More

    ನ್ಯೂಮೋನಿಯಾ ಆರಂಭದಲ್ಲೇ ಗುರುತಿಸಿ: ಡಿಎಚ್‌ಒ ಡಾ.ಅಲಕಾನಂದ ಮಳಗಿ ಸೂಚನೆ

    ಕೊಪ್ಪಳ: ನ್ಯೂಮೋನಿಯಾವನ್ನು ಆರಂಭದಲ್ಲೇ ಗುರುತಿಸಿ ಚಿಕಿತ್ಸೆ ನೀಡುವ ಮೂಲಕ ಮಕ್ಕಳನ್ನು ರಕ್ಷಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಲಕಾನಂದ ಮಳಗಿ ಹೇಳಿದರು.

    ನಗರದ ಹಳೇ ಆಸ್ಪತ್ರೆ ಆವರಣದಲ್ಲಿ ಆರೋಗ್ಯ ಇಲಾಖೆಯಿಂದ ಬುಧವಾರ ಜಿಲ್ಲಾ ಮಟ್ಟದ ವೈದ್ಯಾಧಿಕಾರಿಗಳಿಗೆ ನ್ಯೂಮೋನಿಯಾ ನಿರ್ವಹಣೆ ಕುರಿತು ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

    ಕಲುಷಿತ ಗಾಳಿ, ನೀರು, ಬ್ಯಾಕ್ಟೀರಿಯಾ, ವೈರಸ್, ಕಡಿಮೆ ತೂಕ, ಅಪೌಷ್ಟಿಕತೆ, ಹುಟ್ಟಿದ ಮೊದಲ 6 ತಿಂಗಳವರೆಗೆ ಸ್ತನ್ಯಪಾನ ಮಾಡಿಸದಿರುವುದು, ಒಳಾಂಗಣ ವಾಯುಮಾಲಿನ್ಯ, ರೋಗನಿರೋಧಕ ಶಕ್ತಿ ಕೊರತೆ, ನೈರ್ಮಲ್ಯ ಇತರ ಕಾರಣಗಳಿಂದ ನ್ಯೂಮೋನಿಯಾ ಬರುತ್ತದೆ. ಐದು ವರ್ಷದೊಳಗಿನ ಮಕ್ಕಳ ಮರಣ ಕಾರಣಗಳಲ್ಲಿ ನ್ಯೂಮೋನಿಯಾವೂ ಒಂದಾಗಿದೆ. ಇದನ್ನು ಆರಂಭದಲ್ಲೇ ತಡೆಗಟ್ಟಬೇಕು. ಮಕ್ಕಳಲ್ಲಿ ಲಕ್ಷಣಗಳು ಕಂಡುಬಂದಲ್ಲಿ ಅಗತ್ಯ ಪರೀಕ್ಷೆ ನಡೆಸಿ ಚಿಕಿತ್ಸೆ ನೀಡಿ ರಕ್ಷಣೆ ಮಾಡಬೇಕು. ಎಲ್ಲ ವೈದ್ಯರು, ಇತರ ಸಿಬ್ಬಂದಿ ತಾಯಂದಿರಿಗೆ ಕಾಯಿಲೆ ಬಗ್ಗೆ, ಲಕ್ಷಣ ಕುರಿತು ಅರಿವು ಮೂಡಿಸಬೇಕು. ನೆಗಡಿ, ಕೆಮ್ಮು, ಉಸಿರಾಟ ತೊಂದರೆ, ಪಕ್ಕೆ ಸೆಳೆತ, ತೀವ್ರ ಜ್ವರ ಕಂಡುಬಂದಲ್ಲಿ ಅಗತ್ಯ ಪರೀಕ್ಷೆ ನಡೆಸುವಂತೆ ಸೂಚಿಸಿದರು.

    ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಪ್ರಕಾಶ ಮಾತನಾಡಿ, ಮೊದಲು ಕಾಯಿಲೆ ಬಗ್ಗೆ ವೈದ್ಯರು ಅರಿಯಬೇಕು. ನ.12ರಿಂದ 28ವರೆಗೆ ನವಜಾತ ಶಿಶು ಸಪ್ತಾಹವಿದ್ದು, ಕಾರ್ಯಕ್ರಮ ಹಮ್ಮಿಕೊಂಡು ಜಾಗೃತಿ ಕೈಗೊಳ್ಳಿ ಎಂದು ತಿಳಿಸಿದರು.

    ಕಾಯಿಲೆ ಕುರಿತು ಮಕ್ಕಳ ತಜ್ಞೆ ಡಾ.ಮೀನಾ, ಚಿಕಿತ್ಸೆ, ನಿರ್ವಹಣೆ ಕುರಿತು ಮಕ್ಕಳ ತಜ್ಞ ಡಾ.ರಾಜಶೇಖರ್ ಉಪನ್ಯಾಸ ನೀಡಿದರು. ಜಿಲ್ಲಾ ರೋಗವಾಹಕ ಆಶ್ರಿತ ರೋಗ ನಿಯಂತ್ರಣಾಧಿಕಾರಿ ಡಾ.ವೆಂಕಟೇಶ, ತಜ್ಞವೈದ್ಯ ಡಾ.ಸಿ.ಎಂ.ಹಿರೇಮಠ, ಡಿ.ಎಚ್.ಇ.ಒ. ಶಿವಾನಂದ ವಿ.ಪಿ, ಮೃತ್ಯುಂಜಯ, ಜೈಹಿಂದ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts