More

    ಬಿಜೆಪಿ ಸುಳ್ಳುಗಳನ್ನು ಜನತೆಗೆ ತಿಳಿಸಿ- ಡಿಸಿಸಿ ಅಧ್ಯಕ್ಷ ಶಿವರಾಜ ತಂಗಡಗಿ ಕರೆ

    ಕೊಪ್ಪಳ: ದೇಶ, ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಅವುಗಳಿಗೆ ಪರಿಹಾರ ಹುಡುಕುವುದು ಬಿಟ್ಟು ಬಿಜೆಪಿಯವರು ಜನರನ್ನು ಭಾವನಾತ್ಮಕವಾಗಿ ಮರಳು ಮಾಡುತ್ತಾ ಸುಳ್ಳು ಹೇಳುತ್ತಿದ್ದಾರೆ. ಅವರ ಬಗ್ಗೆ ಗ್ರಾಪಂ ಚುನಾವಣೆಯಲ್ಲಿ ಜನರಿಗೆ ತಿಳಿಸಿ ಕಾಂಗ್ರೆಸ್ ಪಕ್ಷದ ಬೆಂಬಲಿತರನ್ನು ಗೆಲ್ಲಿಸಿ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ಕಾರ್ಯಕರ್ತರಿಗೆ ಕರೆ ಕೊಟ್ಟರು.

    ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಕಾಂಗ್ರೆಸ್‌ನಿಂದ ಶುಕ್ರವಾರ ಹಮ್ಮಿಕೊಂಡಿದ್ದ ಗ್ರಾಪಂ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಸುಳ್ಳು ಹೇಳುವುದರಲ್ಲಿ ಬಿಜೆಪಿಗರು ನಿಸ್ಸೀಮರು. ದೇಶ, ರಾಜ್ಯದಲ್ಲಿ ಮಾಡಲು ಸಾಕಷ್ಟು ಕೆಲಸಗಳಿವೆ. ಆದರೆ, ಅವರು ಲವ್ ಜಿಹಾದ್, ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಓಡಾಡುತ್ತಿದ್ದಾರೆ. ಅಧಿಕಾರಕ್ಕೆ ಬಂದು ಇಷ್ಟು ವರ್ಷವಾದರೂ ಒಂದೇ ಒಂದು ಅಭಿವೃದ್ಧಿ ಕೆಲಸ ಮಾಡಿಲ್ಲ. ಜಿಲ್ಲೆಯಲ್ಲಿ ರಾಜಾರೋಷವಾಗಿ ಭ್ರಷ್ಟಾಚಾರ ನಡೆಯುತ್ತಿದೆ. ಕೃಷಿ ಅಧಿಕಾರಿಗಳು ಸಚಿವರ ನಡೆಯಿಂದ ಬೇಸತ್ತು ಪತ್ರ ಬರೆದಿದ್ದಾರೆ. ಇವೆಲ್ಲವನ್ನು ಜನರಿಗೆ ತಿಳಿಸಬೇಕು. ಗ್ರಾಪಂ ಚುನಾವಣೆಯಲ್ಲಿ ನಮ್ಮ ಬೆಂಬಲಿತರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

    ಶಾಸಕ ರಾಘವೇಂದ್ರ ಹಿಟ್ನಾಳ್ ಮಾತನಾಡಿ, ಗ್ರಾಪಂಗಳು ಗ್ರಾಮ ಮಟ್ಟದ ಸರ್ಕಾರ. ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ ಪಕ್ಷ ಕಾಂಗ್ರೆಸ್. ಆಡಳಿತ ವಿಕೇಂದ್ರೀಕರಣ ಮಾಡಿದ್ದು ಕಾಂಗ್ರೆಸ್. ಸಿದ್ದರಾಮಯ್ಯನವರು ಸಿಎಂ ಇದ್ದಾಗ ಅನ್ನಭಾಗ್ಯ, ಕೃಷಿ ಭಾಗ್ಯ, ಶೂ ಭಾಗ್ಯ, ಶಾದಿ ಭಾಗ್ಯ ಸೇರಿ ಇನ್ನು ಅನೇಕ ಯೋಜನೆಗಳು ಜಾರಿಯಾಗಿವೆ. ಆದರೆ, ಇಂದು ಬಿಜೆಪಿ ಸರ್ಕಾರ ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಕೊಡಿಸುವಲ್ಲಿ ವಿಫಲವಾಗಿದೆ. ಏಷ್ಯಾ ಖಂಡದಲ್ಲಿ ಭ್ರಷ್ಟಾಚಾರದಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಭಾಷಣ ಮಾಡುವುದು ಬಿಟ್ಟರೆ, ಬೇರೇನೂ ಮಾಡಿಲ್ಲ. ರೈತರು ಪ್ರತಿಭಟನೆ ನಡೆಸಿದರೆ, ಅವರ ಮೇಲೆ ಹಲ್ಲೆ ನಡೆಸಲಾಗುತ್ತಿದೆ. ನಮ್ಮ ಕ್ಷೇತ್ರದಲ್ಲಿ 29 ಗ್ರಾಪಂಗಳು ಬರುತ್ತವೆ. ಗ್ರಾಪಂನಲ್ಲಿ ಸಭೆ ನಡೆಸಿ, ಅಭ್ಯರ್ಥಿ ಆಯ್ಕೆ ಮಾಡಿ ಗೆಲ್ಲಿಸಿ ಎಂದರು.

    ಮಾಜಿ ಸಂಸದ ಶಿವರಾಮಗೌಡ ಮಾತನಾಡಿದರು. ಮಾಜಿ ಶಾಸಕ ಬಸವರಾಜ ಹಿಟ್ನಾಳ್, ಜಿಪಂ ಅಧ್ಯಕ್ಷ ರಾಜಶೇಖರ ಹಿಟ್ನಾಲ್, ಉಪಾಧ್ಯಕ್ಷೆ ಬೀನಾಗೌಸ್, ಸದಸ್ಯ ಗೂಳಪ್ಪ ಹಲಗೇರಿ, ತಾಪಂ ಅಧ್ಯಕ್ಷ ಬಾಲಚಂದ್ರನ್, ಮುಖಂಡರಾದ ಶಾಂತಣ್ಣ ಮುದುಗಲ್, ಸೈಯದ್ ಜುಲ್ಲು ಖಾದ್ರಿ, ನವೋದಯ ವಿರುಪಣ್ಣ, ಜನಾರ್ಧನ ಹುಲಿಗಿ, ಕಾಟನ್ ಪಾಷಾ, ಹನುಮರಡ್ಡಿ ಹಂಗನಕಟ್ಟಿ, ವೆಂಕನಗೌಡ ಹಿರೇಗೌಡರ್ ಇತರರಿದ್ದರು.

    ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಬಂದರೆ ಹಸಿರು ಟವೆಲ್ ಹಾಕಿಕೊಳ್ತಾರೆ. ಆದರೆ, ರೈತರ ಬಗ್ಗೆ ಮನಬಂದಂತೆ ಮಾತಾಡ್ತಾರೆ. ಇವಿಎಂ ಯಂತ್ರ ಅವರ ನಿಯಂತ್ರಣದಲ್ಲಿವೆ. ಹೀಗಾಗಿ ಯಾವ ಹೆದರಿಕೆ ಇಲ್ಲದೇ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ.
    | ಶಿವರಾಜ ತಂಗಡಗಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts