More

    ಭರವಸೆ ಈಡೇರಿಸಿದ ಬೊಮ್ಮಾಯಿ- ನವಲಿ ಜಲಾಶಯ, ಅಂಜನಾದ್ರಿ ಅಭಿವೃದ್ಧಿಗೆ ಅನುದಾನ

    ಕೊಪ್ಪಳ: ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಚೊಚ್ಚಲ ಬಜೆಟ್‌ನಲ್ಲಿ ನಿರೀಕ್ಷೆಯಂತೆ ಜಿಲ್ಲೆಗೆ ಹಲವು ಯೋಜನೆ ಘೋಷಿಸಿದ್ದು, ವರ್ಷದಲ್ಲಿ ಕಾರ್ಯಾನುಷ್ಠಾನಗೊಂಡರೆ ಬಹುದಿನಗಳ ಬೇಡಿಕೆಗಳು ಈಡೇರಿದಂತಾಗಲಿವೆ.

    ಒಣ ಬೇಸಾಯ ಆಶ್ರಿತ ಜಿಲ್ಲೆಯಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಬೇಕೆಂಬುದು ಬಹುಮುಖ್ಯ ಬೇಡಿಕೆ. ನವಲಿ ಸಮಾನಾಂತರ ಜಲಾಶಯದ ಡಿಪಿಆರ್ ಸಿದ್ಧಗೊಂಡಿದ್ದು, ಆಂಧ್ರ, ತೆಲಂಗಾಣ ಸರ್ಕಾರದ ಸಹಮತ ಪಡೆಯುವುದು ಬಾಕಿ ಇದೆ. ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಇತ್ತೀಚೆಗೆ ನೀಡಿದ ಭರವಸೆಯಂತೆ ಜಲಾಶಯಕ್ಕೆ 1 ಸಾವಿರ ಕೋಟಿ ರೂ. ಅನುದಾನ ಘೋಷಿಸಲಾಗಿದೆ. ಆದರೆ ಯೋಜನೆಗೆ ಹತ್ತಾರು ಸಾವಿರ ಕೋಟಿ ರೂ. ಬೇಕಿದೆ. ಅದಕ್ಕೂ ಮುನ್ನ ಆಂಧ್ರ, ತೆಲಂಗಾಣ ಸರ್ಕಾರಗಳ ಒಪ್ಪಿಗೆ ಮುಖ್ಯ. ಅಲ್ಲಿನ ಸರ್ಕಾರಗಳೊಂದಿಗೆ ಸಭೆ ನಡೆಸಿ ಅನುಮೋದನೆ ಪಡೆದುಕೊಂಡಲ್ಲಿ ಜಲಾಶಯ ಕಾರ್ಯ ಸುಗಮವಾಗಲಿದೆ. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಮುಂದಡಿ ಇಡಬೇಕಿದೆ. ಸಾವಿರ ಕೋಟಿ ರೂ.ನಲ್ಲಿ ಏನೇನು ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದೆಂಬ ವಿವರ ನೀಡದಿದ್ದರೂ, ಭೂ ಸ್ವಾಧೀನ, ಕಾಲುವೆ ನಿರ್ಮಾಣ ಕೈಗೊಳ್ಳಬಹುದೆಂದು ಜನರ ನೀರಿಕ್ಷೆಯಿದೆ.

    ಅಳವಂಡಿ-ಬೆಟಗೇರಿ, ಬಹಾದ್ದೂರ ಬಂಡಿ ಏತ ನೀರಾವರಿ ಕಾಮಗಾರಿ ಆರಂಭವಾಗಿ ದಶಕ ಕಳೆಯುತ್ತಿದೆ. ಬಜೆಟ್‌ನಲ್ಲಿ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದೆಂದು ಭರವಸೆ ನೀಡಿದ್ದರೂ, ಅನುದಾನ ಪ್ರಸ್ತಾಪವಾಗಿಲ್ಲ. ಇನ್ನು ಎರಡು ದಶಕಗಳ ಕಾಮಗಾರಿಯಾದ, ಕೊಪ್ಪಳ ಕ್ಷೇತ್ರಕ್ಕೆ ನೀರಾವರಿ ಕಲ್ಪಿಸುವ ಸಿಂಗಟಾಲೂರು ಏತ ನೀರಾವರಿ ವಿಷಯ, ಅನುದಾನವನ್ನು ಪ್ರಸ್ತಾಪಿಸದಿರುವುದು ಕೊಪ್ಪಳ ಭಾಗದ ರೈತರಿಗೆ ನಿರಾಸೆ ಮೂಡಿಸಿದೆ. ಕೃಷ್ಣಾ ಮೇಲ್ದಂಡೆ ಯೋಜನೆ ಹಂತ 3ರಲ್ಲಿ ಕೊಪ್ಪಳ ಏತ ನೀರಾವರಿ ಒಳಪಡಲಿದೆ. 3ನೇ ಹಂತದ ಯೋಜನೆಗೆ ಒಟ್ಟಾರೆ 5 ಸಾವಿರ ಕೋಟಿ ರೂ. ಘೋಷಿಸಿದ್ದು, ಅದರಲ್ಲಿ ಕೊಪ್ಪಳ ಯೋಜನೆಗೆ ಎಷ್ಟು ಅನುದಾನ ಒಲಿಯುವುದೆಂಬ ಕುತೂಹಲ ಮೂಡಿಸಿದೆ. ಕಾರಟಗಿ ರೈಸ್ ಟೆಕ್ನಾಲಜಿ ಪಾರ್ಕ್, ಕನಕಗಿರಿಯ ಸಿರಿವಾರ ತೋಟಗಾರಿಕೆ ಟೆಕ್ ಪಾರ್ಕ್ ವಿಷಯ ಪ್ರಸ್ತಾಪವಾಗಿಲ್ಲ.

    ಕಳೆದ ಬಜೆಟ್‌ನಲ್ಲಿ ಪ್ರಸ್ತಾಪವಾಗಿದ್ದ ಕಿನ್ನಾಳ ಗೊಂಬೆಗಳಿಗೆ ಮಾರುಕಟ್ಟೆ ಕಲ್ಪಿಸುವ ವಿಷಯವನ್ನು ಸಿಎಂ ಪುನರುಚ್ಛರಿಸಿದ್ದಾರೆ. ಕೌದಿ ಹಾಗೂ ಕಿನ್ನಾಳ ಗೊಂಬೆಗಳ ವಹಿವಾಟು, ಉದ್ಯೋಗ, ರಫ್ತು ಹೆಚ್ಚಳಕ್ಕೆ ಅವಕಾಶ ಕಲ್ಪಿಸಲು ಮೈಕ್ರೋಕ್ಲಸ್ಟರ್ ಅಭಿವೃದ್ಧಿಗೆ ಸರ್ಕಾರ ಮನಸ್ಸು ಮಾಡಿದ್ದು, ಸಾಂಪ್ರದಾಯಿಕ ಕಲೆಗಳ ಉಳಿವಿಗೆ ಪ್ರಾಶಸ್ತ್ಯ ನೀಡಿರುವುದು ಶ್ಲಾಘನೀಯ. ಗಿಣಿಗೇರಿ-ರಾಯಚೂರು, ಗದಗ-ವಾಡಿ ರೈಲ್ವೆ ಯೋಜನೆಗಳಿಗೆ ರಾಜ್ಯದ ಪಾಲನ್ನು ನೀಡಿ ಮುಂದುವರಿಸಲಾಗುವುದೆಂದು ತಿಳಿಸಲಾಗಿದೆ. ಉಳಿದಂತೆ ಆನೆಗೊಂದಿ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ, ಸೂಪರ್ ಸ್ಪೆಷಾಲಿಟಿ, ಇಎಸ್‌ಐ ಆಸ್ಪತ್ರೆಗೆ ರಾಜ್ಯದ ಸಹಕಾರ ಹಾಗೂ ಅನುದಾನ, ಕೈಗಾರಿಕೆಗಳಲ್ಲಿ ಕೆಲಸ ಮಾಡಲು ಉದ್ಯೋಗಿಗಳಿಗೆ ತರಬೇತಿ ನೀಡಲು ಕೌಶಲ ತರಬೇತಿ ಕೇಂದ್ರ, ತುಂಗಭದ್ರಾ ಜಲಾಶಯದ ನಾಲೆಗಳ ಆಧುನೀಕರಣ, ಭತ್ತ ಮಂಡಳಿ ಆರಂಭ ವಿಷಯಗಳಿಗೆ ಬಜೆಟ್‌ನಲ್ಲಿ ಆದ್ಯತೆ ನೀಡಿಲ್ಲ.

    ಘೋಷಿಸಿದಷ್ಟೂ ಹಣ ನೀಡಲಿ: ಹನುಮಂತ ಜನಿಸಿದ ಪ್ರದೇಶ ಅಂಜನಾದ್ರಿ ಬೆಟ್ಟದಲ್ಲಿ ರೋಪ್ ವೇ ನಿರ್ಮಾಣ ಹಾಗೂ ಭಕ್ತರಿಗೆ ಮೂಲಸೌಕರ್ಯ ಕಲ್ಪಿಸಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ 100 ಕೋಟಿ ರೂ. ಅನುದಾನ ಘೋಷಿಸಲಾಗಿದೆ. ಈ ಮೂಲಕ ಸಿಎಂ ಬೊಮ್ಮಾಯಿ ಕಳೆದ ಕೆಲ ತಿಂಗಳಿಂದ ಉಚ್ಛರಿಸುತ್ತಿದ್ದ ಅಂಜನಾದ್ರಿ ಅಭಿವೃದ್ಧಿಗೆ ಪ್ರಥಮ ಆದ್ಯತೆ ಕಲ್ಪಿಸಿದ್ದು, ಆಂಧ್ರದ ತಿರುಪತಿ ತಿರುಮಲ ದೇವಾಲಯ ಟ್ರಸ್ಟ್‌ಗೆ ತಿರುಗೇಟು ನೀಡಿದ್ದಾರೆ. ಮೂರು ವರ್ಷದ ಹಿಂದೆಯೇ 20 ಕೋಟಿ ರೂ. ಘೋಷಿಸಿದ್ದರೂ, ಪ್ರಗತಿಯಾಗಿಲ್ಲ. ಈ ಬಾರಿಯಾದರೂ ಘೋಷಿಸಿದಷ್ಟು ಅನುದಾನ ನೀಡಿ, ಸಮಗ್ರ ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕಿದೆ.

    ನನಸಾದ ವಿವಿ ಕನಸು: ಉನ್ನತ ಶಿಕ್ಷಣದಲ್ಲಿ ಜಿಲ್ಲೆ ಹಿಂದುಳಿದಿದ್ದು, ಸ್ನಾತಕೋತ್ತರ ಕೇಂದ್ರಗಳಿದ್ದರೂ ಕಟ್ಟಡ ಸೇರಿ ಮೂಲ ಸೌಕರ್ಯಗಳಿಲ್ಲ. ಹೀಗಾಗಿ ಪ್ರತ್ಯೇಕ ವಿವಿ ಆರಂಭಿಸಬೇಕೆಂಬುದು ಬಹುದಿನದ ಬೇಡಿಕೆಯಾಗಿತ್ತು. ನಿರೀಕ್ಷೆಯಂತೆ ಕೆಲ ತಿಂಗಳ ಹಿಂದೆ ವರದಿ ಪಡೆದಿದ್ದ ಸರ್ಕಾರ ಬಜೆಟ್‌ನಲ್ಲಿ ನೂತನ ಟೆಕ್ನಾಲಜಿಯಡಿ ಸಾಂಪ್ರದಾಯಿಕ ವಿವಿಗಳಿಗಿಂತ ಭಿನ್ನ ವಿವಿ ಆರಂಭಿಸುವುದಾಗಿ ತಿಳಿಸಿದೆ. ವಾರ್ಷಿಕ 2 ಕೋಟಿ ರೂ. ಅನುದಾನ ನೀಡುವುದಾಗಿ ಹೇಳಿದ್ದು, ಜಿಲ್ಲೆಯ ಜನರಲ್ಲಿ ಹರ್ಷ ಮೂಡಿಸಿದೆ.

    ವಿಮಾನ ನಿಲ್ದಾಣ ಪ್ರಸ್ತಾಪ: ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶವಿದೆ. ಜತೆಗೆ ದೇಶದ ಮೊದಲ ಆಟಿಕೆ ಕ್ಲಸ್ಟರ್ ಆರಂಭವಾಗುತ್ತಿದೆ. ಹತ್ತಾರು ಕೈಗಾರಿಕೆಗಳಿವೆ. ರೈಸ್, ತೋಟಗಾರಿಕೆ ಟೆಕ್ ಪಾರ್ಕ್ ನಿರ್ಮಿಸಲಾಗುತ್ತಿದೆ. ಇವುಗಳಿಗೆ ಪೂರಕವಾಗಿ ಸಾರಿಗೆ ಸಂಪರ್ಕ ವೃದ್ಧಿಗೆ ವಿಮಾ ನಿಲ್ದಾಣ ಮಾಡಬೇಕಿದೆ. ಉಡಾನ್ ಯೋಜನೆಗೆ ಜಿಲ್ಲೆ ಆಯ್ಕೆಯಾದರೂ ವಿಮಾನ ನಿಲ್ದಾಣವಿಲ್ಲ. ಹೀಗಾಗಿ ವಿಮಾನಯಾನ ಆರಂಭಿಸಬೇಕೆಂದು ಜನರು ಹೋರಾಟ ರೂಪಿಸಿದ್ದಾರೆ. ಇತ್ತೀಚೆಗೆ ರಾಜ್ಯಮಟ್ಟದ ಅಧಿಕಾರಿಗಳು ಭೇಟಿ ನೀಡಿದ್ದು, ಬಜೆಟ್‌ನಲ್ಲಿ ನಿಲ್ದಾಣ ಆರಂಭಕ್ಕೆ ಕಾರ್ಯಸಾಧ್ಯತಾ ವರದಿ ರಚನೆಗೆ ಮುಂದಾಗಿರುವುದು ಆಶಾಭಾವನೆ ಮೂಡಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts