More

    ರಸ್ತೆಗಿಳಿಯದ ಸಾರಿಗೆ ಬಸ್‌ಗಳು, ಮುಂದುವರಿದ ಪ್ರಯಾಣಿಕರ ಪರದಾಟ

    ಕೊಪ್ಪಳ: ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಒತ್ತಾಯಿಸಿ ಶನಿವಾರವೂ ಸಾರಿಗೆ ನೌಕರರು ಮುಷ್ಕರ ಮುಂದುವರಿಸಿದ್ದು, ಬಸ್ ಸಂಚಾರವವಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿದೆ.

    ಜಿಲ್ಲೆಯಲ್ಲಿ ಐದು ವಿಭಾಗಗಳಿದ್ದು, ನಿತ್ಯ 490ಕ್ಕೂ ಅಧಿಕ ಮಾರ್ಗಗಳಿಗೆ ಬಸ್ ಸಂಚಾರವಿದೆ. ಹುಬ್ಬಳ್ಳಿ, ರಾಯಚೂರು, ಹೈದರಾಬಾದ್, ಬೆಂಗಳೂರು ಸೇರಿ ಇತರ ಸ್ಥಳಗಳಿಗೆ ನಿತ್ಯ ಸಾವಿರಾರು ಪ್ರಯಾಣಿಕರು ಪ್ರಯಾಣಿಸುತ್ತಾರೆ. ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಬೇಡಿಕೆಯಿಟ್ಟು ನೌಕರರು ಮುಷ್ಕರ ಹಮ್ಮಿಕೊಂಡಿದ್ದಾರೆ. ಶುಕ್ರವಾರ ಬಸ್‌ನಿಲ್ದಾಣದಲ್ಲಿ ಬಸ್ ನಿಲ್ಲಿಸಿ, ಪ್ರತಿಭಟಿಸಿದ ಕಾರ್ಮಿಕರು ಶನಿವಾರ ನಿಲ್ದಾಣದತ್ತ ಸುಳಿಯಲಿಲ್ಲ. ಜಿಲ್ಲಾ ಮಟ್ಟದ ಅಧಿಕಾರಿಗಳು ಸಂಧಾನ ನಡೆಸಲು ಹಲವು ಬಾರಿ ಮಾತುಕತೆ ನಡೆಸಿದರೂ ಫಲ ನೀಡಲಿಲ್ಲ.

    ದೂರವಾಣಿ ಕರೆ ಮಾಡಿದರೆ, ಬರುವುದಾಗಿ ಹೇಳುವ ನೌಕರರು ವಿಭಾಗ ಕಚೇರಿ, ನಿಲ್ದಾಣದತ್ತ ಸುಳಿಯುತ್ತಿಲ್ಲ. ಮತ್ತೊಂದೆಡೆ, ಪ್ರಯಾಣಿಕರು ಬಸ್ ಸಂಚಾರ ಯಾವಾಗ ಆರಂಭವಾಗುತ್ತದೆ ಎಂದು ಅಧಿಕಾರಿಗಳನ್ನು ಕೇಳಿದರೂ ಸೂಕ್ತ ಉತ್ತರ ಸಿಗದೆ ಪರದಾಡುತ್ತಿದ್ದಾರೆ. ಬೆಂಗಳೂರು, ಹೈದರಾಬಾದ್, ಮುಂಬೈಯಂಥ ಮಹಾ ನಗರಗಳಿಗೆ ಖಾಸಗಿ ಬಸ್ ಸೇವೆ ಇದೆ. ಆದರೆ, ಜಿಲ್ಲಾ ಹಂತ, ಅಕ್ಕಪಕ್ಕದ ಬಳ್ಳಾರಿ, ಗದಗ, ಹುಬ್ಬಳ್ಳಿ ಸೇರಿ ಇತರ ಜಿಲ್ಲೆಗೆ ಪ್ರಯಾಣಿಸುವವರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಈ ಜಿಲ್ಲೆಗಳಿಗೆ ಖಾಸಗಿ ಬಸ್ ಸೇವೆ ಇಲ್ಲದ ಕಾರಣ, ಲಾರಿ, ಕ್ರೂಸರ್, ಬಾಡಿಗೆ ಕಾರ್ ಪಡೆದು ಪ್ರಯಾಣಿಸುತ್ತಿದ್ದಾರೆ.

    ನಿತ್ಯ 40 ಲಕ್ಷ ರೂ. ನಷ್ಟ
    ಕೊಪ್ಪಳ ವಿಭಾಗದಲ್ಲಿ ಒಟ್ಟು 5 ಉಪ ವಿಭಾಗಗಳು ಬರುತ್ತವೆ. ನಿತ್ಯ 490ಕ್ಕೂ ಅಧಿಕ ಬಸ್‌ಗಳು ಓಡಾಡುತ್ತವೆ. ಐದು ವಿಭಾಗಗಳಿಂದ ನಿತ್ಯ 38-40 ಲಕ್ಷ ರೂ. ಆದಾಯ ನಿಗಮಕ್ಕೆ ಬರುತ್ತದೆ. ಕಳೆದೆರೆಡು ದಿನದಿಂದ ಬಸ್‌ಗಳು ಡಿಪೋದಲ್ಲೇ ಬೀಡು ಬಿಟ್ಟಿದ್ದು, ನಿಗಮಕ್ಕೆ 80 ಲಕ್ಷ ರೂ. ನಷ್ಟ ಸಂಭವಿಸಿದೆ.

    ಮುಷ್ಕರದಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಸಂಚಾರ ಆರಂಭಿಸುವಂತೆ ನಮ್ಮ ನೌಕರರಲ್ಲಿ ಮನವಿ ಮಾಡುತ್ತಿದ್ದೇವೆ. ಬರುವುದಾಗಿ ಹೇಳಿ, ಯಾರೊಬ್ಬರೂ ಬರುತ್ತಿಲ್ಲ. ನಮ್ಮ ವಿಭಾಗದಲ್ಲಿ ನಿತ್ಯ 40 ಲಕ್ಷ ರೂ. ನಷ್ಟ ಉಂಟಾಗುತ್ತಿದೆ.
    | ಎಂ.ಎ.ಮುಲ್ಲಾ ವಿಭಾಗೀಯ ನಿಯಂತ್ರಕ ಎನ್‌ಇಕೆಎಸ್‌ಆರ್‌ಟಿಸಿ ಕೊಪ್ಪಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts