More

    ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಜಾಗೃತಿ, ಆ್ಯಪ್ ಮೂಲಕ ಅರ್ಜಿ ಸಲ್ಲಿಕೆ

    ಕೊಪ್ಪಳ: ಮತದಾರರ ಪಟ್ಟಿ ಪರಿಷ್ಕರಣೆಗೆ ವೋಟರ್ ಹೆಲ್ಪ್ ಲೈನ್ ಆ್ಯಪ್ ಮೂಲಕ ಅರ್ಜಿಗಳನ್ನು ಸಲ್ಲಿಸುವಂತೆ ಮತದಾರರಲ್ಲಿ ಜಾಗೃತಿ ಮೂಡಿಸಲು ರಾಜಕೀಯ ಪಕ್ಷಗಳು ಸಹಕರಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಎಂ.ಪಿ ಮಾರುತಿ ಹೇಳಿದರು.

    ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ನಗರದಲ್ಲಿ ಸೋಮವಾರ ಆಯೋಜಿಸಿದ್ದ ರಾಜಕೀಯ ಮುಖಂಡರ ಸಭೆಯಲ್ಲಿ ಮಾತನಾಡಿದರು. ಮತದಾರರ ಪರಿಷ್ಕೃತ ಪಟ್ಟಿ ಪ್ರಕಟಿಸಿದ್ದು, ಆಕ್ಷೇಪಣೆಗಳಿದ್ದಲ್ಲಿ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು. ಪರಿಷ್ಕೃತ ಪಟ್ಟಿಯಲ್ಲಿ ಜಿಲ್ಲೆಯ 1307 ಮತಗಟ್ಟೆಗಳಲ್ಲಿ 5,62,907 ಪುರುಷ ಹಾಗೂ 5,65,783 ಮಹಿಳೆಯರು ಸೇರಿದಂತೆ ಒಟ್ಟು 11,28,690 ಮತದಾರರಿದ್ದಾರೆ ಎಂದರು.

    ಹೆಸರು ಸೇರ್ಪಡೆಗೆ ನಮೂನೆ 6ರೊಂದಿಗೆ ಅಗತ್ಯ ದಾಖಲೆ ಸಲ್ಲಿಸಬೇಕು. ಅರ್ಜಿ ಸ್ವೀಕಾರಕ್ಕೆ ಚುನಾವಣಾ ಆಯೋಗ ವೋಟರ್ ಹೆಲ್ಪ್ ಲೈನ್ ಆ್ಯಪ್ ಬಿಡುಗಡೆಗೊಳಿಸಿದೆ. ಆ್ಯಪ್ ಮೂಲಕವೇ ಅರ್ಜಿ ಸಲ್ಲಿಕೆ, ಸ್ಥಿತಿ ಮತ್ತು ಆನ್‌ಲೈನ್ ಎಪಿಕ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅರ್ಜಿದಾರರು ಸಲ್ಲಿಸುವ ದಾಖಲೆಗಳು ಆನ್‌ಲೈನ್‌ನಲ್ಲಿ ಶಾಶ್ವತವಾಗಿ ಸಂಗ್ರಹವಿರುತ್ತವೆ. ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಅರ್ಜಿ ಸಲ್ಲಿಸುವಂತೆ ಬೂತ್ ಮಟ್ಟದ ಏಜೆಂಟರು ಜಾಗೃತಿ ಮೂಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದರು.

    ತಾಲೂಕು ಮಟ್ಟದ ರಾಜಕೀಯ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಮಾಹಿತಿ ನೀಡಬೇಕು. ಬೂತ್ ಏಜೆಂಟ್‌ಗಳಿಗೆ ಆಯೋಗದಿಂದ ಗುರುತಿನ ಚೀಟಿ ನೀಡುವಂತೆ ರಾಜಕೀಯ ಮುಖಂಡರು ಒತ್ತಾಯಿಸಿದರು. ತಾಲೂಕು ಮಟ್ಟದ ಅಧಿಕೃತ ರಾಜಕೀಯ ಪ್ರತಿನಿಧಿಗಳ ವಿವರಗಳನ್ನು ತಹಸೀಲ್ದಾರ್‌ಗೆ ನೀಡಿ, ಸಭೆ ನಡೆಸಲು ತಿಳಿಸಲಾಗುವುದು. ಏಜೆಂಟ್‌ಗಳಿಗೆ ಗುರುತಿನ ಚೀಟಿ ನೀಡುವಂತೆ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಎಡಿಸಿ ತಿಳಿಸಿದರು. ವಿವಿಧ ರಾಜಕೀಯ ಪಕ್ಷಗಳ ಮುಖಂಡರಾದ ರಾಜು ಬಾಕಳೆ, ಕೃಷ್ಣಪ್ಪ ಇಟ್ಟಂಗಿ, ಮಲ್ಲಿಕಾರ್ಜುನ ಸೊರಟೂರು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts