More

    ಕೊಪ್ಪಳದಲ್ಲಿ ಹಣ್ಣುಗಳ ಪ್ರದರ್ಶನ-ಮಾರಾಟ ಮೇಳಕ್ಕೆ ಚಾಲನೆ

    ಕೊಪ್ಪಳ: ಗುಣಮಟ್ಟದ ಹಣ್ಣುಗಳನ್ನು ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಗ್ರಾಹಕರಿಗೆ ತಲುಪಿಸಲು ಅನುಕೂಲವಾಗುವಂತೆ ಮೇಳ ಆಯೋಜಿಸಿದ್ದು, ರೈತರು ಹಾಗೂ ಗ್ರಾಹಕರು ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್ ಹೇಳಿದರು.

    ನಗರದ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಶಿವರಾತ್ರಿ ಅಂಗವಾಗಿ ನಾಲ್ಕು ದಿನ ಆಯೋಜಿಸಿರುವ ವಿವಿಧ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು. ರೈತರು ಹಾಗೂ ಗ್ರಾಹಕರ ನಡುವೆ ಮಧ್ಯವರ್ತಿಗಳೇ ಅಧಿಕ ಲಾಭ ಪಡೆಯುತ್ತಾರೆ. ಮಾರಾಟ ಮೇಳ ಆಯೋಜನೆಯಿಂದ ಅದನ್ನು ತಪ್ಪಿಸುವ ಜತೆಗೆ ಮಾರುಕಟ್ಟೆ ಪರಿಚಯಿಸಬಹುದು. ಈ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ಉತ್ತಮ ಕೆಲಸ ಮಾಡಿದೆ. ರೈತರಿಗೆ ಉತ್ತಮ ದರ ದೊರೆತರೆ, ಗ್ರಾಹಕರಿಗೆ ಕಡಿಮೆ ದುಡ್ಡಿಗೆ ಗುಣಮಟ್ಟದ ಉತ್ಪನ್ನ ದೊರೆಯಲಿದೆ ಎಂದರು.

    ಪ್ಲಾಸ್ಟಿಕ್ ಬಳಕೆ ತಡೆಯುವ ಉದ್ದೇಶದಿಂದ ಸಿದ್ಧಪಡಿಸಿದ ಪರಿಸರ ಸ್ನೇಹಿ ಬ್ಯಾಗ್‌ಗಳನ್ನು ಜಿಪಂ ಸಿಇಒ ಫೌಜಿಯಾ ತರನ್ನುಮ್ ಬಿಡುಗಡೆಗೊಳಿಸಿದರು. ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷ ಯಂಕಣ್ಣ ಯರಾಶಿ, ತಹಸೀಲ್ದಾರ್ ಅಮರೇಶ್ ಬಿರಾದಾರ್, ತಾಪಂ ಇಒ ಕೆ.ಎಂ.ಮಲ್ಲಿಕಾರ್ಜುನ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಜಗನ್ನಾಥರೆಡ್ಡಿ, ಮಂಜುನಾಥ ಲಿಂಗಣ್ಣನವರ, ಕೇಂದ್ರ ಸ್ಥಾನಿಕ ಸಹಾಯಕ ಶರಣಬಸವ ಇತರರಿದ್ದರು.

    ವಿವಿಧ ತಳಿಯ ಫ್ರೂಟ್ಸ್ ಇವೆ
    ಮೇಳದಲ್ಲಿ 12 ಸ್ಟಾಲ್ ತೆರೆದಿದ್ದು, ದ್ರಾಕ್ಷಿ, ದಾಳಿಂಬೆ, ಪೇರಲ, ಅಂಜೂರ, ಕಲ್ಲಂಗಡಿ, ಕರಬೂಜ, ಬಾಳೆ, ಪಪ್ಪಾಯ, ಅಣಬೆ, ಜೇನು ಪ್ರದರ್ಶನ ಹಾಗೂ ಮಾರಾಟ ಮಾಡಲಾಗುತ್ತಿದೆ. ವಿವಿಧ ತಳಿಯ ಹಣ್ಣುಗಳು, ವೈನ್, ಅನಾರದಾನ, ವಿವಿಧ ಹಣ್ಣುಗಳ ಜ್ಯೂಸ್, ಚಾಕೋಲೇಟ್, ಸಾಬೂನು, ಫೇಸ್‌ವಾಶ್, ಶಾಂಪೂ, ಫೇಸ್ ಪ್ಯಾಕ್, ಫೇಸ್ ಸ್ಕರ್ಬ್, ಫೇಸ್ ಮಾಸ್ಕ್ ಮತ್ತಿತರ ಉತ್ಪನ್ನಗಳನ್ನು ಮಾರಾಟಕ್ಕಿಟ್ಟಿದ್ದು, ಆಕರ್ಷಕವಾಗಿವೆ. ಒಣ ಅಣಬೆ, ಫ್ರೆಶ್ ಅಣಬೆ, ಅಣಬೆ ಉಪ್ಪಿನಕಾಯಿ, ಅಣಬೆ ಹಿಂಡಿ(ಚಟ್ನಿ), ಜೇನು ತುಪ್ಪ, ಜೇನಿನಿಂದ ತಯಾರಿಸಿದ ಜಾಮ್, ಕ್ಯಾಂಡಿ ಇತರ ಆಯುರ್ವೇದ ಉತ್ಪನ್ನಗಳಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts