More

    ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆಗೆ ಬೇಡಿಕೆ

    ಕೊಪ್ಪ: ಕ್ಷೇತ್ರದ ಕಾಂಗ್ರೆಸ್‌ನಲ್ಲಿ ತೆರೆಮರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಬಣ ರಾಜಕಾರಣ, ಮಂಗಳವಾರ ಬಹಿರಂಗವಾಗಿ ಕಾಣಿಸಿಕೊಂಡಿತು. ಜಿಲ್ಲಾಧ್ಯಕ್ಷ ಕೆ.ಪಿ.ಅಂಶುಮಂತ್ ವಿರುದ್ಧ ಕೊಪ್ಪ ಕಾಂಗ್ರೆಸ್ ಮುಖಂಡರು ಬಹಿರಂಗವಾಗಿ ಸಭೆ ನಡೆಸಿ ಅಸಮಾಧಾನ ಹೊರ ಹಾಕಿದರು.

    ಸುಧೀರ್‌ಕುಮಾರ್ ಮುರೊಳ್ಳಿ ಎರಡು ತಿಂಗಳ ಹಿಂದೆ ಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇತ್ತೀಚೆಗೆ ಬಾಳೆಮನೆ ನಟರಾಜ್ ಅವರನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ನೇಮಕದಲ್ಲಿ ಜಿಲ್ಲಾಧ್ಯಕ್ಷ ಏಕಪಕ್ಷೀಯವಾಗಿ ನಿರ್ಣಯ ತೆಗೆದುಕೊಂಡಿದ್ದಾರೆ. ಇದರಿಂದ ಪಕ್ಷದ ನಿಷ್ಠಾವಂತ ಬಣಕ್ಕೆ ಅನ್ಯಾಯವಾಗಿದೆ ಎಂದು ಆರೋಪ ಸಭೆಯಲ್ಲಿ ಕೇಳಿಬಂತು.
    ಜಿಲ್ಲಾಧ್ಯಕ್ಷ ಕೆ.ಪಿ.ಅಂಶುಮಂತ್ ಅವರು ಕೊಪ್ಪ ಬ್ಲಾಕ್‌ಗೆ ನಟರಾಜ್ ಆಯ್ಕೆಯನ್ನು ಬ್ಲಾಕ್‌ನ ಅಭಿಪ್ರಾಯ ತೆಗೆದುಕೊಳ್ಳದೆ ನೇಮಕ ಮಾಡಿರುವುದು ಸರಿಯಲ್ಲ. ನಟರಾಜ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಇಳಿಸಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದ ರವೀಂದ್ರ ಕುಕ್ಕುಡಿಗೆ, ಮಂಜುನಾಥ್ ನುಗ್ಗಿ, ನವೀನ್ ಮಾವಿನಕಟ್ಟೆ, ರಾಜೇಂದ್ರ ಧರೇಕೊಪ್ಪ, ನವೀನ್ ಕರುವಾನೆ, ಶ್ರೀಹರ್ಷ ಹರಿಹರಪುರ, ಮಿತ್ರ ಕೋಡ್ತಾಳ್, ಅಶೋಕ್ ನಾರ್ವೆ, ರತ್ನಾಕರ್ ಓಣಿತೋಟ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡಬೇಕು ಎಂಬ ಒತ್ತಾಯ ಕೇಳಿಬಂತು.
    ಕೆ.ಪಿ.ಅಂಶುಮಂತ್ ಅವರು ಸರ್ಕಾರದ ಗ್ಯಾರಂಟಿ ಅನುಷ್ಠಾನ ಸಮಿತಿಗೂ ನೇಮಕ ಮಾಡುವ ಮುನ್ನ ನಮ್ಮ ಜತೆ ಚರ್ಚೆ ನಡೆಸಿಲ್ಲ. ಕೇವಲ ಅವರ ಬೆಂಬಲಿಗರನ್ನು ನೇಮಕ ಮಾಡಿದರೆ ಹಲವಾರು ವರ್ಷಗಳಿಂದ ಪಕ್ಷಕ್ಕಾಗಿ ದುಡಿದವರು ಏನು ಮಾಡಬೇಕೆಂದು ಪ್ರಶ್ನಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕ ರದ್ದುಪಡಿಸಿ ಪಕ್ಷನಿಷ್ಠರನ್ನು ನೇಮಿಸಬೇಕು. ಇನ್ನುಮುಂದೆ ಯಾವುದೇ ತೀರ್ಮಾನ ಕೈಗೊಳ್ಳುವ ಮುನ್ನ ತಾಲೂಕಿನ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಜಿಲ್ಲೆಯಲ್ಲಿ ಬೆಳವಣಿಗೆಗಳ ಕುರಿತಂತೆ ಶೀಘ್ರದಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಈ ಸಭೆಯಲ್ಲಿ ನಡೆದ ನಿರ್ಣಯಗಳನ್ನು ಕಾರ್ಯಕರ್ತರ ಸಹಿ ಸಂಗ್ರಹ ಮಾಡಿ ಮನವಿ ಸಲ್ಲಿಸಲು, ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿರುವ ಜಿಲ್ಲಾಧ್ಯಕ್ಷರ ವಿರುದ್ಧ ಕೆಪಿಸಿಸಿಗೆ ದೂರು ನೀಡಲು ನಿರ್ಣಯ ಕೈಗೊಳ್ಳಲಾಯಿತು.
    ಬ್ಲಾಕ್ ಅಧ್ಯಕ್ಷರ ನೇಮಕಾತಿ ಕುರಿತು ನನಗೆ ಸರಿಯಾದ ಮಾಹಿತಿಯಿಲ್ಲ. ಈ ಹಿಂದೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಯಾದ ವೇಳೆಯೂ ವಿರೋಧವಿತ್ತು, ನಂತರ ಸರಿಯಾಯಿತು. ಸರ್ಕಾರದಿಂದ ನಾಮನಿರ್ದೇಶನ ಆಯ್ಕೆಯಲ್ಲಿ ಅಸಮಾಧಾನವಿದೆ. ಕಾರ್ಯಕರ್ತರು ಬೇಸರಗೊಳ್ಳುವುದು ಬೇಡ. 20 ತಿಂಗಳ ನಂತರ ಉಳಿದ ಕಾರ್ಯಕರ್ತರಿಗೆ ಅಧಿಕಾರ ನೀಡಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿ ಸಮಾಧಾನ ಪಡಿಸಿದರು.
    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ವಿರೋಧ ವ್ಯಕ್ತಪಡಿಸಿದರೂ ಸಭೆಯಲ್ಲಿ ಲೋಕಸಭಾ ಚುನಾವಣಾ ಗೆಲುವಿಗೆ ಒಗ್ಗಟ್ಟು ಪ್ರದರ್ಶಿಸಿದರು. ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಲು ಹಳ್ಳಿ ಹಳ್ಳಿಯಲ್ಲಿ ವ್ಯವಸ್ಥಿತವಾಗಿ ಪ್ರಚಾರ ನಡೆಸಬೇಕು. ತಾಲೂಕಿಗೆ ಆಗಮಿಸುವ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರಿಗೆ ಅದ್ದೂರಿ ಸ್ವಾಗತಕ್ಕೆ ತಯಾರಿ ನಡೆಸಲು ತೀರ್ಮಾನಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts