More

    ಏ.10ರವರೆಗೆ ನಾಲೆಗಳಿಗೆ ನೀರು; ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯ


    40 ವರ್ಷದ ಬಳಿಕ ಟಿಬಿ ಡ್ಯಾಂನಲ್ಲಿ ಅಧಿಕ ನೀರು | ಸಚಿವ ಆನಂದ ಸಿಂಗ್ ಹೇಳಿಕೆ

    ಕೊಪ್ಪಳ: ತುಂಗಭದ್ರಾ ಜಲಾಶಯದಿಂದ ನಾಲೆಗಳಿಗೆ ಏ.10 ರವರೆಗೆ ನೀರು ಹರಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಹಾಗೂ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಆನಂದ ಸಿಂಗ್ ಹೇಳಿದರು.

    ತಾಲೂಕಿನ ಮುನಿರಾಬಾದ್ ಕಾಡಾ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 116 ನೇ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದರು. ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಡಿ.31 ರವರೆಗೆ 3500 ಕ್ಯೂಸೆಕ್, 2022ರ ಜ.1ರಿಂದ ಮಾ.31 ರವರೆಗೆ ನಾಲ್ಕು ಸಾವಿರ ಕ್ಯೂಸೆಕ್, ಏ.1ರಿಂದ 10ವರೆಗೆ 3200 ಕ್ಯೂಸೆಕ್ ನೀರು ಹರಿಸಲಾಗುವುದು. ವಿಜಯನಗರ ಎಡದಂಡೆ ಕಾಲುವೆಗಳಿಗೆ ಏ.11ರಿಂದ ಮೇ 10 ರವರೆಗೆ 100 ಕ್ಯೂಸೆಕ್ ನೀರು ಬಿಡಲಾಗುವುದು. ಬಲದಂಡೆ ಕೆಳಮಟ್ಟದ ಕಾಲುವೆಗೆ ಡಿ.31 ವರೆಗೆ 500 ಕ್ಯೂಸೆಕ್, 2022ರ ಜ.1ರಿಂದ ಮಾ.31ವರೆಗೆ 700 ಕ್ಯೂಸೆಕ್, ಏ.1ರಿಂದ 10ವರೆಗೆ 600 ಕ್ಯೂಸೆಕ್, ಏ.11 ರಿಂದ 20ವರೆಗೆ 400 ಕ್ಯೂಸೆಕ್ ನೀರು ಹರಿಸಲಾಗುವುದು. ರಾಯ, ಬಸವಣ್ಣ ಕಾಲುವೆಗೆ 2022ರ ಜ.10 ರಿಂದ ಮೇ 31ವರೆಗೆ 280 ಕ್ಯೂಸೆಕ್, ಎಡದಂಡೆ ಮೇಲ್ಮಟ್ಟದ ಕಾಲುವೆಗೆ 25 ಕ್ಯೂಸೆಕ್ ನೀರು ಹರಿಸಲಾಗುವುದು. ಬಲದಂಡೆ ಮೇಲ್ಮಟ್ಟದ ಕಾಲುವೆಗೆ ನೀರು ಹರಿಸುವ ಬಗ್ಗೆ ಇನ್ನೊಂದು ಸಭೆ ಕರೆದು ನಿರ್ಣಯ ಕೈಗೊಳ್ಳಲಾಗುವುದೆಂದು ತಿಳಿಸಿದರು.

    40 ವರ್ಷಗಳ ಬಳಿಕ ಜಲಾಶಯದಲ್ಲಿ ಹಿಂಗಾರು ಹಂಗಾಮಿನಲ್ಲಿ ಅಧಿಕ ಪ್ರಮಾಣದ ನೀರು ಸಂಗ್ರಹವಾಗಿದೆ. ಪ್ರಸಕ್ತ ನೀರಾವರಿ ವರ್ಷದಲ್ಲಿ 373.674 ಟಿಎಂಸಿ ಅಡಿ ನೀರು ಜಲಾಶಯಕ್ಕೆ ಹರಿದು ಬಂದಿದ್ದು, 126.161 ಟಿಎಂಸಿ ಅಡಿ ನದಿಗೆ ಬಿಡಲಾಗಿದೆ. ಈವರೆಗೆ 113.886 ಟಿಎಂಸಿ ಅಡಿ ನೀರಾವರಿಗೆ ಬಳಸಲಾಗಿದೆ. ಮಂಗಳವಾರ 96.270 ಟಿಎಂಸಿ ಅಡಿ ಸಂಗ್ರಹವಿದೆ. ಇದರಲ್ಲಿ 86.118 ಟಿಎಂಸಿ ಅಡಿ ಕೃಷಿಗೆ ಲಭ್ಯವಾಗಲಿದೆ. ಕರ್ನಾಟಕದ 54.441 ಟಿಎಂಸಿ ಅಡಿ, ಆಂಧ್ರ ಪ್ರದೇಶದ 25.535 ಹಾಗೂ ತೆಲಂಗಾಣದ 6.142 ಟಿಎಂಸಿ ಅಡಿ ಪಾಲಿದೆ ಎಂದರು.

    ಎಡದಂಡೆ ನಾಲೆ ಕೊನೇ ಭಾಗದ ರೈತರಿಗೆ ಸರಿಯಾಗಿ ನೀರು ತಲುಪುತ್ತಿಲ್ಲ. ಮೇಲ್ಮಟ್ಟದಲ್ಲಿ ನೀರಿನ ಕಳ್ಳತನ ತಡೆಗೆ ಆಯಾ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಆದರೆ, ಪ್ರಯೋಜನವಾಗದ ಕಾರಣ ಪ್ರಾದೇಶಿಕ ಆಯುಕ್ತರು ಹಾಗೂ ಐಜಿಗೆ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲು ಸಭೆಯಲ್ಲಿ ನಿರ್ಧರಿಸಿರುವುದಾಗಿ ಸಚಿವ ಆನಂದ್ ಸಿಂಗ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts