More

    ಮತದಾರರ ಅಂತಿಮ ಪಟ್ಟಿ ಸಿದ್ಧಪಡಿಸಿ: ಅಧಿಕಾರಿಗಳಿಗೆ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಸೂಚನೆ

    ಕೊಪ್ಪಳ: ಮತದಾರರ ಪಟ್ಟಿ ಪರಿಷ್ಕರಣೆ ಮುಗಿಸಿ ಅಂತಿಮ ಪಟ್ಟಿ ಸಿದ್ಧಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಮತದಾರರ ಪಟ್ಟಿ ವೀಕ್ಷಕ ಟಿ.ಕೆ.ಅನಿಲ್ ಕುಮಾರ್ ಸೂಚಿಸಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ-2023ರ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಹೊಸದಾಗಿ 31,900 ಮತದಾರರ ಸೇರ್ಪಡೆಯಾಗಿದ್ದು, 7,338 ಮತದಾರರನ್ನು ತೆಗೆದುಹಾಕಲಾಗಿದೆ. 11,685 ತಿದ್ದುಪಡಿಗಳಾಗಿವೆ. 18 ರಿಂದ 19 ವಯಸ್ಸಿನ 23,002 ಹಾಗೂ 13,824 ಅಂಗವಿಕಲ ಮತದಾರರ ಸೇರ್ಪಡೆ ಬಗ್ಗೆ ಅಧಿಕಾರಿಗಳು ಗಮನಕ್ಕೆ ತಂದರು. ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಬೂತ್ ಮಟ್ಟದ ಏಜೆಂಟರನ್ನು ನೇಮಿಸಲು ಮತ್ತು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸಲಹೆ ಅಥವಾ ದೂರುಗಳಿದ್ದಲ್ಲಿ ಸಲ್ಲಿಸುವಂತೆ ವೀಕ್ಷಕರು ತಿಳಿಸಿದರು.
    ಮತದಾರರ ನೋಂದಣಾಧಿಕಾರಿಗಳು 2023ರ ಜ.5 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಣೆಗೆ ಬೇಕಾದ ಸಿದ್ಧತೆ ಮಾಡಿಕೊಳ್ಳಬೇಕು. ರಾಜಕೀಯ ಪಕ್ಷಗಳಿಗೆ ಪ್ರತಿ ನೀಡುವುದರ ಜತೆಗೆ ನೋಂದಣಾಧಿಕಾರಿ ಕಚೇರಿಯಲ್ಲಿ ಪಟ್ಟಿ ಪ್ರಕಟಿಸುವಂತೆ ಸೂಚಿಸಿದರು. ಜಿಪಂ ಸಿಇಒ ಫೌಜಿಯಾ ತರನ್ನುಮ್, ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ, ಉಪವಿಭಾಗಾಧಿಕಾರಿ ಬಸವಣ್ಣಪ್ಪ ಕಲಶೆಟ್ಟಿ, ಜಿಪಂ ಯೋಜನಾ ನಿರ್ದೇಶಕ ಟಿ.ಕೃಷ್ಣಮೂರ್ತಿ, ಮತದಾರರ ನೋಂದಣಾಧಿಕಾರಿಗಳು ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿದ್ದರು.

    ಜಿಲ್ಲೆಯಲ್ಲಿ 11,18,251 ವೋಟರ್ಸ್: ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ 278 ಮತಗಟ್ಟೆಗಳು, 1,15,924 ಪುರುಷ, 1,14,334 ಮಹಿಳಾ, 8 ಇತರ ಒಟ್ಟು 2,30,266 ಮತದಾರರಿದ್ದಾರೆ. ಕನಕಗಿರಿ ಕ್ಷೇತ್ರದಲ್ಲಿ 264 ಮತಗಟ್ಟೆಗಳು, 1,08,499 ಪುರುಷ, 1,11,346 ಮಹಿಳಾ, 8 ಇತರ ಒಟ್ಟು 2,19,853 ಮತದಾರರಿದ್ದಾರೆ. ಗಂಗಾವತಿ ಕ್ಷೇತ್ರದಲ್ಲಿ 235 ಮತಗಟ್ಟೆಗಳು, 97,886 ಪುರುಷ, 99,323 ಮಹಿಳಾ, 10 ಇತರ ಒಟ್ಟು 1,97,219 ಮತದಾರರಿದ್ದಾರೆ. ಯಲಬುರ್ಗಾ ಕ್ಷೇತ್ರದಲ್ಲಿ 256 ಮತಗಟ್ಟೆಗಳು, 1,10,555 ಪುರುಷ, 1,09,643 ಮಹಿಳಾ, 11 ಇತರ ಒಟ್ಟು 2,20,209 ಮತದಾರರಿದ್ದಾರೆ. ಕೊಪ್ಪಳ ಕ್ಷೇತ್ರದಲ್ಲಿ 289 ಮತಗಟ್ಟೆಗಳು, 1,24,444 ಪುರುಷ, 1,26,248 ಮಹಿಳಾ, 12 ಇತರ ಒಟ್ಟು 2,50,704 ಮತದಾರರಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1322 ಮತಗಟ್ಟೆಗಳಿದ್ದು, 5,57,308 ಪುರುಷ, 5,60,894 ಮಹಿಳಾ, 49 ಇತರ ಒಟ್ಟು 11,18,251 ಮತದಾರರಿದ್ದಾರೆ ಎಂದು ಡಿಸಿ ಸುಂದರೇಶ ಬಾಬು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts