More

    ಮೀಸಲಾತಿಗಾಗಿ ಏ.21ರಿಂದ ಅನಿರ್ದಿಷ್ಟಾವಧಿ ಧರಣಿ: ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾಹಿತಿ

    ಕೊಪ್ಪಳ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸಲು ಸರ್ಕಾರಕ್ಕೆ ನೀಡಿದ ಗಡುವು ಮುಗಿದಿದ್ದು, ಏ.21 ರಿಂದ ಕೂಡಲಸಂಗಮದಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಗುವುದೆಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

    ನಗರದ ಪಂಚಮಸಾಲಿ ಸಮುದಾಯ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಮೇಲೆ ಇರಿಸಿದ ಭರವಸೆ ಹುಸಿಯಾಗಿದೆ. 14 ತಿಂಗಳು ಕಾಲಾವಕಾಶ ನೀಡಿದರೂ ಪ್ರಯೋಜನ ಇಲ್ಲದಂತಾಗಿದೆ. ಹೀಗಾಗಿ ಹೋರಾಟ ನಡೆಸಲು ಸಮುದಾಯ ಮುಖಂಡರೊಡನೆ ಚರ್ಚಿಸಿ ನಿರ್ಧರಿಸಲಾಗಿದೆ. ಆದಾಗ್ಯೂ ಸರ್ಕಾರ ಸ್ಪಂದಿಸದಿದ್ದಲ್ಲಿ ತಾಲೂಕು, ಜಿಲ್ಲಾ ಮಟ್ಟದಲ್ಲಿ ಹೋರಾಟ ರೂಪಿಸಲಾಗುವುದು. ಅದಕ್ಕೂ ಜಗ್ಗದಿದ್ದಲ್ಲಿ ಉಪವಾಸ ವ್ರತ ಆರಂಭಿಸುತ್ತೇವೆ. ಹಿಂದುಳಿದ ವರ್ಗದ ಆಯೋಗವು ರಾಜ್ಯದ 4 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿದ್ದು, ಇನ್ನು 10 ಜಿಲ್ಲೆಗಳನ್ನು ಕೈಬಿಟ್ಟಿದೆ. ನಾವು ಈಗಾಗಲೇ 3ಬಿಯಲ್ಲಿದ್ದೇವೆ. ಅದನ್ನು 2ಎಗೆ ಬದಲಾಯಿಸಬೇಕಷ್ಟೆ. ಸರ್ಕಾರ ಮನಸ್ಸು ಮಾಡಿದರೆ ನೀಡಬಹುದು. ಆದರೆ, ಆಸಕ್ತಿ ತೋರುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

    ಸಮುದಾಯದ ಸಚಿವರು, ಶಾಸಕರು ಸೇರಿ ಎಲ್ಲ ಜನಪ್ರಿನಿಧಿಗಳು ಸಹಕಾರ ನೀಡುತ್ತಿದ್ದಾರೆ. ಕೆಲವರು ಬಹಿರಂಗವಾಗಿ ನೀಡಿದರೆ, ಇನ್ನು ಕೆಲವರು ಬೆಂಬಲ ಸೂಚಿಸಿದ್ದಾರೆ. ಸಮುದಾಯದ ಎಲ್ಲ ಜನರು ಹೋರಾಟ ಮಾಡಬೇಕೆಂದಿಲ್ಲ. ನಾವು ಮಾಡುತ್ತಿದ್ದು, ಎಲ್ಲರೂ ಸಹಕಾರ ನೀಡುತ್ತಿದ್ದಾರೆ. ವಚನಾನಂದ ಸ್ವಾಮೀಜಿ, ಸಚಿವ ಮುರುಗೇಶ ನಿರಾಣಿಯವರ ಹೇಳಿಕೆಗಳಿಗೆ ನಾನು ಪ್ರತಿಕ್ರಿಯಿಸಲ್ಲ. ಜನರಿಗೆ ಯಾರು ತಮ್ಮ ಪರವಾಗಿ ನಿಜವಾದ ಹೋರಾಟ ಮಾಡುತ್ತಿದ್ದಾರೆಂದು ಗೊತ್ತಾಗಿದೆ. ಮುಂದೆ ಯಾರಿಗೆ ಏನು ಮಾಡಬೇಕೆಂಬುದು ಅವರಿಗೆ ಚೆನ್ನಾಗಿ ಗೊತ್ತಿದೆ ಎಂದು ಮಾರ್ಮಿಕವಾಗಿ ನುಡಿದರು. ಪಂಚಮಸಾಲಿ ಸಮುದಾಯ ಮುಖಂಡರಾದ ಬಸಲಿಂಗಪ್ಪ ಭೂತೆ, ಸಂಗಮೇಶ ಬಾದವಾಡಗಿ, ದೇವರಾಜ ಹಾಲಸಮುದ್ರ, ಕಿಶೋರಿ ಬೂದನೂರ ಇತರರಿದ್ದರು.

    ಸಿಎಂ ಸಭೆ ನಡೆಸಲಿ
    ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ. ಎಲ್ಲ ಜಾತಿ, ಧರ್ಮದಲ್ಲಿ ಒಳ್ಳೆಯವರು ಹಾಗೂ ಕೆಟ್ಟವರಿರುತ್ತಾರೆ. ಯಾರೋ ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನು ಕೆಟ್ಟದಾಗಿ ಕಾಣುವುದು ಸರಿಯಲ್ಲ. ಇಂಥವರ ನಡುವೆ ಅಮಾಯಕರು ಬಲಿಯಾಗಬಾರದು. ಆಯಾ ಸಮುದಾಯದ ಮುಖಂಡರು ಹಾಗೂ ಧರ್ಮ ಗುರುಗಳು ಬುದ್ಧಿ ಹೇಳಬೇಕು. ಸಿಎಂ ಬಸವರಾಜ ಬೊಮ್ಮಾಯಿ ಎಲ್ಲ ಧರ್ಮ ಗುರುಗಳ ಸಭೆ ಕರೆದು ರಾಜ್ಯದಲ್ಲಿ ಜನಾಂಗೀಯ ಗಲಭೆ ನಿಯಂತ್ರಿಸಲು ಮನವಿ ಮಾಡಿ ಶಾಂತಿ ನೆಲೆಸುವಂತೆ ಮಾಡಬೇಕೆಂದು ಕೂಡಲಸಂಗಮ ಶ್ರೀಗಳು ಅಭಿಪ್ರಾಯಪಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts