More

    ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಜಟಾಯು ಮಾದರಿ ?: ವಾಸ್ತು ಶಿಲ್ಪ ಯೋಜನೆ ರೂಪಿಸಲು ಟೆಂಡರ್

    ವಿ.ಕೆ.ರವೀಂದ್ರ ಕೊಪ್ಪಳ

    ಪೌರಾಣಿಕ ಹಿನ್ನೆಲೆ ಹೊಂದಿರುವ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ಮುಂದಾಗಿರುವ ಸರ್ಕಾರ ಬೆಟ್ಟದ ಮೂಲ ಐತಿಹ್ಯ ಉಳಿಸಿಕೊಳ್ಳಲು ಚಿಂತನೆ ನಡೆಸಿದೆ. ಹೀಗಾಗಿ ಕೇರಳದ ಕೊಲ್ಲಂನಲ್ಲಿರುವ ಜಟಾಯು ಪಾರ್ಕ್ ಮಾದರಿಯಲ್ಲಿ ಅಭಿವೃದ್ಧಿಗೆ ಯೋಜಿಸಿದ್ದು, ವಾಸ್ತು ಶಿಲ್ಪ ಶಾಸ್ತ್ರಜ್ಞರಿಂದ ಮಾದರಿ ಆಹ್ವಾನಿಸಲು ಮುಂದಾಗಿದೆ.

    ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟ ಕೇವಲ ಪ್ರೇಕ್ಷಣೀಯ ಸ್ಥಳವಲ್ಲ. ರಾಮಾಯಣದ ನಂಟು ಹೊಂದಿದೆ. ರಾಮನ ಬಂಟ ಹನುಮಂತ ಜನಿಸಿದ ಪ್ರದೇಶವೆಂಬ ಐತಿಹ್ಯವಿದೆ. ಕಿಷ್ಕಿಂಧೆ ಭಾಗದಲ್ಲಿ ಬರುವ ರಾಮಾಯಣದ ಪಂಪಾಸರೋವರ, ವಾಲಿಕಿಲ್ಲಾ, ಮಾತಂಗ ಪರ್ವತ ಇನ್ನಿತರ ಸ್ಥಳಗಳು ಬೆಟ್ಟದ ಇತಿಹಾಸಕ್ಕೆ ಪೂರಕವಾಗಿರುವುದನ್ನು ಕಾಣಬಹುದು. ದೇಶದಲ್ಲಿ ಅನೇಕ ಅಂಜನಾದ್ರಿ ಬೆಟ್ಟಗಳಿದ್ದರೂ ಉತ್ತರ ಭಾರತೀಯರು ಅದರಲ್ಲೂ ವಿದೇಶಿಗರು ಹೆಚ್ಚಾಗಿ ಬರುವುದು ಕೊಪ್ಪಳದ ಅಂಜನಾದ್ರಿಗೆ. ಹೀಗಾಗಿ ಉಳಿದೆಲ್ಲ ಪ್ರದೇಶಗಳಿಗಿಂತ ಇದು ಹೆಚ್ಚಿನ ಮಹತ್ವ ಪಡೆದಿದೆ. ಆಂಜನೇಯ ಹುಟ್ಟಿದ ಪ್ರದೇಶದ ವಿವಾದವಾಗುತ್ತಲೇ ರಾಜ್ಯ ಸರ್ಕಾರ ಬೆಟ್ಟದ ಅಭಿವೃದ್ಧಿಗೆ ಮುಂದಾಗಿದೆ. ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆದಿದ್ದು, ಜಿಲ್ಲಾಡಳಿತ ಅಭಿವೃದ್ಧಿಗಾಗಿ ಎರಡು ಮಾದರಿಗಳನ್ನು ಸರ್ಕಾರಕ್ಕೆ ಸಲ್ಲಿಸಿದೆ.

    ಆದರೆ, ಅಭಿವೃದ್ಧಿ ನೆಪದಲ್ಲಿ ಬೆಟ್ಟದ ಮೂಲ ಸ್ವರೂಪ ಹಾಳು ಮಾಡಬಾರದೆಂಬ ಕೂಗು ಕೇಳಿ ಬರುತ್ತಿವೆ. ಬೆಟ್ಟದ ಸುತ್ತಮುತ್ತ ಕಾಂಕ್ರೀಟ್‌ನಲ್ಲಿ ಕಟ್ಟಡಗಳನ್ನು ನಿರ್ಮಿಸಿದಲ್ಲಿ ಬೆಟ್ಟದ ಅಂದಕ್ಕೆ ಧಕ್ಕೆಯಾಗಲಿದೆ. ರಾಮಾಯಣ ಕಾಲದ ಪ್ರದೇಶವೆಂಬುದಕ್ಕೆ ಯಾವುದೇ ಕುರುಹು ಇಲ್ಲದಂತಾಗುತ್ತದೆ. ಈಗಾಗಲೇ ಅಭಿವೃದ್ಧಿ ಹೆಸರಿನಲ್ಲಿ ಪಂಪಾಸರೋವರವನ್ನು ಕಾಂಕ್ರೀಟ್ ಕಾಡು ಮಾಡಿದ್ದು, ಅಂಜನಾದ್ರಿ ಬೆಟ್ಟಕ್ಕೂ ಇದೇ ಪರಿಸ್ಥಿತಿ ಬರಲಿದೆ. ಇವೆಲ್ಲ ಸವಾಲುಗಳ ನಡುವೆ ಪ್ರವಾಸೋದ್ಯಮ ಅಭಿವೃದ್ಧಿ ವಿಷಯ ಸರ್ಕಾರದ ಹೆಗಲೇರಿದೆ. ರಾಮಾಯಣದ ಸ್ಪರ್ಶ ಉಳಿಸಿಕೊಂಡೇ ಅಂಜನಾದ್ರಿ ಅಭಿವೃದ್ಧಿಗೆ ಚಿಂತನೆ ನಡೆದಿದ್ದು, ಇದಕ್ಕಾಗಿ ಸೂಕ್ತ ಯೋಜನೆ ರೂಪಿಸಿದ ನಂತರವೇ ಭೂ ಸ್ವಾಧೀನ ಸೇರಿ ಇತರ ಪ್ರಕ್ರಿಯೆ ಆರಂಭಿಸಲು ಸಿದ್ಧತೆಗಳು ನಡೆದಿವೆ.

    ಕೇರಳದ ಕೊಲ್ಲಂನಲ್ಲಿ ರಾವಣ ಸೀತೆಯನ್ನು ಅಪಹರಿಸಿಕೊಂಡು ಹೋಗುವಾಗ ಜಟಾಯು ರಾವಣನೊಂದಿಗೆ ಹೋರಾಡಿ ಮಡಿದ ಪ್ರದೇಶವಿದೆ. ಅದನ್ನು ಮೂಲ ಐತಿಹ್ಯಕ್ಕೆ ಧಕ್ಕೆಯಾಗದಂತೆ ಜಟಾಯು ಪಾರ್ಕ್ ಅಭಿವೃದ್ಧಿಪಡಿಸಲಾಗಿದೆ. ಅದರಂತೆ ಅಂಜನಾದ್ರಿಯಲ್ಲಿಯೂ ನೈಜತೆ ಉಳಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಸದ್ಯ ರೂಪಿಸಿರುವ ಯೋಜನೆಯಲ್ಲಿ ಊಟದ ಹಾಲ್, ಪ್ರವಾಸಿ ಮಂದಿರ, ಅಡುಗೆ ಮನೆ, ಸಮುದಾಯ ಭವನ, ಪ್ರದಕ್ಷಿಣ ಪಥ ಮುಂತಾದ ಸೌಲಭ್ಯ ಕಲ್ಪಿಸಬೇಕೆಂದು ಕ್ರಿಯಾ ಯೋಜನೆ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. 61 ಎಕರೆ ಭೂಮಿ ಅವಶ್ಯವಿದ್ದು, ಸರ್ಕಾರ ರಸ್ತೆ ಬದಿಯಲ್ಲಿ ಎಕರೆಗೆ 57 ಲಕ್ಷ ರೂ., ಒಳಗಿನ ಜನಮೀನಿಗೆ ಎಕರೆಗೆ 42 ಲಕ್ಷ ರೂ. ನೀಡುವುದಾಗಿ ತಿಳಿಸಿದೆ. ಆದರೆ, ರೈತರು ಹೆಚ್ಚಿನ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದು, ಅಭಿವೃದ್ಧಿ ಕ್ರಿಯಾ ಯೋಜನೆ ಸಿದ್ಧಗೊಂಡ ನಂತರವೇ ಭೂಸ್ವಾಧೀನಕ್ಕೆ ಜಿಲ್ಲಾಡಳಿತ ಮುಂದಾಗುವ ಸಾಧ್ಯತೆಯಿದೆ.

    ಅಂಜನಾದ್ರಿ ಬೆಟ್ಟ ಅಭಿವೃದ್ಧಿ ಸಂಬಂಧ ಸಿಎಂ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದೆ. ಕಟ್ಟಡಗಳಿಗೆ ಕಾಂಕ್ರೀಟ್ ಬಳಸದೆ, ಕೇರಳದ ಜಟಾಯು ಮಾದರಿ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸುವ ಉದ್ದೇಶವಿದೆ. ಶೀಘ್ರವೇ ಏಜೆನ್ಸಿ ಆಹ್ವಾನಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.
    | ಆನಂದ ಸಿಂಗ್, ಪ್ರವಾಸೋದ್ಯಮ, ಜಿಲ್ಲಾ ಉಸ್ತುವಾರಿ ಸಚಿವ, ಕೊಪ್ಪಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts