More

    ಕೊಪ್ಪಳ ಜಿಲ್ಲೆಗೆ ಹಳೇ ಮಿಠಾಯಿ ಕೊಟ್ಟ ಬೊಮ್ಮಾಯಿ; ಹಿಂದಿನ ಯೋಜನೆಗಳ ಪುನರುಚ್ಛಾರ

    ವಿ.ಕೆ.ರವೀಂದ್ರ ಕೊಪ್ಪಳ
    ಕೊಪಣ ನಾಡು ಕೊಪ್ಪಳದೊಂದಿಗೆ ನಂಟು ಹೊಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೆಲ ತಿಂಗಳ ಹಿಂದೆ ಜಿಲ್ಲೆಗೆ ಬಂದಾಗ ನೀರಾವರಿ ಯೋಜನೆ ಅನುಷ್ಠಾನ ಸೇರಿ ಅನೇಕ ಭರವಸೆಗಳನ್ನು ನೀಡಿದ್ದರು. ಆದರೆ, ಶುಕ್ರವಾರ ಮಂಡನೆಯಾದ ಬಜೆಟ್‌ನಲ್ಲಿ ಕಳೆದ ಬಜೆಟ್‌ನಲ್ಲಿ ಘೋಷಿಸಿದ ಯೋಜನೆಗಳನ್ನೇ ಮರು ಪ್ರಸ್ತಾಪಿಸಿದ್ದು ಬಿಟ್ಟರೆ ಯಾವೊಂದು ಭರವಸೆ ಈಡೇರಿಸಿಲ್ಲ. ಹೀಗಾಗಿ ಕೊಟ್ಟ ಮಾತು ತಪ್ಪುವ ಮೂಲಕ ಜಿಲ್ಲೆಯ ಜನರಿಗೆ ನಿರಾಸೆ ಮೂಡಿಸಿದ್ದಾರೆ.

    ತುಂಗಭದ್ರೆ ತನ್ನ ಒಡಲಲ್ಲಿ ಹರಿದರೂ ಜಿಲ್ಲಾ ಕೇಂದ್ರ ಕೊಪ್ಪಳ ಮಾತ್ರ ನೀರಾವರಿ ಭಾಗ್ಯ ಕಂಡಿಲ್ಲ. ಕುಡಿವ ನೀರಿನ ಬವಣೆ ಸಂಪೂರ್ಣ ತಪ್ಪಿಲ್ಲ. ಬೊಮ್ಮಾಯಿ ಜಲಸಂಪನ್ಮೂಲ ಸಚಿವರಾಗಿದ್ದಾಗ ಕೊಪ್ಪಳ ಏತ ನೀರಾವರಿಗೆ ಅಡಿಗಲ್ಲು ನೆರವೇರಿಸಲಾಗಿದೆ. ಎರಡು ದಶಕಗಳ ಹಿಂದೆ ಘೋಷಣೆಯಾದ ಸಿಂಗಟಾಲೂರು ಏತ ನೀರಾವರಿ ಬಗ್ಗೆ ಅವರಿಗೆ ಸಂಪೂರ್ಣ ಅರಿವಿದೆ. ಉಳಿದಂತೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ವಿಶ್ವವಿದ್ಯಾಲಯ ಅಭಿವೃದ್ಧಿ, ಸ್ನಾತಕೋತ್ತರ ಕೇಂದ್ರಕ್ಕೆ ಕಟ್ಟಡ, ವಿಮಾನ ನಿಲ್ದಾಣ ನಿರ್ಮಾಣ ಪ್ರಸ್ತಾಪಗಳನ್ನು ಸ್ವತಃ ಅವರೇ ಜಿಲ್ಲೆಗೆ ಬಂದಾಗ ಪ್ರಸ್ತಾಪಿಸಿದ್ದರು. ತಮ್ಮ ಅವಧಿಯಲ್ಲಿ ಪೂರ್ಣಗೊಳಿಸುವ ಅಭಯ ನೀಡಿದ್ದರು. ಆದರೆ, ಬಜೆಟ್ ಪ್ರತಿಯಲ್ಲಿ ಮಾತ್ರ ಯಾವೊಂದು ಭರವಸೆ ಸ್ಥಾನ ಪಡೆಯದಿರುವುದು ಜಿಲ್ಲೆಯ ಜನರಲ್ಲಿ ಅಚ್ಚರಿಯ ಜತೆಗೆ ಸಾಕಷ್ಟು ಬೇಸರ ಮೂಡಿಸಿದೆ.

    ಕೊಪ್ಪಳ, ರಾಯಚೂರು, ಬಳ್ಳಾರಿ, ವಿಜಯನಗರ ಜಿಲ್ಲೆಗಳ ಜೀವನಾಡಿ ತುಂಗಭದ್ರಾ ಜಲಾಶಯದಲ್ಲಿನ ಹೂಳಿಗೆ ಪರ್ಯಾಯವಾಗಿ ನವಲಿ ಜಲಾಶಯ ನಿರ್ಮಿಸುವುದಾಗಿ ದಶಕದಿಂದ ಹೇಳಲಾಗುತ್ತಿದೆ. ಕಳೆದ ಬಜೆಟ್‌ನಲ್ಲಿ ಒಂದು ಸಾವಿರ ಕೋಟಿ ರೂ. ಘೋಷಿಸಿದ್ದ ಸರ್ಕಾರ, ಈ ಬಾರಿ ಅದನ್ನು ಅನುಷ್ಠಾನ ಮಾಡುವುದಾಗಿ ಹೇಳಿದೆ. ವಿಮಾನ ನಿಲ್ದಾಣಕ್ಕೆ ಕೆಕೆಆರ್‌ಡಿಬಿಯಿಂದ 40 ಕೋಟಿ ರೂ. ಕೊಟ್ಟಿದ್ದು, ಕಾರ್ಯಗತಗೊಳಿಸುವುದಾಗಿ ತಿಳಿಸಿದೆ. ತಳಕಲ್ ಸರ್ಕಾರಿ ಇಂಜಿನಿಯರಿಂಗ್ ಕಾಲೇಜನ್ನು ಐಐಟಿ ಮಾದರಿಯಲ್ಲಿ ಕೆಐಟಿ ಮಾಡುವುದು, ಕಿನ್ನಾಳ ಕಲೆ ಪ್ರೋತ್ಸಾಹಕ್ಕೆ 100 ಜನರಿಗೆ ತರಬೇತಿ ನೀಡುವುದಾಗಿ ಕಳೆದ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಇವೆಲ್ಲ ಯೋಜನೆಗಳನ್ನು ಈ ವರ್ಷದ ಬಜೆಟ್‌ನಲ್ಲಿ ಮತ್ತೊಮ್ಮೆ ಪ್ರಸ್ತಾಪಿಸಿದ್ದು, ಅನುಷ್ಠಾನ ಮಾಡುವುದಾಗಿ ತಿಳಿಸಿದ್ದು ಬಿಟ್ಟರೆ ಜಿಲ್ಲೆಯ ಪಾಲಿಗೆ ಹೊಸದೇನನ್ನು ನೀಡಿಲ್ಲ.

    ಬಿಜೆಪಿ ಸರ್ಕಾರದ ಕೊನೇ ಬಜೆಟ್ ಇದಾಗಿದ್ದು, ಸಾಕಷ್ಟು ಯೋಜನೆಗಳು ಜಿಲ್ಲೆಗೆ ಸಿಗಲಿವೆ ಎಂಬ ಅಭಿಲಾಷೆಯೂ ಬುಡ ಮೇಲಾಗಿದೆ. ಬಹುದಿನಗಳ ಬೇಡಿಕೆಗಳಾದ ನವಲಿ ರೈಸ್ ಟೆಕ್ ಪಾರ್ಕ್, ಸಿರಿವಾರ ತೋಟಗಾರಿಕೆ ಟೆಕ್‌ಪಾರ್ಕ್, ಜಿಂಕೆವನ, ಕರಡಿ, ಚಿರತೆ ಧಾಮ, ಕಲ್ಲೂರು ಆಂಜನೇಯ ಏತ ನೀರಾವರಿ ಯೋಜನೆ, ಅಳವಂಡಿ-ಬೆಟಗೇರಿ, ಬಹದ್ದೂರಬಂಡಿ-ನವಲಕಲ್ ಏತ ನೀರಾವರಿ, ಹಿರೇಹಳ್ಳ ಯೋಜನೆ ಪೂರ್ಣಗೊಳಿಸುವಿಕೆ, ಫುಡ್‌ಪಾರ್ಕ್ ನಿರ್ಮಾಣ ಮುಂತಾದ ಬೇಡಿಕೆಗಳು ಹಾಗೇ ಉಳಿದಿದ್ದು, ಮುಂದಿನ ಬಜೆಟ್‌ನತ್ತ ಚಿತ್ತ ಹರಿಸುವಂತಾಗಿದೆ.

    ಪ್ರಚಾರಕ್ಕೆ ಸೀಮಿತವಾದ ಅಂಜನಾದ್ರಿ: ರಾಮಾಯಣದ ರಾಮನ ಬಂಟ ಆಂಜನೇಯ ಜನಿಸಿದ ಸ್ಥಳವಾದ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟವನ್ನು ಅಭಿವೃದ್ಧಿಗೊಳಿಸುವುದಾಗಿ ಸರ್ಕಾರ ಕಳೆದ ಮೂರು ವರ್ಷದಿಂದ ಹೇಳುತ್ತಿದೆ. ಆರಂಭದಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ 20 ಕೋಟಿ ರೂ. ಘೋಷಿಸಿದರೂ ನಯಾಪೈಸೆ ಅನುದಾನ ಬಿಡುಗಡೆಯಾಗಲಿಲ್ಲ. ಬಳಿಕ ಕಳೆದ ವರ್ಷದ ಬಜೆಟ್‌ನಲ್ಲಿ ಸಿಎಂ ಬೊಮ್ಮಾಯಿ 100 ಕೋಟಿ ರೂ. ಘೋಷಿಸಿದ್ದಾರೆ. ಅಲ್ಲಿಂದ ಈವರೆಗೆ ಯೋಜನೆ ತಯಾರಿಕೆಯಲ್ಲಿಯೇ ಕಾಲಹರಣ ಮಾಡಲಾಗಿದೆ. ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ಅಂಜನಾದ್ರಿ ಅಭಿವೃದ್ಧಿಗೆ 100 ಕೋಟಿ ರೂ. ಮೊತ್ತದ ಟೆಂಡರ್ ಕರೆಯಲಾಗಿದೆ ಎಂದು ತಿಳಿಸುವ ಮೂಲಕ ಜಿಲ್ಲೆಯ ಜನರನ್ನು ಯಾಮಾರಿಸಲಾಗಿದೆ. ಹಿಂದುತ್ವ ದಾಳವನ್ನು ಪ್ರಚಾರ ಅಸ್ತ್ರವಾಗಿ ಬಳಸುವ ಬಿಜೆಪಿ, ಅಂಜನಾದ್ರಿ ಅಭಿವೃದ್ಧಿ ವಿಷಯವನ್ನು ಕೇವಲ ಪ್ರಚಾರಕ್ಕೆ ಸೀಮಿತಗೊಳಿಸಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts