More

    ಫಾರ್ಮ್ ನಂ.3ಸಮಸ್ಯೆ ನಿವಾರಣೆಗೆ ಮಾರ್ಗ ಹುಡುಕಿ: ಡಿಸಿ ಎಂ.ಸುಂದರೇಶ ಬಾಬು ಸೂಚನೆ

    ಕೊಪ್ಪಳ: ಸಣ್ಣಪುಟ್ಟ ಲೋಪದೋಷ ಸರಿಪಡಿಸಿ ಮಾಲೀಕರಿಗೆ ಫಾರ್ಮ್ ನಂ.3 ವಿತರಣೆಗೆ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ ಬಾಬು, ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಸಾರ್ವಜನಿಕರಿಂದ ಮನವಿ ಸ್ವೀಕರಿಸಿ ಮಾತನಾಡಿದರು. ಅನ್ಯ ಜಿಲ್ಲೆಗಳಲ್ಲಿ ಸಮಸ್ಯೆಗೆ ಯಾವ ಪರಿಹಾರ ಕಂಡುಕೊಂಡಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು. ಸರ್ಕಾರದ ಸೂಚನೆ, ನಿರ್ದೇಶನಗಳೇನು, ಯಾರಿಗೆ ಅನ್ವಯಿಸುತ್ತವೆ ಎಂಬಿತ್ಯಾದಿ ಮಾಹಿತಿ ಸಂಗ್ರಹಿಸಬೇಕು. ಸಣ್ಣಪುಟ್ಟ ಸಮಸ್ಯೆ ಇದ್ದಲ್ಲಿ ಸರಿಪಡಿಸಿ ವಿತರಿಸುವಂತೆ ತಿಳಿಸಿದರು.

    ಭಾಗ್ಯನಗರ ಗ್ರಾಪಂ 2015ರಲ್ಲಿ ಪಪಂ ಆಗಿ ಮೇಲ್ದರ್ಜೆಗೇರಿದೆ. ಪಟ್ಟಣ ವ್ಯಾಪ್ತಿಯಲ್ಲಿ 13 ಸಾವಿರಕ್ಕೂ ಅಧಿಕ ನಿವೇಶನಗಳಿವೆ. ನಗರಾಭಿವೃದ್ಧಿ ಇಲಾಖೆ ಅನುಮೋದನೆ ನೀಡಿದೆ. ರಾಜ್ಯ ಸರ್ಕಾರವೇ ಕಾನೂನು ತಿದ್ದುಪಡಿ ಮಾಡಿ ನಿವೇಶನ ಮಾಲೀಕರಿಗೆ ಅನುಕೂಲ ಮಾಡಿದೆ. ಆದರೆ, ಅಧಿಕಾರಿಗಳು ವಿತರಣೆ ಮಾಡುತ್ತಿಲ್ಲ. ಇದರಿಂದ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದೇವೆಂದು ಸಾರ್ವಜನಿಕರು ಸಭೆಯಲ್ಲಿ ಅಳಲು ತೋಡಿಕೊಂಡರು.

    ಸಂಸದ ಸಂಗಣ್ಣ ಕರಡಿ ಮಾತನಾಡಿ, ಗ್ರಾಪಂ ಇದ್ದಾಗ ಗ್ರಾಮೀಣಾಭಿವೃದ್ಧಿ ಇಲಾಖೆ ನಿವೇಶನಗಳನ್ನು ಅನುಮೋದಿಸಿದೆ. ಅದೇ ಆಸ್ತಿಗಳಿಗೆ ನಗರಾಭಿವೃದ್ಧಿ ಇಲಾಖೆಯಲ್ಲಿ ಮಾನ್ಯತೆ ಇಲ್ಲವೆಂದರೆ ಹೇಗೆ ? ಕಾನೂನು ಎಲ್ಲ ಇಲಾಖೆಗಳಿಗೂ ಅನ್ವಯಿಸುತ್ತದೆ. ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆಯಲ್ಲಿ ಅನುಸರಿಸಿದ ಮಾರ್ಗೋಪಾಯವನ್ನು ತಿಳಿದುಕೊಳ್ಳಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

    ವಾರದೊಳಗೆ ಈ ಸಂಬಂಧ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಡಿಸಿ ನಿರ್ದೇಶಿಸಿದರು. ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ್, ಹೋರಾಟ ಸಮಿತಿ ಪದಾಧಿಕಾರಿಗಳಾದ ಗ್ಯಾನೇಶ್ ಹ್ಯಾಟಿ, ಚನ್ನಪ್ಪ ತಟ್ಟಿ, ಶಂಕರ್ ಲಿಂಗನಬಂಡಿ, ಪರಶುರಾಮ ನಾಯಕ, ಮುಖಂಡರಾದ ದಾನಪ್ಪ ಕವಲೂರ, ಸುರೇಶ್ ದರಗದಕಟ್ಟಿ, ಡಾ.ಕೊಟ್ರೇಶ್ ಶೇಡ್ಮಿ, ಜಗದೀಶ್, ವೀರೇಶ್, ಸುರೇಶ್ ಪೆದ್ದಿ, ನಾಗರಾಜ್ ನಂದ್ಯಾಲ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts