More

    ಹಲಾಲ್ ಕಾನೂನು ಸಮಸ್ಯೆ ಅಲ್ಲ: ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ

    ಕೊಪ್ಪಳ: ಹಲಾಲ್ ವಿವಾದ ಕಾನೂನಾತ್ಮಕ ಸಮಸ್ಯೆಯಲ್ಲ, ಧಾರ್ಮಿಕ ಭಾವನೆಗೆ ಸಂಬಂಧಿಸಿದ್ದು. ಇದರಲ್ಲಿ ಕಾನೂನು ಸಮಸ್ಯೆಯಾದಲ್ಲಿ ಸರ್ಕಾರ ಮಧ್ಯಪ್ರವೇಶಿಸಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

    ಮುನಿರಾಬಾದ್ ಐಆರ್‌ಬಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 60 ಬುದ್ಧಿಜೀವಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈ ಬುದ್ಧಿಜೀವಿಗಳು ಒಬ್ಬರಿಗೆ ಕೋಮುವಾದ ಮಾಡುವಂತೆ ಹೇಳುತ್ತಾರೆ. ಇನ್ನೊಬ್ಬರಿಗೆ ಜಾತ್ಯತೀತರಾಗಿರುವಂತೆ ಉಪದೇಶ ಹೇಳುತ್ತಾರೆ. ನಾವು ರಾಜಕಾರಣಿಗಳು. ರಾಜಕೀಯ ಲಾಭಕ್ಕಾಗಿ ಏನಾದರೂ ಹೇಳಬಹುದು. ಆದರೆ, ಬುದ್ಧಿಜೀವಿಗಳಿಗೆ ಸತ್ಯ ಹೇಳಲು ಏನಾಗಿದೆ ? ದೇಶದ ಕಾನೂನು ಗೌರವಿಸದವರಿಗೆ ಮೊದಲು ಬುದ್ಧಿ ಹೇಳಲಿ. ನಮ್ಮ ರಕ್ತದಲ್ಲಿ ಜಾತ್ಯತೀತತೆ ಇದೆ. ಅದನ್ನು ಬುದ್ಧಿಜೀವಿಗಳಿಂದ ಕಲಿಯಬೇಕಿಲ್ಲ. ಇವರಿಗೆ ಒಂದು ವರ್ಗಕ್ಕೆ ಬುದ್ಧಿ ಹೇಳಲು ಭಯವಿದೆ. ಹಿಜಾಬ್ ವಿಚಾರದಲ್ಲಿ ಇವರು ಏನೂ ಹೇಳದೆ ಮೌನವಾಗಿದ್ದರು. ಈಗ ಪತ್ರ ಬರೆದಿದ್ದಾರೆ. ಇವರು ಬುದ್ಧಿ ಜೀವಿಗಳಲ್ಲವೆಂದು ತರಾಟೆ ತೆಗೆದುಕೊಂಡರು.

    ಸಮವಸ್ತ್ರ ಎಂಬುದು ಬ್ರಿಟಿಷರ ಕಾಲದಿಂದ ಇದೆ. ಸಮಾನತೆ ಸಂಕೇತವಾಗಿ ಅದನ್ನು ಬಳಸಲಾಗುತ್ತದೆ. ಈ ಬಗ್ಗೆ ಇವರು ಮಾತನಾಡಬೇಕಿತ್ತು. ಇವರು ನಮ್ಮಂತೆ ಮಾತನಾಡಿ ನೋಡಲಿ. ಜನರು ತಿರಸ್ಕರಿಸುತ್ತಾರೆ. ಅದಕ್ಕೆ ಅವರು ಬಾಯಿ ಬಿಡುವುದಿಲ್ಲ. ಯಾವಾಗ ಬಾಯಿ ಬಿಡಬೇಕೆಂದು ಅವರಿಗೆ ಚೆನ್ನಾಗಿ ಗೊತ್ತಿದೆ. ಬಿ.ಕೆ.ಹರಿಪ್ರಸಾದ್ ಚಿಲ್ಲರೆ ರಾಜಕಾರಣ ಮಾಡುತ್ತಿದ್ದಾರೆ. ಪ್ರತಿಪಕ್ಷದವರಾಗಿ ಆಧಾರ ಸಹಿತ ಟೀಕೆ ಮಾಡಲಿ. ತಪ್ಪಿದ್ದರೆ ನಾವು ತಿದ್ದಿಕೊಳ್ಳುತ್ತೇವೆ. ಆದರೆ, ಆರ್‌ಎಸ್‌ಎಸ್‌ಗೆ ದುಡ್ಡು ಹೋಗುತ್ತದೆ ಎಂದೆಲ್ಲ ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ ಎಂದು ಕಿಡಿ ಕಾರಿದರು.

    ಈ ವರ್ಷ 2220 ಕೆಎಸ್‌ಆರ್‌ಪಿ ಪೊಲೀಸರ ನೇಮಕ ಮಾಡಿಕೊಳ್ಳಲಾಗಿದೆ. ಪೊಲೀಸರಿಗಾಗಿ 20 ಸಾವಿರ ಮನೆ ಕಟ್ಟುತ್ತಿದ್ದೇವೆ. 200 ಕೋಟಿ ರೂ. ಅನುದಾನದಲ್ಲಿ 100 ಹೊಸ ಠಾಣೆ ನಿರ್ಮಿಸಲಾಗುತ್ತಿದೆ. ಶೀಘ್ರದಲ್ಲೇ ಪಿಎಸ್‌ಐ ಹುದ್ದೆಗಳ ನೇಮಕಾತಿ ನಡೆಸಲಾಗುವುದು.
    | ಆರಗ ಜ್ಞಾನೇಂದ್ರ, ಗೃಹ ಸಚಿವ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts