More

    ಜನರನ್ನು ಮನೆ ಸೇರಿಸಲು ಪೊಲೀಸರ ಪರದಾಟ ವಿನಾಕಾರಣ ಓಡಾಡುವ ಯುವಕರಿಗೆ ಲಾಠಿ ರುಚಿ

    ಕೊಪ್ಪಳ: ದಿನೇ ದಿನೆ ರಾಜ್ಯದಲ್ಲಿ ಶಂಕಿತ ಕರೊನಾ ಪ್ರಕರಣಗಳು ಹೆಚ್ಚುತ್ತಿದ್ದು, ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳುತ್ತಿದ್ದರೂ ಜನ ಸಹಕರಿಸದ ಕಾರಣ ಅವರನ್ನು ಮನೆ ಸೇರಿಸಲು ಪರಡಾಡುತ್ತಿದೆ.

    ಜನರ ಓಡಾಟ ತಪ್ಪಿಸಲು ನಿರ್ಬಂಧ, ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇದನ್ನು ಲೆಕ್ಕಿಸದೆ ತರಕಾರಿ ಮಾರುಕಟ್ಟೆ, ಹೊಟೇಲ್, ಕಿರಾಣಿ, ಬಟ್ಟೆ ಅಂಗಡಿ ಸೇರಿ ಇತರ ಅಂಗಡಿಗಳು ತೆರೆದುಕೊಂಡಿದ್ದವು. ಹೀಗಾಗಿ ಪೊಲೀಸರು ಬೀದಿಗಿಳಿದು ಲಾಠಿ ಬೀಸುವಂತಾಯಿತು. ಕಾರಣವಿಲ್ಲದೇ ಬೀದಿಯಲ್ಲಿ ಅಡ್ಡಾಡುತ್ತಿದ್ದವರಿಗೆ ಶಾಸ್ತಿ ಮಾಡಿ ಮನೆಗೆ ಕಳಿಸುವಂತಾಯಿತು. ಅಶೋಕ ವೃತ್ತ, ಗಂಜ್, ಗಡಿಯಾರ ಕಂಬ, ಗವಿಮಠ, ಬಸ್ ನಿಲ್ದಾಣ ಭಾಗಗಳಲ್ಲಿ ಪೊಲೀಸರು ಬಂದು ಜನರನ್ನು ಚದುರಿಸಬೇಕಾಯಿತು. ಸೋಮವಾರದವರೆಗೂ ಓಡಾಡಿಕೊಂಡಿದ್ದ ಆಟೋ, ಖಾಸಗಿ ವಾಹನಗಳ ಸಂಚಾರವನ್ನು ಮಂಗಳವಾರ ಸಂಪೂರ್ಣ ಬಂದ್ ಮಾಡಿಸಲಾಯಿತು. ಪತ್ರಿಕೆ, ಹಾಲಿನ ಅಂಗಡಿಗಳು ಮಧ್ಯಾಹ್ನದ ನಂತರ ಮುಚ್ಚಿದವು.

    ಕರೆ ಮಾಡಿದವರ ಮನೆಗೆ ಸರಕು: ಮುಂಜಾಗ್ರತಾ ಕ್ರಮವಾಗಿ ಕೊಪ್ಪಳ ನಗರಸಭೆಯಿಂದ ನಗರದ ಪ್ರಮುಖ ರಸ್ತೆಗಳು, ಫುಟ್‌ಪಾತ್‌ನಲ್ಲಿ ರಾಸಾಯನಿಕವನ್ನು ಸಿಂಪಡಿಸಲಾಯಿತು. ತರಕಾರಿಗಳನ್ನು ಟ್ಯಾಕ್ಟರ್‌ನಲ್ಲಿ ಹಾಕಿಕೊಂಡು ಮನೆಮನೆಗೆ ತೆರಳಿ ವಿತರಿಸುವ ಕಾರ್ಯ ನಡೆಯಿತು. ಅದರಂತೆ ದಿನಸಿ ವಸ್ತುಗಳನ್ನು ಗ್ರಾಹಕರ ಮನೆಗೆ ತಲುಪಿಸುವಂತೆ ಸೂಚಿಸಿದ್ದು, ದೊಡ್ಡ ದೊಡ್ಡ ಮಾಲ್ ಹಾಗೂ ಕಿರಾಣಿ ಅಂಗಡಿಯವರು ಕರೆ ಮಾಡಿದ ಗ್ರಾಹಕರ ಮನೆಗೆ ತುಪಿಸುವ ಕಾರ್ಯ ಮಾಡುತ್ತಿದ್ದು, ಬಂದ್ ನಿಂದ ಜನರಿಗೆ ಆಗತ್ತಿರುವ ಸಮಸ್ಯೆ ನಿವಾರಣೆಗೆ ಜಿಲ್ಲಾಡಳಿತ ಯತ್ನಿಸುತ್ತಿದೆ. ರೈಲ್ವೆ ಸೇವೆ ಬಂದ್ ಆದ ಕಾರಣ ನಗರದ ರೈಲ್ವೆ ನಿಲ್ದಾಣವನ್ನು ಲಾಕ್ ಮಾಡಲಾಗಿದ್ದು, ಜನ ಒಳಹೋಗದಂತೆ ಅಡ್ಡವಾಗಿ ರೇಡಿಯಂ ಸ್ಟಿಕ್ಕರ್ ಅಂಟಿಸಲಾಗಿದೆ.

    ಕುಟುಂಬದವರೊಡನೆ ಆಟ: ಕರೊನಾ ಭೀತಿಯಿಂದ ಜನರೆಲ್ಲ ಮನೆ ಸೇರಿದ್ದು, ಜನಪ್ರತಿನಿಧಿಗಳು ಇದಕ್ಕೆ ಹೊರತಾಗಿಲ್ಲ. ಶಾಸಕ ರಾಘವೇಂದ್ರ ಹಿಟ್ನಾಳ್ ಮಂಗಳವಾರ ತಮ್ಮ ಕುಟುಂಬದವರೊಡನೆ ಕೇರಂ ಆಡುವ ಮೂಲಕ ಸಮಯ ಕಳೆದರು. ಅವರ ತಂದೆ ಮಾಜಿ ಶಾಸಕ ಬಸವರಾಜ ಹಿಟ್ನಾಳ್, ಸಹೋದರರಾದ ನಾಗರಾಜ ಹಾಗೂ ರಾಜಶೇಖರ್ ಹಿಟ್ನಾಳ್‌ರೊಂದಿಗೆ ಕೇರಂ ಆಡಿ ಆನಂದಿಸಿದರು.

    63 ಜನರ ಮೇಲೆ ನಿಗಾ: ಈವರೆಗೆ ಜಿಲ್ಲೆಯಲ್ಲಿ ಮುಂಜಾಗ್ರತಾ ಕ್ರವಮಾಗಿ 63 ಜನರ ಮೇಲೆ ನಿಗಾವಹಿಸಲಾಗಿದೆ. ಅವರೆಲ್ಲರನ್ನೂ ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ. 27 ಜನರು ಈಗಾಗಲೇ 14 ದಿನಗಳನ್ನು ಪೂರೈಸಿದ್ದು, ನಾಲ್ವರು 28 ದಿನಗಳನ್ನು ಪೂರೈಸಿ ಆರೋಗ್ಯದಿಂದಿದ್ದಾರೆ.

    ಪಕ್ಷಿಗಳಿಗೆ ನೀರಿನ ವ್ಯವಸ್ಥೆ: ಜನರೆಲ್ಲ ಮನೆ ಸೇರಿದ್ದು, ಪ್ರಾಣಿ ಪಕ್ಷಿಗಳಿಗೆ ಆಹಾರ ನೀರಿಲ್ಲದಂತಾಗಿದೆ. ಹೀಗಾಗಿ ಕೊಪ್ಪಳ ನಗರದ ತಹಸೀಲ್ದಾರ್ ಕಚೇರಿಯಲ್ಲಿನ ಗಿಡಗಳಿಗೆ ಮಣ್ಣಿನ ತಟ್ಟೆಗಳನ್ನು ಕಟ್ಟಿ ಕಾಳು, ನೀರಿನ ವ್ಯವಸ್ಥೆ ಮಾಡಲಾಗಿದೆ. ಸ್ವತಃ ತಹಸೀಲ್ದಾರ್ ಜೆ.ಬಿ.ಮಜ್ಗಿ ತಮ್ಮ ಸಿಬ್ಬಂದಿಯೊಡಗೂಡಿ ಗಿಡಗಳಿಗೆ ತಟ್ಟೆ ಕಟ್ಟಿಸಿ ನೀರು ಹಾಕಿಸಿದರು.

    ಜನರು ಯುಗಾದಿ ಹಬ್ಬಕ್ಕೆ ವಿವಿಧ ವಸ್ತುಗಳನ್ನು ಕೊಳ್ಳಲು ಆಗಮಿಸುವುದಾಗಿ ಹೇಳುತ್ತಾರೆ. ಆದರೆ, ಹಬ್ಬಕ್ಕಿಂತ ಆರೋಗ್ಯ ಮುಖ್ಯ. ಹಬ್ಬಗಳು ಪ್ರತಿ ವರ್ಷ ಬರುತ್ತವೆ. ಆರೋಗ್ಯವಾಗಿದ್ದರೆ ಆಚರಣೆ ಮಾಡಬಹುದು. ರಾಜ್ಯದಲ್ಲಿ ಶಂಕಿತ ಪ್ರಕರಣಗಳು ಹೆಚ್ಚುತ್ತಿದ್ದು, ನಿಯಂತ್ರಣವಾಗುವವರೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೊಂದೇ ಉಳಿದ ದಾರಿ. ಹೀಗಾಗಿ ಜನ ಸರ್ಕಾರದ ನಿರ್ದೇಶನ ಪಾಲಿಸಬೇಕು. ಮುಂದಾಗುವ ಅನಾಹುತ ತಪ್ಪಿಸುವಲ್ಲಿ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಇದೆ.
    | ಪಿ.ಸುನಿಲ್ ಕುಮಾರ್ ಕೊಪ್ಪಳ ಡಿಸಿ

    ಜನರನ್ನು ಮನೆ ಸೇರಿಸಲು ಪೊಲೀಸರ ಪರದಾಟ ವಿನಾಕಾರಣ ಓಡಾಡುವ ಯುವಕರಿಗೆ ಲಾಠಿ ರುಚಿ

    ಜನರನ್ನು ಮನೆ ಸೇರಿಸಲು ಪೊಲೀಸರ ಪರದಾಟ ವಿನಾಕಾರಣ ಓಡಾಡುವ ಯುವಕರಿಗೆ ಲಾಠಿ ರುಚಿ
    ಜನರನ್ನು ಮನೆ ಸೇರಿಸಲು ಪೊಲೀಸರ ಪರದಾಟ ವಿನಾಕಾರಣ ಓಡಾಡುವ ಯುವಕರಿಗೆ ಲಾಠಿ ರುಚಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts