ಸಿಂಧನೂರು; ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ರಾಜ್ಯೋತ್ಸವವನ್ನು ನಾಡಹಬ್ಬದಂತೆ ಆಚರಿಸಲು ತೀರ್ಮಾನಿಸಲಾಗಿದೆಂದು ತಹಸೀಲ್ದಾರ್ ಅರುಣ್ ದೇಸಾಯಿ ತಿಳಿಸಿದರು.
ಇದನ್ನೂ ಓದಿ: 27 ಜನರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ-ಸಭೆ ಕರೆಯದೇ ಆಯ್ಕೆ ನಡೆಸಿದ ಬಗ್ಗೆ ಕಸಾಪ ಆಕ್ಷೇಪ
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ನ.1ರಂದು ಬೆಳಗ್ಗೆ ತಾಲೂಕು ಆಡಳಿತಸೌಧ ಕಚೇರಿ ಆವರಣದಲ್ಲಿ ಧ್ವಜಾರೋಹಣ, ನಂತರ ಗಾಂಧಿ ವೃತ್ತದಲ್ಲಿ ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಶಾಸಕ ಹಂಪನಗೌಡ ಬಾದರ್ಲಿಯಿಂದ ಕನ್ನಡ ಧ್ವಜಾರೋಹಣ ನಡೆಯಲಿದೆ.
9 ಗಂಟೆಗೆ ತಾಲೂಕು ಕ್ರೀಡಾಂಗಣದಲ್ಲಿ ಪಥ ಸಂಚಲನ, ಗೌರವ ಧ್ವಜವಂದನೆ, ಆಯ್ದ ಐದು ಕವಿಗಳ ಐದು ಗೀತೆಗಳನ್ನು ಕೋಟಿಕಂಠ ಗಾಯನ ಹಾಗೂ ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದರು.
ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ಮಾತನಾಡಿ, ನ.1 ರಂದು ಎಲ್ಲ ಮನೆಗಳ ಮುಂದೆ ಕೆಂಪು ಮತ್ತು ಹಳದಿ ಬಣ್ಣದ ರಂಗೋಲಿಗಳನ್ನು ಬಿಡಿಸಿ ಕರ್ನಾಟಕ ಸಂಭ್ರಮ-50 ಹೆಸರು, ಉಸಿರಾಗಲಿ ಕನ್ನಡ ಎಂಬ ಘೋಷ ವಾಕ್ಯ ಬರೆಯಬೇಕು.
ಮನೆಗಳ ಮೇಲೆ ಕನ್ನಡ ಧ್ವಜಗಳನ್ನು ಕಟ್ಟಬೇಕು. ಸಂಜೆ ಸಮಯದಲ್ಲಿ ದೀಪದ ಹಣತೆ ಹಚ್ಚಬೇಕು. 4 ಸಾವಿರ ವಿದ್ಯಾರ್ಥಿಗಳು ಏಕಕಾಲದಲ್ಲಿ 5 ಕವಿಗಳ ಗೀತೆಗಳಿಗೆ ಸ್ವರ ಸಂಯೋಜನೆ ಮಾಡಲಿದ್ದಾರೆ. ಕನ್ನಡ ನೆಲ, ಜಲ, ಭಾಷೆ ಉಳಿಸಿ, ಮುಂದಿನ ಪೀಳಿಗೆಗ ಕೊಡುಗೆಯಾಗಿ ನೀಡುವ ಕೆಲಸ ನಾವೆಲ್ಲರೂ ಮಾಡಬೇಕಿದೆಂದರು.