More

    ಮಾದಲಿ ಹದಗೊಳಿಸಿದ ಗವಿಶ್ರೀ

    ಕೊಪ್ಪಳ: ನಗರದ ಗವಿಮಠ ಜಾತ್ರೆ ಯಶಸ್ವಿಯಾಗಿ ಮುಗಿದಿದ್ದು, ಮಹಾದಾಸೋಹ ಮುಂದುವರೆದಿದೆ. ಗುರುವಾರ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ದಾಸೋಹ ಭವನಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಲ್ಲದೆ ಸೇವಾ ಕಾರ್ಯದಲ್ಲಿ ಕೆಲ ಹೊತ್ತು ಭಾಗಿಯಾದರು.

    ಸದಾ ಕ್ರಿಯಾಶೀಲರಾಗಿರುವ ಶ್ರೀಗಳು ಜಾತ್ರೋತ್ಸವ ಅಲ್ಲದೇ ಸಾಮಾನ್ಯ ದಿನದಲ್ಲೂ ಮಠದಲ್ಲಿ ಒಂದಿಲ್ಲೊಂದು ಕಾರ್ಯದಲ್ಲಿ ಭಾಗಿಯಾಗುತ್ತಾರೆ. ಸ್ವಚ್ಛತೆ, ಅಡುಗೆ ಸಿದ್ಧತೆ, ಕಸಗುಡಿಸುವಿಕೆ ಹೀಗೆ ಸೇವಾ ನಿರತರೊಂದಿಗೆ ತಾವೂ ಸೇವೆಯಲ್ಲಿ ತೊಡಗುವ ಮೂಲಕ ಇತರ ಸ್ವಾಮೀಜಿಗಳಿಗೆ ಮಾದರಿಯಾಗಿದ್ದಾರೆ. ಜಾತ್ರೆ ಆರಂಭದಿಂದಲೂ ವಿವಿಧ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಗುರುವಾರ ದಾಸೋಹ ಭವನದಲ್ಲಿ ಕೂಡಿ ಹಾಕಿದ್ದ ಮಾದಲಿ ಗುಡ್ಡೆಯನ್ನು ಹದಗೊಳಿಸುವ ಕಾರ್ಯದಲ್ಲಿ ಕೆಲ ಹೊತ್ತು ನಿರತರಾದರು. ಅಡುಗೆ ಸಹಾಯಕರು ಶ್ರೀಗಳಿಗೆ ಸಾಥ್ ನೀಡಿದರು. ಪ್ರಸಾದ ವಿತರಣೆ ಸಿದ್ಧತೆಗಳನ್ನು ಪರಿಶೀಲಿಸಿದರು. ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಸ್ವಯಂ ಸೇವಕರಿಗೆ ಮಾರ್ಗದರ್ಶನ ಮಾಡಿದರು.

    ಜ.21ವರೆಗೆ ದಾಸೋಹ ಕಾರ್ಯ ಮುಂದುವರೆಯಲಿದ್ದು, ಗವಿಮಠದಲ್ಲಿನ ಒಲೆಗಳಲ್ಲಿ ಕಿಚ್ಚು ಆರುವುದಿಲ್ಲ. ನಿತ್ಯ ಬೆಳಗ್ಗೆ 9ಕ್ಕೆ ಆರಂಭವಾಗುವ ದಾಸೋಹ ತಡರಾತ್ರಿವರೆಗೂ ಮುಂದುವರೆಯುತ್ತದೆ. ಕೊಪ್ಪಳ ನಗರ ಸೇರಿ ತಾಲೂಕಿನ ವಿವಿಧ ಗ್ರಾಮಗಳ ಗ್ರಾಮಸ್ಥರು ಸರತಿಯಲ್ಲಿ ದಾಸೋಹ ಭವನದಲ್ಲಿ ಸೇವೆ ಸಲ್ಲಿಸುತ್ತಾರೆ. ಒಂದೊಂದು ಗ್ರಾಮದ ಗ್ರಾಮಸ್ಥರು ಒಂದೊಂದು ದಿನ ಸೇವೆ ಸಲ್ಲಿಸಲಿದ್ದು, ಶ್ರೀಗಳು ಹಾಗೂ ದಾಸೋಹ ಉಸ್ತುವಾರಿಗಳ ಅನುಮತಿ ಪಡೆದು ಕಾರ್ಯ ನಿರ್ವಹಿಸುತ್ತಿರುವುದು ವಿಶೇಷ. ಜತೆಗೆ ದಾಸೋಹ ಮುಗಿವವರೆಗೂ ವಿವಿಧ ಗ್ರಾಮಸ್ಥರು ಸಿಹಿ ತಿನಿಸು, ರೊಟ್ಟಿ ಅರ್ಪಿಸುವುದು ಮುಂದುವರೆದಿದೆ.

    ನೀರಿನ ಸೇವೆ ಒದಗಿಸಿದ ಭದ್ರತಾ ಕೆಲಸಗಾರ
    ಮಠದಲ್ಲಿ ನಿಸ್ವಾರ್ಥದಿಂದ ತಮಗೆ ತೋಚಿದ ಸೇವೆ ಸಲ್ಲಿಸುವುದಕ್ಕೆ ಗವಿಮಠ ಭಕ್ತರು ಹೆಸರಾಗಿದ್ದಾರೆ. ಗುರುವಾರ ಭದ್ರತಾ ಕೆಲಸಗಾರರೊಬ್ಬರು ಮಠಕ್ಕೆ ಆಗಮಿಸುವ ಭಕ್ತರಿಗೆ ಮೆಟ್ಟಿಲುಗಳ ಬಳಿ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಿದ್ದರು. ಬರುವ ಕಡಿಮೆ ಸಂಬಳದಲ್ಲಿ ಅಲ್ಪ ಹಣ ಉಳಿತಾಯ ಮಾಡಿ ಶುದ್ಧ ಕುಡಿವ ನೀರು ಪೂರೈಸಿದರು. ವಿಷಯ ತಿಳಿದ ಗವಿಶ್ರೀಗಳು ಸ್ಥಳಕ್ಕೆ ಬಂದು ಆಶೀರ್ವದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts