More

    ಕ್ಷೇತ್ರ ಐದು, ಆಕಾಂಕ್ಷಿಗಳು ಹನ್ನೊಂದು: ಗಂಗಾವತಿಯಲ್ಲಿ ಪೈಪೋಟಿ ಅಧಿಕ ; ಯಾರಿಗೆ ವರಿಷ್ಠರ ಕೃಪಾಕಟಾಕ್ಷ ?

    ವಿ.ಕೆ.ರವೀಂದ್ರ ಕೊಪ್ಪಳ

    ವಿಧಾನಸಭೆ ಚುನಾವಣೆಗೆ ನಾಲ್ಕೈದು ತಿಂಗಳು ಬಾಕಿ ಇದ್ದು, ರಾಜಕೀಯ ಪಕ್ಷಗಳು ಈಗಲೇ ತಾಲೀಮು ಆರಂಭಿಸಿವೆ. ಪ್ರಮುಖವಾಗಿ ಕಾಂಗ್ರೆಸ್, ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿದ್ದು ಜಿಲ್ಲೆಯ ಐದು ಕ್ಷೇತ್ರಗಳಿಗೆ 11 ಜನ ಅರ್ಜಿ ಸಲ್ಲಿಸಿರುವುದು ಕುತೂಹಲ ಮೂಡಿಸಿದೆ.

    ಬದಲಾದ ರಾಜಕೀಯದಲ್ಲಿ ಕೆಪಿಸಿಸಿ ಅಧ್ಯಕ್ಷಗಿರಿ ಡಿ.ಕೆ.ಶಿವಕುಮಾರ್ ಹೆಗಲೇರಿದರೆ, ರಾಜ್ಯ ವಿಧಾನಸಭೆ ಚುನಾವಣೆ ಸಮೀಪವಿರುವಾಗ ರಾಜ್ಯದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಜವಾಬ್ದಾರಿ ಹೊತ್ತಿರುವುದು ರಾಜ್ಯದ ಪಾಲಿಗೆ ಬಹುಮುಖ್ಯ ಬೆಳವಣಿಗೆ. ಸಂಪ್ರದಾಯದಂತೆ ಚುನಾವಣೆ ಮುನ್ನ ಟಿಕೆಟ್ ಹಂಚಿಕೆ ಮಾಡುತ್ತಿದ್ದ ಕೈ ಪಾಳಯ ಈ ಬಾರಿ ಹಲವು ಬದಲಾವಣೆ ಮಾಡಿ, ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಜಿಲ್ಲೆಯಲ್ಲೂ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಎಐಸಿಸಿ ಅಧ್ಯಕ್ಷ ಖರ್ಗೆ ಬೆಂಬಲಿಗರ ಬಣಗಳಿವೆ. ಅದರಲ್ಲಿ ಕೆಲವರು ಆಯಾ ಬಣದ ಮುಖ್ಯಸ್ಥರಿಗೆ ಗಳಸ್ಯ-ಕಂಠಸ್ಯ ಎಂಬಂತಿರುವುದು ವಿಶೇಷ.

    ದೇಶದ ಒಂದೊಂದೇ ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ರಾಜ್ಯ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಮೂವರು ನಾಯಕರು ಮುಖ್ಯ. ಇದೇ ಕಾರಣಕ್ಕೆ ಕಳೆದೆರಡು ತಿಂಗಳ ಹಿಂದೆ ತೆರೆಮರೆಯಲ್ಲಿದ್ದ ಕೆಲ ನಾಯಕರು ಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ. ನಮ್ಮ ನಾಯಕರು ನಮಗೇ ಮಣೆ ಹಾಕುವರೆಂಬ ಅಚಲ ವಿಶ್ವಾಸದಲ್ಲಿದ್ದಾರೆ. ಹೀಗಾಗಿ ಕೆಲ ತಿಂಗಳ ಹಿಂದಷ್ಟೆ ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ಇವರೇ ಮುಂದಿನ ಚುನಾವಣೆಗೆ ಕೈನಿಂದ ಸ್ಪರ್ಧಿಸುವವರು ಎಂಬಂತಿದ್ದ ಚಿತ್ರಣ ಸದ್ಯಕ್ಕೆ ಬದಲಾವಣೆಯಾಗಿದೆ. ಕುಷ್ಟಗಿ, ಕನಕಗಿರಿ, ಗಂಗಾವತಿ, ಯಲಬುರ್ಗಾ ಹಾಗೂ ಕೊಪ್ಪಳ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನಿಂದ ಈವರೆಗೆ 11 ಜನ ಅಭ್ಯರ್ಥಿಗಳು ಟಿಕೆಟ್ ಕೋರಿ ಅರ್ಜಿ ಗುಜರಾಯಿಸಿದ್ದಾರೆ.

    ಸದ್ಯ ಐದು ಕ್ಷೇತ್ರಗಳ ಪೈಕಿ ಕುಷ್ಟಗಿ ಹಾಗೂ ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿದೆ. 2023ರಲ್ಲಿ ಐದೂ ಕ್ಷೇತ್ರಗಳನ್ನು ವಶ ಮಾಡಿಕೊಳ್ಳಲು ಕೈ ನಾಯಕರು ರಣತಂತ್ರ ಹೆಣೆಯುತ್ತಿದ್ದಾರೆ. ಎರಡು ಅವಧಿಯಿಂದ ಕೊಪ್ಪಳ ಕ್ಷೇತ್ರದಲ್ಲಿ ಹಿಡಿತ ಸಾಧಿಸಿರುವ ಶಾಸಕ ರಾಘವೇಂದ್ರ ಹಿಟ್ನಾಳ್‌ಗೆ ಆಡಳಿತ ವಿರೋಧಿ ಅಲೆ, ಅಲ್ಪಸಂಖ್ಯಾತರ ಮುನಿಸು ಕಾಡುತ್ತಿದೆ. ಕುಷ್ಟಗಿಯಲ್ಲಿ ಶಾಸಕ ಅಮರೇಗೌಡ ಬಯ್ಯಪುರ ಜನರೊಂದಿಗೆ ಉತ್ತಮ ಒಡನಾಟವಿಟ್ಟುಕೊಂಡಿದ್ದರೂ ಕ್ಷೇತ್ರದ ಇತಿಹಾಸದಲ್ಲಿ ಈವರೆಗೂ ಯಾರೊಬ್ಬರು ಸಹ ಸತತ ಎರಡನೇ ಗೆಲುವು ದಾಖಲಿಸಿಲ್ಲ. ಹೀಗಾಗಿ ಏನಾಗುವುದೆಂಬ ಕುತೂಹಲ ಮತದಾರರಲ್ಲಿ ಮನೆ ಮಾಡಿದೆ. ಇನ್ನು ಯಲಬುರ್ಗಾ, ಗಂಗಾವತಿ ಮತ್ತು ಕನಕಗಿರಿ ಕ್ಷೇತ್ರಗಳಲ್ಲಿ ಕಳೆದ ಚುನಾವಣೆಯಲ್ಲಿ ಕೈ ನಾಯಕರು ಗೆಲ್ಲುವ ಅವಕಾಶ ಹೆಚ್ಚಿದ್ದರೂ ಸ್ವ ಪಕ್ಷೀಯರೇ ನೀಡಿದ ಒಳ ಹೊಡೆತಕ್ಕೆ ಕಾಂಗ್ರೆಸ್ ಕ್ಷೇತ್ರ ಕಳೆದುಕೊಂಡಿರುವುದು ಜಗಜ್ಜಾಹೀರಾಗಿದೆ.

    ಅರ್ಜಿ ಸಲ್ಲಿಸಿದವರು
    ಜಿಲ್ಲಾ ಕೇಂದ್ರ ಕೊಪ್ಪಳದಿಂದ ಹಾಲಿ ಶಾಸಕ ರಾಘವೇಂದ್ರ ಹಿಟ್ನಾಳ್, ಕುಷ್ಟಗಿಯಿಂದ ಶಾಸಕ ಅಮರೇಗೌಡ ಬಯ್ಯಪುರ, ಮಾಜಿ ಶಾಸಕ ಹಸನಸಾಬ್ ದೋಟಿಹಾಳ, ಪ್ರಭಾಕರ ಚಿಣಿ, ಯಲಬುರ್ಗಾದಿಂದ ಮಾಜಿ ಸಚಿವ ಬಸವರಾಜ ರಾಯರಡ್ಡಿ, ಅಮರಗುಂಡಪ್ಪ ಮೇಟಿ, ಗಂಗಾವತಿಯಿಂದ ಮಾಜಿ ಸಚಿವರಾದ ಇಕ್ಬಾಲ್ ಅನ್ಸಾರಿ, ಮಲ್ಲಿಕಾರ್ಜುನ ನಾಗಪ್ಪ, ವಿಪ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ ಮತ್ತು ಮೀಸಲು ಕ್ಷೇತ್ರ ಕನಕಗಿರಿಯಿಂದ ಮಾಜಿ ಸಚಿವ, ಡಿಸಿಸಿ ಅಧ್ಯಕ್ಷ ಶಿವರಾಜ ತಂಗಡಗಿ, ಮುಕುಂದರಾವ್ ಭವಾನಿಮಠ ಟಿಕೆಟ್ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇಂದು (ನ.25) ಕೆಪಿಸಿಸಿ ವರಿಷ್ಠರು ಸಭೆ ಕರೆದಿದ್ದು, 150 ಕ್ಷೇತ್ರಗಳ ಅಭ್ಯರ್ಥಿಗಳಿಗೆ ಚುನಾವಣೆಗೆ ತಯಾರಿ ಮಾಡಿಕೊಳ್ಳುವಂತೆ ಸೂಚಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

    ಎಲ್ಲೆಲ್ಲಿ ಜಿದ್ದಾಜಿದ್ದಿ ?
    ಭತ್ತದ ನಾಡು ಗಂಗಾವತಿಯಲ್ಲಿ ಕಾಂಗ್ರೆಸ್ ಟಿಕೆಟ್‌ಗೆ ಭಾರಿ ಪೈಪೋಟಿ ಶುರುವಾಗಿದೆ. ರಾಜಕೀಯ ಬದ್ಧ ವೈರಿಗಳಾಗಿರುವ ಇಕ್ಬಾಲ್ ಅನ್ಸಾರಿ, ಎಚ್.ಆರ್.ಶ್ರೀನಾಥ ಟಿಕೆಟ್‌ಗಾಗಿ ಪಟ್ಟು ಬಿಗಿಗೊಳಿಸಿದ್ದಾರೆ. ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಸಹ ಹೆಚ್ಚು ಸಕ್ರಿಯರಾಗಿದ್ದು ತಮ್ಮದೇ ಮೂಲಗಳಿಂದ ಟಿಕೆಟ್ ಒಲಿಸಿಕೊಳ್ಳಲು ಹವಣಿಸುತ್ತಿದ್ದಾರೆ. ಕುಷ್ಟಗಿಯಲ್ಲಿಯೂ ಮೂವರು ಅರ್ಜಿ ಸಲ್ಲಿಸಿದ್ದು ಅಮರೇಗೌಡ, ಹಸನಸಾಬ್ ದೋಟಿಹಾಳ ಇಬ್ಬರೂ ಪ್ರಬಲರಾಗಿದ್ದಾರೆ. ಮತ್ತೊಂದೆಡೆ ಪ್ರಭಾಕರ ಚಿಣಿ ಬೇಡಿಕೆ ಇಟ್ಟಿದ್ದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಕನಗಿರಿಯಲ್ಲಿ ಮುಕುಂದರಾವ್ ಭವಾನಿಮಠ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯೊಂದಿಗಿನ ಆಪ್ತತೆ, ಇತರ ವಿಷಯ ಮುಂದಿಟ್ಟು ತಂಗಡಗಿ ವಿರುದ್ಧ ಪೈಪೋಟಿಗಿಳಿದಿದ್ದಾರೆ. ಯಲಬುರ್ಗಾದಲ್ಲಿ ಮಾಜಿ ಸಚಿವ ಬಸವರಾಜ ರಾಯರಡ್ಡಿಗೆ ಲಿಂಗಸುಗೂರಿನ ಅಮರಗುಂಡಪ್ಪ ಪೈಪೋಟಿ ಒಡ್ಡಿದ್ದಾರೆ.

    ಅಸಮಾಧಾನಕ್ಕೆ ಕಾರಣವಾದ ಸಿದ್ದು
    ಸಂಪ್ರದಾಯ ಬದಲಿಸಿರುವ ಕಾಂಗ್ರೆಸ್ ಚುನಾವಣೆಗೆ ಹೊಸ ತಂತ್ರಗಳನ್ನು ಹೆಣೆಯುತ್ತಿದೆ. ಅವುಗಳಲ್ಲಿ ಟಿಕೆಟ್‌ಗಾಗಿ ಅರ್ಜಿ ಆಹ್ವಾನವೂ ಒಂದು. ಆದರೆ, ಇತ್ತೀಚೆಗೆ ಖಾಸಗಿ ಕಾರ್ಯಕ್ರಮವೊಂದಕ್ಕೆ ಜಿಲ್ಲೆಗೆ ಆಗಮಿಸಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಚುನಾವಣೆಯಲ್ಲಿ ಮಾಜಿ ಸಚಿವರಾದ ಇಕ್ಬಾಲ್ ಅನ್ಸಾರಿ, ಶಿವರಾಜ ತಂಗಡಗಿ, ಬಸವರಾಜ ರಾಯರಡ್ಡಿ, ಶಾಸಕರಾದ ಅಮರೇಗೌಡ ಬಯ್ಯಪುರ, ರಾಘವೇಂದ್ರ ಹಿಟ್ನಾಳ್‌ರನ್ನು ಬೆಂಬಲಿಸುವಂತೆ ಕರೆ ನೀಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಇದರಿಂದ ಉಳಿದ ಆಕಾಂಕ್ಷಿಗಳ ಕಣ್ಣು ಕೆಂಪಗಾಗಿದ್ದರೂ, ಕೆಪಿಸಿಸಿ, ಎಐಸಿಸಿ ಅಷ್ಟಾಗಿ ತಲೆ ಕೆಡಿಸಿಕೊಂಡಂತಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts