More

    ನೋಟರಿ ಕಾಯ್ದೆ ತಿದ್ದುಪಡಿ ಬೇಡ; ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಆಸೀಫ್ ಅಲಿ ಆಗ್ರಹ


    ಕೊಪ್ಪಳ: ಕೇಂದ್ರ ಸರ್ಕಾರ ನೋಟರಿ ಕಾಯ್ದೆ ತಿದ್ದುಪಡಿ ಮಾಡಿದ್ದು, ನೋಟರಿಗಳಿಗೆ ಅವಧಿ ನಿಗದಿಪಡಿಸಿರುವುದು ಸರಿಯಲ್ಲವೆಂದು ಅಖಿಲ ಭಾರತ ನೋಟರಿ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಆಸೀಫ್ ಅಲಿ ಹೇಳಿದರು.

    ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 1952ರ ಕಾಯ್ದೆ ಅನ್ವಯ ವಕೀಲ ವೃತ್ತಿಯಲ್ಲಿರುವವರು 10 ವರ್ಷಗಳ ಸೇವೆ ಬಳಿಕ ನೋಟರಿ ಆಗಲು ಅರ್ಹರು. ತಿದ್ದುಪಡಿ ಕಾಯ್ದೆಯಲ್ಲಿ ನೋಟರಿಯಾಗಿ ನೇಮಕವಾದವರು 5 ವರ್ಷಕ್ಕೊಮ್ಮೆ ಗರಿಷ್ಠ 2 ಬಾರಿ ನವೀಕರಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಸಾಮಾನ್ಯವಾಗಿ 33ನೇ ವಯಸ್ಸಿನ ನಂತರ ನೋಟರಿಗಳಾಗುತ್ತಾರೆ. ಅಲ್ಲಿಂದ 10-15 ವರ್ಷಕ್ಕೆ ಅವರ ಅವಧಿ ಮುಗಿದರೆ ಜೀವನ ನಡೆಸುವುದು ಕಷ್ಟವಾಗಲಿದೆ. ನೋಟರಿಗಳು ಸಾಮಾನ್ಯವಾಗಿ ವಕಾಲತ್ತು ವಹಿಸುವುದನ್ನು ಕಡಿಮೆ ಮಾಡಿರುತ್ತಾರೆ. ಮಧ್ಯ ವಯಸ್ಸಿನಲ್ಲಿ ನೋಟರಿ ಅಧಿಕಾರ ಕಳೆದುಕೊಂಡರೆ ಅತಂತ್ರರಾಗುತ್ತಾರೆ. ದೇಶದಲ್ಲಿ 10 ಸಾವಿರ, ರಾಜ್ಯದಲ್ಲಿ 750 ನೋಟರಿಗಳಿದ್ದು, ಅವರೆಲ್ಲ ಉದ್ಯೋಗ ಕಳೆದುಕೊಳ್ಳಬೇಕಾಗುತ್ತದೆ ಎಂದರು.

    ಯುವಕರಿಗೆ ಉದ್ಯೋಗವಕಾಶ ಸೃಷ್ಟಿಸಲು ತಿದ್ದುಪಡಿ ಮಾಡಿರುವುದಾಗಿ ಹೇಳಲಾಗುತ್ತಿದೆ. ವಿವಿಧ ಇಲಾಖೆಗಳಲ್ಲಿ ನಿವೃತ್ತ ನ್ಯಾಯಾಧೀಶರು. ನ್ಯಾಯಾಧೀಶರು, ಸರ್ಕಾರಿ ಅಭಿಯೋಜಕರನ್ನು ಕಾನೂನು ಸಲಹೆಗಾರರಾಗಿ ನೇಮಕ ಮಾಡಲಾಗುತ್ತಿದೆ. ಅವರನ್ನು ಕೈ ಬಿಟ್ಟು ಯುವ ವಕೀಲರಿಗೆ ಅವಕಾಶ ನೀಡಬೇಕು. ಬೇರೆ ರೀತಿಯಲ್ಲಿ ಉದ್ಯೋಗಾವಕಾಶ ಸೃಷ್ಟಿಸಬೇಕೆ ಹೊರತು, ಒಬ್ಬರಿಂದ ಉದ್ಯೋಗ ಕಿತ್ತಿಕೊಂಡು ಇತರರಿಗೆ ನೀಡಬಾರದು. ಈ ಕುರಿತು ವಿವಿಧ ರಾಜ್ಯಗಳಲ್ಲಿ ವಿರೋಧ ವ್ಯಕ್ತವಾಗಿದ್ದು, ಕೇಂದ್ರ ಕಾನೂನು ಸಚಿವ ಹಾಗೂ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಲಾಗುವುದು. ಅಗತ್ಯವಿದ್ದಲ್ಲಿ ಹೋರಾಟ ನಡೆಸುತ್ತೇವೆ ಎಂದರು. ವಕೀಲರಾದ ರಾಜಶೇಖರ್ ವಿ.ಮಠದ್, ಪಿ.ವಿ.ಪರ್ವತಗೌಡ, ವಿ.ಎಸ್.ಕಟ್ಟಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts