More

    ಕೃಷಿಗೆ ಕೂಲಿ ಕಾರ್ಮಿಕರ ಕೊರತೆ

    ಬೆಳ್ಮಣ್: ಒಂದು ವಾರದಿಂದ ಉತ್ತಮ ಮಳೆ ಬರುತ್ತಿದ್ದು, ಕೃಷಿ ಚಟುವಟಿಕೆಗಳು ಚುರುಕುಗೊಂಡಿದೆ. ಈ ಮಧ್ಯೆ ಗದ್ದೆ ಕೆಲಸಗಳು ಚುರುಕಾಗಿದ್ದರೂ ಬಹುತೇಕ ಕೃಷಿಕರಿಗೆ ಕಾರ್ಮಿಕರು ಸಿಗದೆ ಕೆಲಸ ವಿಳಂಬವಾಗುತ್ತಿದೆ.

    ಅಂತರ್ ಜಿಲ್ಲಾ ಕೂಲಿ ಕಾರ್ಮಿಕರು ಊರಿಗೆ ಮರಳಿರುವುದರಿಂದ ಸದ್ಯ ಕೃಷಿ ಕೆಲಸಕ್ಕೆ ಕಾರ್ಮಿಕರಿಲ್ಲ. ಗದ್ದೆಗಳಿಗೆ ಹಟ್ಟಿ ಗೊಬ್ಬರ ಹಾಕಲು ಕಾರ್ಮಿಕರಿಲ್ಲದೆ ಕೃಷಿಕರು ಕಂಗಾಲಾಗಿದ್ದಾರೆ. ಬಾಗಲಕೋಟೆ, ಶಿವಮೊಗ್ಗ, ಉತ್ತರ ಕನ್ನಡ, ಶಿರಸಿ, ವಿಜಯಪುರ, ಜಿಲ್ಲೆಗಳಿಂದ ಬಂದು ಕೂಲಿ ಕೆಲಸ ಮಾಡಿಕೊಂಡಿದ್ದ ಕಾರ್ಮಿಕರು ಕಾರ್ಮಿಕರ ಕೊರತೆ ನೀಗಲಿದೆ ಎನ್ನುತ್ತಾರೆ ರೈತರು.

    ಮಳೆಯು ಉತ್ತಮವಾಗಿ ಆಗುತ್ತಿದೆ. ಕೃಷಿ ಚಟುವಟಿಕೆ ಆರಂಭಿಸಬೇಕಾದ ಸಮಯ. ಆದರೆ ಗದ್ದೆಗಳಿಗೆ ಗೊಬ್ಬರವನ್ನು ಹಾಕಲು ಕೂಲಿ ಕಾರ್ಮಿಕರು ಸಿಗುತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಕೂಲಿ ಕೆಲಸಕ್ಕೆ ಜನ ಸಿಗುತ್ತಿಲ್ಲ. ಕಾರ್ಮಿಕರ ಕೊರತೆ ದೊಡ್ಡ ಪ್ರಮಾಣದಲ್ಲಿ ಎದ್ದು ಕಾಣುತ್ತಿದೆ.
    ವಸಂತ್, ಹಿರಿಯ ಕೃಷಿಕ

    ಕೋಟ ಹೋಬಳಿ ಭತ್ತ ನಾಟಿಗೆ ಸಿದ್ಧತೆ
    ಕೋಟ: ಹೋಬಳಿಯ ರೈತರು ಬಿತ್ತನೆ ಹಾಗೂ ಉಳುಮೆ ಮುಗಿಸಿ ನೇಜಿ ನಾಟಿಗೆ ಟ್ರಾೃಕ್ಟರ್, ಟಿಲ್ಲರ್‌ಗಳತ್ತ ದೃಷ್ಟಿ ಹಾಯಿಸಿದ್ದಾರೆ. ರೈತರು ಸ್ಥಳೀಯ ಕೂಲಿಯಾಳುಗಳ ಸಹಕಾರದಿಂದ ಯಾಂತ್ರೀಕೃತ ಚಾಪೆ ನೇಜಿ ನಾಟಿಗೆ ಮುಂದಾಗಿದ್ದಾರೆ.
    ಹಲವು ವರ್ಷಗಳಿಂದ ಹಡಿಲು ಬಿದ್ದಿದ್ದ ಭೂಮಿ ಈ ಬಾರಿ ಶಾಸಕರ ಹಾಗೂ ಸಚಿವರ ಮುತುವರ್ಜಿಯೊಂದಿಗೆ ಹಸಿರಾಗುತ್ತಿದೆ. ಹಡಿಲು ಭೂಮಿ ಸರ್ಕಾರದ ಪಾಲಾಗಬಹುದು ಎಂಬ ಆತಂಕದಿಂದ ಹೊಲದ ಮಾಲೀಕರು ಗೇಣಿ ಕೃಷಿಗೆ ಆದ್ಯತೆ ನೀಡಿದ್ದಾರೆ. ಕೋಟ ಹೋಬಳಿಯಲ್ಲಿ ಸಾವಿರಾರು ಎಕರೆ ಕೃಷಿ ಭೂಮಿ ಖಾಸಗಿ ಕಂಪನಿಗಳ ಪಾಲಾಗಿದ್ದರೂ ಅದು ಹಡಿಲು ಬಿದ್ದಿದೆ. ಅದರಲ್ಲಿ ಬಹುಪಾಲು ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಹಾಗೂ ಬಾರಕೂರು ಗ್ರಾಪಂನ ಹೊಸಾಳ ಗ್ರಾಮ ವ್ಯಾಪ್ತಿಯಲ್ಲಿದೆ. ಉಳಿದಂತೆ ಕೋಟ, ಸಾಲಿಗ್ರಾಮ, ಪಾರಂಪಳ್ಳಿ, ಪಡುಕರೆ, ಸಾಸ್ತಾನದ ಪಾಂಡೇಶ್ವರ, ಐರೋಡಿ, ವಡ್ಡರ್ಸೆ, ಶಿರಿಯಾರ, ಕೋಡಿ ಭಾಗಗಳಲ್ಲಿ ಬೇರೆ ಬೇರೆ ರೀತಿಯ ಕೃಷಿ ಮಾಡಲಾಗುತ್ತಿದೆ.

    ಕೋಟ ಹಾಗೂ ಕೋಟತಟ್ಟು ಭಾಗಗಳ ಹಡಿಲು ಭೂಮಿ ಹಸಿರಾಗಿಸುವ ಯೋಚನೆ ಇತ್ತು. ಈಗ 14 ಎಕರೆ ಹಡಿಲು ಭೂಮಿ ಉಳುಮೆ ಮಾಡಲಾಗಿದೆ. ನಾಟಿ ಕಾರ್ಯ ಮಾತ್ರ ಬಾಕಿಯಿದೆ.
    ಶೀಲರಾಜ್ ಕಾಂಚನ್ ಕದ್ರಿಕಟ್ಟು
    ಕೃಷಿಕ, ಕೋಟ

    ಪ್ರತಿವರ್ಷ ಕೂಲಿಯಾಳುಗಳ ಸಮಸ್ಯೆ ಇದ್ದು, ಈ ಬಾರಿ ಯಾಂತ್ರೀಕೃತ ನಾಟಿಗೆ ಒತ್ತು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರ ರಿಯಾಯಿತಿ ದರದಲ್ಲಿ ಯಂತ್ರಗಳನ್ನು ಆಯಾ ರೈತ ಸಂಘಗಳ ಮೂಲಕ ನೀಡಿದರೆ ರೈತರಿಗೆ ಅನುಕೂಲವಾಗುತ್ತದೆ.
    ಜಯರಾಮ ಶೆಟ್ಟಿ
    ಅಧ್ಯಕ್ಷರು ರೈತ ಧ್ವನಿ ಸಂಘ ಕೋಟ

    ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದಿಂದ ವಿನೂತನ ಕಾರ್ಯಕ್ರಮ
    ಹೆಬ್ರಿ: ಕೃಷಿ ಚಟುವಟಿಕೆಗಳು ಆರಂಭಗೊಂಡಿರುವ ಮಧ್ಯೆ ಯುವಕರನ್ನು ಕೃಷಿ ಚಟುವಟಿಕೆಗಳತ್ತ ಆಕರ್ಷಿಸಲು ಮತ್ತು ಕೃಷಿಯನ್ನು ಪೋಷಿಸುವ ಉದ್ದೇಶದಿಂದ ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘ ವಿನೂತನ ಕಾರ್ಯಕ್ರಮ ರೂಪಿಸಿದೆ.
    ಕೋವಿಡ್‌ನಿಂದ ಕೆಲಸ ಕಳೆದುಕೊಂಡವರಿಗೆ ಉದ್ಯೋಗ ಹಾಗೂ ಹಡಿಲು ಭೂಮಿಯಲ್ಲಿ ಸಾಗುವಳಿ ಮಾಡುವುದು ಇದರ ಮುಖ್ಯ ಉದ್ದೇಶ. ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘ ಈ ಭಾಗದಲ್ಲಿ ಹಡಿಲು ಭೂಮಿ ಮತ್ತು ಅದನ್ನು ನಿರ್ವಹಿಸಲು ಆರ್ಥಿಕ ಸಹಾಯ ನೀಡಲಿದೆ. ಮುಂದಿನ ವಾರ ಶಾಸಕ ಸುನೀಲ್ ಕುಮಾರ್ ಚಾಲನೆ ನೀಡಲಿದ್ದಾರೆ. ಪ್ರವೀಣ್ ಬಲ್ಲಾಳ್ ವಿಶೇಷ ಮುತುವರ್ಜಿ ವಹಿಸಿ ತಾಲೂಕಿನಾದ್ಯಂತ ಯಾವುದೇ ಸಂಘ ಸಂಸ್ಥೆ ಅಥವಾ ಜನ ಕೃಷಿ ಮಾಡಲು ಮುಂದೆ ಬಂದರೆ ಅವರಲ್ಲಿ ಭೂಮಿ ಇಲ್ಲದಿದ್ದಲ್ಲಿ ಭೂಮಿ ಹೊಂದಿಸಿಕೊಡುವ ವ್ಯವಸ್ಥೆಗೆ ಮುಂದಾಗಿದ್ದಾರೆ. ಹೆಬ್ರಿಯಲ್ಲಿ ಭಾಸ್ಕರ್ ಜೋಯಿಸ್ ಭೂಮಿ ನೀಡಲು ಮುಂದಾಗಿದ್ದಾರೆ. ಹೆಬ್ರಿ, ಬೆಳಂಜೆಯಲ್ಲೂ ಈ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಸಹಕಾರಿ ಸಂಘ ಕನಿಷ್ಠ ಬಡ್ಡಿಯಲ್ಲಿ ಸಾಲ ನೀಡಲಿದ್ದು, ಸಂಘ ಸಂಸ್ಥೆಗಳು, ಯುವಕರು ಇದರ ಪ್ರಯೋಜನ ಪಡೆಯಬಹುದು. ಉಳುಮೆಗೆ ವಿನೂತನ ಶೈಲಿಯ ಟ್ರ್ಯಾಕ್ಟರ್ ಆಗಮಿಸಿದ್ದು, ಈ ಯೋಜನೆಯಲ್ಲಿ ಗಂಟೆಗೆ 800 ರೂ. ನಿಗದಿಪಡಿಸಲಾಗಿದೆ.

    ಕೃಷಿ ಉತ್ತೇಜಿಸಲು ಈ ಯೋಜನೆ ರೂಪಿಸಲಾಗಿದೆ. ಕರೊನಾದಂಥ ಸಂದರ್ಭ ಉದ್ಯೋಗ ಇಲ್ಲದವರಿಗೆ ಉದ್ಯೋಗ ದೊರಕಿಸುವ ಕಾರ್ಯ ಆಗುತ್ತಿದೆ. ಸಂಘ ಸಂಸ್ಥೆಗಳು ಮುಂದೆ ಬಂದು ಕೃಷಿ ಚಟುವಟಿಕೆಯಲ್ಲಿ ತೊಡಗಲಿ.
    ನವೀನ್ ಕೆ.ಅಡ್ಯಂತಾಯ
    ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘ ಅಧ್ಯಕ್ಷ

    ಯುವಕರನ್ನು ಉತ್ತೇಜಿಸಲು ತಾಲೂಕಿನಾದ್ಯಂತ ಹಡಿಲು ಬಿದ್ದ ಕೃಷಿ ಭೂಮಿಯನ್ನು ಆಸಕ್ತರಿಗೆ ಕೊಡಿಸಲಾಗುವುದು. ಈಗಾಗಲೇ ಹೆಬ್ರಿ ಮತ್ತು ಬೆಳಂಜೆಯಲ್ಲಿ ಹಡಿಲು ಬಿದ್ದ ಕೃಷಿ ಭೂಮಿಯನ್ನು ನೀಡಲು ಜನ ಮುಂದಾಗಿದ್ದು, ಆಸಕ್ತರು ಇದರ ಪ್ರಯೋಜನ ಪಡೆದುಕೊಳ್ಳಲಿ.
    ಪ್ರವೀಣ್ ಬಲ್ಲಾಳ್, ಉದ್ಯಮಿ ಹೆಬ್ರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts