರಿ ಮಾಡಲು ಯೋಜನೆ ರೂಪುಗೊಂಡಿತ್ತು. ಬಳಿಕ ಸೂಕ್ಷ್ಮನೀರಾವರಿಯಾಗಿ ಬದಲಾವಣೆ ಮಾಡಿದ ಕಾರಣ ಯೋಜನೆಗೆ ಹಿನ್ನಡೆಯಾಗಿದೆ.

    2018ರಲ್ಲಿ ಉಡಾನ್ ಯೋಜನೆಗೆ ಜಿಲ್ಲೆ ಆಯ್ಕೆಯಾಗಿತ್ತು. ಕೊಪ್ಪಳದಿಂದ ಹೈದರಾಬಾದ್, ಬೆಂಗಳೂರು ಹಾಗೂ ಗೋವಾ ಮಾರ್ಗವಾಗಿ ವಿಮಾನ ಹಾರಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಎಂಎಸ್‌ಪಿಎಲ್ ಕಂಪನಿಯು ತನ್ನ ವಿಮಾನ ನಿಲ್ದಾಣ ನೀಡದ ಕಾರಣ ಯೋಜನೆ ಅನುಷ್ಠಾನವಾಗಲಿಲ್ಲ. ಕುಕನೂರು ತಾಲೂಕಿನ ಭಾನಾಪುರ ಬಳಿ ಆತ್ಮ ನಿರ್ಭರ ಭಾರತ ಯೋಜನೆಯಡಿ ದೇಶದ ಮೊದಲ ಆಟಿಕೆ ಕ್ಲಸ್ಟರ್ ಆರಂಭವಾಗುತ್ತಿದ್ದು, ವಿಮಾನ ಯಾನ ಸೇವೆ ಅತ್ಯವಶ್ಯವಾಗಿದೆ. ಹೀಗಾಗಿ ಸರ್ಕಾರದಿಂದಲೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.

    ಕಳೆದ ನವೆಂಬರ್‌ನಲ್ಲಿ ನಡೆದ ಎಂಎಲ್ಸಿ ಚುನಾವಣೆಯಲ್ಲಿ ಪ್ರಚಾರಕ್ಕೆಂದು ಜಿಲ್ಲೆಗೆ ಆಗಮಿಸಿದ್ದ ಸಿಎಂ ಬೊಮ್ಮಾಯಿಗೆ, ಜಿಲ್ಲೆಯ ನೀರಾವರಿ ಹಾಗೂ ವಿಮಾನ ನಿಲ್ದಾಣ ಬೇಡಿಕೆ ಈಡೇರಿಸುವಂತೆ ಸಂಸದ ಸಂಗಣ್ಣ ಕರಡಿ ಒತ್ತಾಯಿಸಿದ್ದರು. ಪ್ರತಿಕ್ರಿಯಿಸಿದ್ದ ಸಿಎಂ, ಸಭೆ ಕರೆದು ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಅದರಂತೆ ಜ.23ರಂದು ವಿಧಾನ ಸೌಧದಲ್ಲಿ ವಿಶೇಷ ಸಭೆ ಕರೆದಿದ್ದು, ಉಸ್ತುವಾರಿ ಸಚಿವ ಹಾಲಪ್ಪ ಆಚಾರ್, ಸಂಸದ ಸಂಗಣ್ಣ ಕರಡಿ, ಶಾಸಕರಾದ ಅಮರೇಗೌಡ ಬಯ್ಯಪುರ, ರಾಘವೇಂದ್ರ ಹಿಟ್ನಾಳ್, ಪರಣ್ಣ ಮುನವಳ್ಳಿ ಹಾಗೂ ಬಸವರಾಜ ದಢೇಸುಗೂರುಗೆ ಭಾಗಿಯಗಲು ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ ಜಿಲ್ಲೆಯ ಬಹುಬೇಡಿಕೆಗಳು ಈಡೇರುವ ಭರವಸೆ ಹೆಚ್ಚಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts