More

    ಬಂಡವಾಳ ಹೂಡಿಕೆದಾರರ ಸಮಾವೇಶ ರದ್ದುಪಡಿಸಿ: ಜಿಲ್ಲಾಧಿಕಾರಿ ಕಚೇರಿ ಎದುರು ಪ್ರಾಂತ ರೈತ ಸಂಘ ಪ್ರತಿಭಟನೆ

    ಕೊಪ್ಪಳ: ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಹಾಗೂ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಪದಾಧಿಕಾರಿಗಳು ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

    ಕೋವಿಡ್ ಕಾರಣ ಜನರು ಹೈರಾಣಾಗಿದ್ದಾರೆ. ಈ ವರ್ಷ ಅಧಿಕ ಮಳೆಯಿಂದ ರೈತರು ಕಂಗಾಲಾಗಿದ್ದಾರೆ. ಈ ನಡುವೆ ಸರ್ಕಾರ ಭೂ ಸುಧಾರಣೆ, ಎಪಿಎಂಸಿ ಹಾಗೂ ವಿದ್ಯುತ್ ಕಾಯ್ದೆಗಳಿಗೆ ತಿದ್ದುಪಡಿ ತಂದಿದೆ. ಕೆಐಎಡಿಬಿಗೆ ಹೆಚ್ಚು ಅಧಿಕಾರ ನೀಡಿ ರೈತರ ಫಲವತ್ತಾದ ಭೂಮಿ ವಶಪಡಿಸಿಕೊಳ್ಳಲಾಗಿದೆ. ಇತ್ತ ಕೃಷಿ ಚಟುವಟಿಕೆ ಅತ್ತ ಕೈಗಾರಿಕೆಗಳನ್ನೂ ಆರಂಭಿಸಿಲ್ಲ. ಇದರಿಂದ ಭೂಮಿ ಪಾಳು ಬಿದ್ದಿವೆ. ರೈತರು, ಬಡ ಜನರು ಸಂಕಷ್ಟದಲ್ಲಿದ್ದರೂ ಸರ್ಕಾರ ಬೆಂಗಳೂರಿನಲ್ಲಿ ಜಾಗತಿಕ ಬಂಡವಾಳಗಾರರ ಸಮಾವೇಶ ನಡೆಸುತ್ತಿದೆ. ರೈತರಿಂದ ಭೂಮಿ ಕಸಿದುಕೊಂಡು ಬಂಡವಾಳಶಾಹಿಗಳ ಕೈಗೆ ನೀಡುತ್ತಿದೆ ಎಂದು ಆರೋಪಿಸಿದರು.

    ಕೂಡಲೇ ಸಮಾವೇಶ ರದ್ದುಪಡಿಸಬೇಕು. ಮಳೆಯಿಂದ ಮನೆ, ಬೆಳೆ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ಒದಗಿಸಬೇಕು. ರೈತರಿಗೆ ಮಾರಕವಾಗಿರುವ ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ಬಲವಂತವಾಗಿ ಭೂಸ್ವಾಧೀನ ಮಾಡಿಕೊಳ್ಳಬಾರದು. ಕೃಷಿ ಸಾಲಮನ್ನಾ ಮಾಡಬೇಕು. ಉದ್ಯೋಗ ಸೃಷ್ಟಿಸಬೇಕು. ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸಿದರು. ಸಂಘದ ಜಿಲ್ಲಾಧ್ಯಕ್ಷ ದೊಡ್ಡನಗೌಡ, ಕಾರ್ಯದರ್ಶಿ ಜಿ.ನಾಗರಾಜ, ಕಾಸಿಂ ಸರ್ದಾರ, ರೇಖಮ್ಮ, ಹುಲುಗಪ್ಪ ಮಡಿವಾಳ, ಪಾರ್ವತಿ, ಕೆಂಚಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts