More

    ಪದನಾಮ ಬದಲಾವಣೆಗೆ ವಿರೋಧಿಸಿ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ನಡೆಸಿದ ಶಿಕ್ಷಕರು

    ಕೊಪ್ಪಳ: ಪದನಾಮ ಬದಲಾವಣೆ ಖಂಡಿಸಿ ನಗರದ ವಿವಿಧ ಶಾಲೆಯ ಶಿಕ್ಷಕರು ಸೋಮವಾರ ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಕರ್ತವ್ಯ ನಿರ್ವಹಿಸುವ ಮೂಲಕ ಪ್ರತಿಭಟನೆ ನಡೆಸಿದರು.

    ನೇಮಕಾತಿ ವೇಳೆ 1-5ನೇ ತರಗತಿ ಮತ್ತು 6-8ನೇ ತರಗತಿ ಬೋಧನೆ ಮಾಡುವ ಶಿಕ್ಷಕರೆಂದು ಪರಿಗಣಿಸಿಲ್ಲ. ಪ್ರಾಥಮಿಕ ಶಾಲಾ ಶಿಕ್ಷಕರೆಂದು ಆದೇಶ ನೀಡಿ ನಮ್ಮ ಸೇವೆ ಪಡೆಯಲಾಗುತ್ತಿದೆ. ನಾವು ಈವರೆಗೂ 6 ರಿಂದ 8ನೇ ತರಗತಿ ಮಕ್ಕಳಿಗೆ ಬೋಧನೆ ಮಾಡಿದ್ದೇವೆ. ಆದರೆ, ಸದ್ಯ ನಮ್ಮನ್ನು 1ರಿಂದ 5ನೇ ತರಗತಿಗೆ ಮಾತ್ರ ಪರಿಗಣಿಸಲಾಗುತ್ತಿದೆ. ನಮ್ಮನ್ನು ಪ್ರಾಥಮಿಕ ಶಾಲಾ ಶಿಕ್ಷಕರೆಂದು, 6ರಿಂದ 8ನೇ ತರಗತಿಗೆ ಬೋಧಿಸುವವರನ್ನು ಪದವೀಧರ ಶಿಕ್ಷಕರೆಂದು ಪದನಾಮ ನೀಡಿರುವುದು ಬೇಸರದ ಸಂಗತಿ ಎಂದು ಶಿಕ್ಷಕರು ಖಂಡಿಸಿದರು.

    ನಮ್ಮನ್ನು ಕೂಡ ಪದವೀಧರ ಶಿಕ್ಷಕರೆಂದು ಪರಿಗಣಿಸಬೇಕು. ಪ್ರಾಥಮಿಕ, ಪದವೀಧರ ಶಿಕ್ಷಕರೆಂದು ಪ್ರತ್ಯೇಕಿಸದೆ, ವಿಲೀನ ಮಾಡಬೇಕು. ಕರ್ನಾಟಕ ನ್ಯಾಯ ಮಂಡಳಿ ಪ್ರಾಥಮಿಕ ಶಾಲಾ ಶಿಕ್ಷಕರು 1-5ನೇ ತರಗತಿ ಬೋಧನೆ ಮಾಡುವ ಶಿಕ್ಷಕರೆಂದು ತೀರ್ಪು ನೀಡಿದೆ. ನಾವು ಕೇವಲ 1-5ವರೆಗೆ ಮಾತ್ರ ಬೋಧನೆ ಮಾಡುತ್ತೇವೆ. 6-8ನೇ ತರಗತಿಗೆ ಬೋಧಿಸುವುದಿಲ್ಲ. ಸರ್ಕಾರ ಮೊದಲು ನಮ್ಮ ಪದನಾಮ ಬದಲಿಸಬೇಕೆಂದು ಒತ್ತಾಯಿಸಿದರು.

    ಪ್ರತಿಭಟನೆ ಬಳಿಕ ಆಯಾ ಶಾಲೆ ಮುಖ್ಯ ಶಿಕ್ಷಕರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಶಿಕ್ಷಕರಾದ ಕಾಶಿನಾಥ ಸಿರಿಗೇರಿ, ವಿರೂಪಾಕ್ಷಪ್ಪ ಬಾಗೋಡಿ, ಮೊಹಮ್ಮದ್ ಆಬೀದ ಹುಸೇನ ಅತ್ತಾರ, ನಾಗಪ್ಪ ನರಿ, ಗುರುರಾಜ ಕಟ್ಟಿ, ಶ್ರೀನಿವಾಸರಾವ ಕುಲಕರ್ಣಿ, ಜಯಶ್ರೀ ದೇಸಾಯಿ, ಸುನಂದಾಬಾಯಿ, ಶೀಲಾ ಬಂಡಿ, ಶಂಕ್ರಮ್ಮ ಬಂಗಾರಶೆಟ್ಟರ್ ಸೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts