More

    ನದಿ ಪಾತ್ರದ ಗ್ರಾಮಗಳಿಗೆ ನೆರೆ ಭೀತಿ

    ಸಿದ್ದಾಪುರ: ತುಂಗಭದ್ರಾ ಜಲಾಶಯದಿಂದ 1.70 ಲಕ್ಷ ಕ್ಯೂಸೆಕ್ ನೀರು ನದಿಗೆ ಬಿಟ್ಟ ಪರಿಣಾಮ ಹೋಬಳಿ ವ್ಯಾಪ್ತಿಯ ವಿವಿಧ ಗ್ರಾಮಗಳ ಜಮೀನುಗಳು ಜಲಾವೃತವಾಗಿವೆ.
    ಕಕ್ಕರಗೋಳ, ನಂದಿಹಳ್ಳಿ, ಜಮಾಪುರ, ಬೆನ್ನೂರು, ಶಾಲಿಗನೂರು ಸೇರಿ ಇತರ ಗ್ರಾಮಗಳಲ್ಲಿ ನದಿ ಉಕ್ಕಿ ಹರಿಯುತ್ತಿದ್ದು, ನೆರೆ ಭೀತಿ ಆವರಿಸಿದೆ. ಗ್ರಾಮಗಳಲ್ಲಿನ ರೈತರ ಜಮೀನುಗಳಿಗೆ ಸಾಕಷ್ಟು ನೀರು ಹೊಕ್ಕಿದ್ದು, ಭತ್ತದ ಬೆಳೆ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಕಳೆದೆರಡು ದಿನಗಳಿಂದ ನೀರಿನ ಪ್ರಮಾಣ ಕಡಿಮೆಯಾಗದ ಕಾರಣ ಈಗಾಗಲೇ ನಾಟಿ ಮಾಡಿದ ಭತ್ತದ ಸಸಿ ಗದ್ದೆಯಲ್ಲಿಯೇ ಕೊಳೆಯುತ್ತಿದೆ.

    ಜಮೀನು ಹದಗೊಳಿಸುವುದು, ಸಸಿ ಮಡಿ ಸಿದ್ಧತೆ, ಯಂತ್ರೋಪಕರಣಗಳ ಬಳಕೆ, ಭತ್ತ ನಾಟಿ, ಬೆಳೆ ನಿರ್ವಹಣೆಗೆ ರಸಗೊಬ್ಬರ ಸಿಂಪಡನೆ ಸೇರಿ ಇತರ ಕೃಷಿ ಚಟುವಟಿಕೆಗಳಿಗೆ ರೈತರು ಸಾವಿರಾರು ರೂ. ವ್ಯಯಿಸಿದ್ದು, ನಷ್ಟ ಅನುಭವಿಸುವಂತಾಗಿದೆ. ನದಿಗೆ ಇನ್ನೂ ಹೆಚ್ಚಿನ ನೀರು ಬಿಡುವ ಸಾಧ್ಯತೆ ಇದ್ದು, ರೈತರು ಪಂಪ್‌ಸೆಟ್‌ಗಳನ್ನು ಬೇರೆಡೆಗೆ ಸ್ಥಳಾಂತರಿಸುತ್ತಿದ್ದಾರೆ. ನದಿಯ ಆರ್ಭಟ ದಿನ ಕಳೆದಂತೆ ಬದಲಾಗುತ್ತಿರುವುದರಿಂದ ರೈತರಿಗೆ ದಿಕ್ಕು ತೋಚದಂತಾಗಿದೆ. ಬೆನ್ನೂರು ಗ್ರಾಮದ ಹೊಳೆ ಬಸವೇಶ್ವರ ದೇವಸ್ಥಾನ ಮುಳುಗಡೆಯಾಗಿದೆ. ನದಿ ಪಾತ್ರದ ಇತರ ಗ್ರಾಮಗಳಲ್ಲೂ ಸಹ ನೀರು ನುಗ್ಗುವ ಭಯ ಜನರನ್ನು ಕಾಡುತ್ತಿದೆ.

    ತಹಸೀಲ್ದಾರ್ ಭೇಟಿ, ಪರಿಶೀಲನೆ: ನದಿ ಪಾತ್ರದ ಹಳ್ಳಿಗಳ ರೈತರ ಜಮೀನುಗಳಿಗೆ ನದಿ ನೀರು ನುಗ್ಗಿ ಭತ್ತದ ಬೆಳೆ ಹಾನಿಗೊಳಗಾಗಿವೆ. ಈ ಹಿನ್ನೆಲೆಯಲ್ಲಿ ಬೆನ್ನೂರು ಗ್ರಾಮಕ್ಕೆ ತಹಸೀಲ್ದಾರ್ ಎಂ.ಬಸವರಾಜ ಗುರುವಾರ ಭೇಟಿ ನೀಡಿ, ಪರಿಶೀಲಿಸಿದರು ಸೂಕ್ತ ಪರಿಹಾರ ಕೊಡಿಸುವಂತೆ ರೈತರು ಮನವಿ ಮಾಡಿದರು. ಉಪ ತಹಸೀಲ್ದಾರ್ ಪ್ರಕಾಶ್ ನಾಯಕ, ಕಂದಾಯ ಇಲಾಖೆ ಅಧಿಕಾರಿ ಮರುಳಸಿದ್ದಪ್ಪ ಇತರರಿದ್ದರು. ಬೆನ್ನೂರಿನಲ್ಲಿ 119 ಎಕರೆ, ಶಾಲಿಗನೂರು 20, ಕಕ್ಕರಗೋಳ 6.60, ನಂದಿಹಳ್ಳಿ 18, ಕುಂಟೋಜಿ 36, ಮುಸ್ಟೂರು 130 ಎಕರೆ ಭತ್ತದ ಬೆಳೆ ಹಾನಿಗೊಳಗಾಗಿದೆ.

    ತುಂಗಭದ್ರಾ ಜಲಾಶಯದಿಂದ ಅಪಾರ ಪ್ರಮಾಣದ ನೀರು ಜಮೀನಿಗೆ ನುಗ್ಗಿದ್ದರಿಂದ ಭತ್ತ ಹಾನಿಗೊಳಗಾಗಿದೆ. ಎಕರೆಗೆ ಈಗಾಗಲೇ 20-25 ಸಾವಿರ ರೂ. ವ್ಯಯಿಸಲಾಗಿದೆ. ಬೆಳೆ ವಿಮೆ ಸಹ ಮಾಡಿಸಲಾಗಿದೆ. ಆದರೆ, ಇನ್ಶುರೆನ್ಸ್ ಕಂಪನಿಗಳು ರೈತರನ್ನು ಲೆಕ್ಕಕ್ಕಿಲ್ಲ ಎನ್ನುವಂತೆ ನೋಡುತ್ತಿವೆ. ಜಿಲ್ಲಾಡಳಿತ ಗಂಭೀರ ಚಿಂತನೆ ನಡೆಸಿ, ಬೆಳೆ ವಿಮೆ ನೀಡದ ಕಂಪನಿಗಳ ವಿರುದ್ಧ ಕ್ರಮಕೈಗೊಳ್ಳಬೇಕು. ಸರ್ಕಾರ ರೈತರ ಸಮಸ್ಯೆ ಆಲಿಸಬೇಕು.
    ಬಸವರಾಜ ಎಸ್.

    ರೈತ, ಬೆನ್ನೂರು

    ತುಂಗಭದ್ರಾ ನದಿ ಪಾತ್ರದ ಗ್ರಾಮಗಳ ಜನರಿಗೆ ಸಮಸ್ಯೆಯಾಗಿದೆ. ರೈತರ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಗೊಳಗಾಗಿದ್ದು, ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಬೆಳೆಹಾನಿಯ ವಾಸ್ತವ ವರದಿಯನ್ನು ಜಿಲ್ಲಾಡಳಿತಕ್ಕೆ ಶೀಘ್ರವೇ ಸಲ್ಲಿಸಲಾಗುವುದು.
    ಎಂ.ಬಸವರಾಜ
    ಕಾರಟಗಿ ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts