ಹಾನಗಲ್ಲ: ದಾಂಡೇಲಿ ಅರಣ್ಯ ಪ್ರದೇಶದಿಂದ ಹಾನಗಲ್ಲ ತಾಲೂಕಿಗೆ ಆಗಮಿಸಿರುವ ಕಾಡಾನೆಗಳ ದಾಳಿ ಮುಂದುವರಿದಿದ್ದು, ಗ್ರಾಮಗಳಿಂದ ಗ್ರಾಮಕ್ಕೆ ಸಂಚರಿಸಿ ಅಡಕೆ, ಬಾಳೆ ತೋಟ, ಕೊಯ್ಲಿಗೆ ಬಂದಿರುವ ಭತ್ತದ ಪೈರನ್ನೂ ತಿಂದು, ತುಳಿದು ನಾಶಪಡಿಸಿವೆ.
ಭಾನುವಾರ ರಾತ್ರಿ ಹಾನಗಲ್ಲ ತಾಲೂಕಿನ ಅರಣ್ಯ ಪ್ರದೇಶಕ್ಕೆ ಕಾಲಿಟ್ಟಿರುವ ನಾಲ್ಕು ಕಾಡಾನೆಗಳ ತಂಡ ಸೋಮವಾರ ಕಾಮನಹಳ್ಳಿ, ಶಿವಪುರ, ಹಂದಿಹಾಳ ಗ್ರಾಮಗಳ ರೈತರ ತೋಟ ಹಾಗೂ ಗದ್ದೆಗಳಲ್ಲಿ ದಾಳಿ ನಡೆಸಿ ಫಸಲು ನಾಶ ಪಡಿಸಿದ್ದವು. ಬುಧವಾರ ರಾತ್ರಿ ಹಿರೇಕಣಗಿ ಅರಣ್ಯ ಪ್ರದೇಶದಿಂದ ಹಿರೂರು, ಗಡಿಯಂಕನಹಳ್ಳಿ, ಮಾರ್ಗವಾರಿ ಶಿರಗೋಡ ಗ್ರಾಮದ ತೋಟಗಳಲ್ಲಿ ದಾಂಗುಡಿಯಿಟ್ಟಿವೆ. ಗ್ರಾಮದ ರೈತರಾದ ಯಲ್ಲಪ್ಪ ಮಡಿವಾಳರ, ರಾಜೇಸಾಬ ನಾಲಬಂದ್ ಅವರ ತೋಟಗಳಿಗೆ ನುಗ್ಗಿ ಅಡಕೆ, ಬಾಳೆ ಗಿಡಗಳನ್ನು ನಾಶಪಡಿಸಿವೆ. ಇದೇ ಗ್ರಾಮದ ಮಲ್ಲಪ್ಪ ಲಕ್ಕುಂಡಿ ಅವರ ತೋಟದ ಗೋಡಂಬಿ ಗಿಡಗಳನ್ನು ನಾಶಪಡಿಸಿವೆ. ಅಲ್ಲದೆ, ಇವರ ಹೊಲದಲ್ಲಿ ಕೊಯ್ಲಿಗೆ ಬಂದಿದ್ದ ಭತ್ತದ ಪೈರನ್ನು ತಿಂದು ಹಾಳು ಮಾಡಿವೆ. ಶಿರಗೋಡ ಗ್ರಾಮದ ಬೀದಿಗಳಲ್ಲಿ ಸಂಚರಿಸಿ ಗ್ರಾಮಸ್ಥರನ್ನೂ ಭಯಭೀತಗೊಳಿಸಿವೆ. ಗ್ರಾಮಸ್ಥರು ಕೂಗಾಡಿ ಕಾಡಾನೆಗಳನ್ನು ಕಾಡಿನತ್ತ ಓಡಿಸಿದ್ದಾರೆ. ಇದಲ್ಲದೆ, ಗೆಜ್ಜಿಹಳ್ಳಿ ಗ್ರಾಮದಲ್ಲಿ ರೈತರೊಬ್ಬರ ಹೊಲ ಹಾಗೂ ಹಿರೂರ ಗ್ರಾಮದಲ್ಲಿ ಇಬ್ಬರು ರೈತರ ಹೊಲದಲ್ಲಿನ ಭತ್ತದ ಪೈರು ನಾಶಪಡಿಸಿದ ಬಗೆಗೆ ವರದಿಯಾಗಿದೆ.
ಹಿರೇಕಣಗಿ ಅರಣ್ಯ ಪ್ರದೇಶದ ಸುತ್ತಲ ಗ್ರಾಮಗಳಲ್ಲಿ ಅರಣ್ಯ ಇಲಾಖೆಯ ಮೂರು ತಂಡಗಳು ರಾತ್ರಿ ವಾಹನಗಳಲ್ಲಿ ಗಸ್ತು ತಿರುಗುತ್ತಿವೆ. ಆದರೂ ಕಾಮನಹಳ್ಳಿಯಿಂದ ಹೀರೂರು, ಗಡಿಯಂಕನಹಳ್ಳಿ ಮಾರ್ಗವಾಗಿ ಶಿರಗೋಡ ಗ್ರಾಮದಲ್ಲಿ ಒಂದಿಷ್ಟು ಸಮಯ ಕಳೆದು ಮುಂದೆ ಕ್ಯಾಸನೂರು, ಅವಲಗೇರಿಕೊಪ್ಪ ಗ್ರಾಮದ ಅರಣ್ಯದಲ್ಲಿ ಬೀಡು ಬಿಟ್ಟಿವೆ ಎಂಬ ಮಾಹಿತಿಯಿದೆ.
ಹಗಲು ಹೊತ್ತಿನಲ್ಲಿ ಕಾಡಿನಲ್ಲಿರುವ ಕಾಡಾನೆಗಳು ರಾತ್ರಿಯಾದೊಡನೆ ಸಂಚಾರ ಆರಂಭಿಸುತ್ತಿವೆ. ಅರಣ್ಯ ಪ್ರದೇಶದ ಸಮೀಪದ ತೋಟಗಳಿಗೆ ನುಗ್ಗಿ ಗಿಡಗಳನ್ನು ನೆಲಕ್ಕೆ ಕೆಡವಿ ಹಾಳು ಮಾಡುತ್ತಿವೆ. ಕಾಡಾನೆಗಳ ಪ್ರತಿದಿನದ ಚಲನ-ವಲನಗಳು ಸಿಬ್ಬಂದಿಗೆ ತಿಳಿಯದಂತಾಗುತ್ತಿದ್ದು, ಗ್ರಾಮಸ್ಥರು ಮಾಹಿತಿ ನೀಡಿದ ನಂತರವೇ ಕ್ರಮ ಕೈಗೊಳ್ಳುವಂತಾಗಿದೆ.
ತಾಲೂಕಿನ ಅರಣ್ಯ ಪ್ರದೇಶದಲ್ಲಿ ಸಾಂಪ್ರದಾಯಿಕ ಮಾರ್ಗಗಳಲ್ಲಿ ಕಾಡಾನೆಗಳು ಸಂಚರಿಸುತ್ತಿದ್ದು, ಗ್ರಾಮಸ್ಥರು ಅವುಗಳನ್ನು ತಡೆಯುವ, ಬೆನ್ನಟ್ಟುವ ಸಾಹಸಕ್ಕೆ ಇಳಿಯಬಾರದು. ಅವು ಕಂಡುಬಂದರೆ ತಕ್ಷಣವೇ ಇಲಾಖೆಗೆ ಸಂರ್ಪಸಬೇಕು. ಅವುಗಳನ್ನು ಕೆಣಕಿದರೆ ಜೀವಹಾನಿಯಾಗುವ ಸಂಭವವಿವೆ. ಯಾರೊಬ್ಬರೂ ಅವುಗಳ ಮೇಲೆ ಯಾವುದೇ ಕ್ರಮಕ್ಕೆ ಮುಂದಾಗಬಾರದು. ರಾತ್ರಿ ಸಮಯದಲ್ಲಿ ತೋಟ ಮತ್ತು ಹೊಲಗಳಿಗೆ ಓಡಾಡಬಾರದು.
| ಗಿರೀಶ ಚೌಗಲೆ, ಆರ್ಎಫ್ಒ, ಹಾನಗಲ್ಲ