More

    ಸ್ನಾತಕೋತ್ತರ ಪದವೀಧರನ ಕೃಷಿ ಪ್ರೀತಿ: ಹಳ್ಳಿಯಲ್ಲೇ ಲಕ್ಷಾಂತರ ರೂ ಸಂಪಾದಿಸುತ್ತಿರುವ ಯುವ ರೈತನ ಯಶೋಗಾಥೆ ಇಲ್ಲಿದೆ…!

    ಎಂ.ಪಿ.ವೆಂಕಟೇಶ್ ಮದ್ದೂರು
    ಸ್ನಾತಕೋತ್ತರ ಪದವಿ ಪಡೆದು ಬೆಂಗಳೂರಿನಲ್ಲಿ ಉನ್ನತ ಹುದ್ದೆಯಲ್ಲಿದ್ದ ಯುವಕ ಕೃಷಿ ಮೇಲಿನ ಪ್ರೀತಿಯಿಂದ ಕೆಲಸ ಬಿಟ್ಟು ಹಳ್ಳಿಗೆ ಬಂದು ಭೂಮಿತಾಯಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಮಗ್ರ ಕೃಷಿ ಅಳವಡಿಸಿಕೊಂಡು ಯಶಸ್ವಿ ಪಥದಲ್ಲಿ ಸಾಗಿ, ವರ್ಷಕ್ಕೆ 10ರಿಂದ 12 ಲಕ್ಷ ರೂ.ಗಳನ್ನು ಸಂಪಾದಿಸುವ ಮೂಲಕ ಕೃಷಿಯಲ್ಲೂ ಖುಷಿ ಕಾಣಬಹುದು, ಲಕ್ಷ ಲಕ್ಷ ಸಂಪಾದಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ.
    ತಾಲೂಕಿನ ಕೋಣಸಾಲೆ ಗ್ರಾಮದ ದಿ.ಇಂದುಕುಮಾರ್ ಅವರ ಪುತ್ರ ಯುವ ರೈತ ಎಂ.ಐ.ದರ್ಶನ್ ಈ ಕೃಷಿ ಸಾಧನೆ ಮಾಡಿ ತೋರಿಸಿ ಇತರರಿಗೆ ಮಾದರಿಯಾಗಿದ್ದಾರೆ. ಮಾಹಿತಿ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಕರ್ನಾಟಕ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರದಲ್ಲಿ ಯೋಜನ ವಿಜ್ಞಾನಿಯಾಗಿ ಸುಮಾರು 10 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ಕೃಷಿ ಮಾಡಬೇಕು ಎಂಬ ಮಹಾದಾಸೆಯಿಂದ ಸುಮಾರು 12 ವರ್ಷಗಳಿಂದ ಕೋಣಸಾಲೆಯಲ್ಲಿ ಕೃಷಿ ಕಾಯಕ ಮಾಡಿ ಕೈ ತುಂಬಾ ಆದಾಯ ನೋಡುತ್ತಿದ್ದಾರೆ. ಇವರ ಜಮೀನುಗಳಿಗೆ ವಿಶ್ವೇಶ್ವರಯ್ಯ ನಾಲೆಯ ಜತೆಗೆ ಬೋರ್‌ವೆಲ್ ನೀರಿನ ಸೌಲಭ್ಯವಿದ್ದು, ಅಡಕೆ ಬೆಳೆಗೆ ಹನಿ ನೀರಾವರಿ ಪದ್ಧತಿ ಅಳವಡಿಸಿದ್ದಾರೆ.
    ಯುವ ರೈತ ದರ್ಶನ್ ಅವರಿಗೆ 20 ಎಕರೆ ಕೃಷಿ ಜಮೀನಿದೆ. ಅದರಲ್ಲಿ 5 ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯುತ್ತಿದ್ದಾರೆ. 5 ಅಡಿ ಅಂತರದ ಸಾಲುಗಳಲ್ಲಿ ಬೆಳೆದ ಕಬ್ಬಿನ ಬೆಳೆಯ ಬೇಸಾಯವನ್ನು ಸಂಪೂರ್ಣವಾಗಿ ಮಿನಿ ಟ್ರಾೃಕ್ಟರ್ ಮೂಲಕ ಮಾಡುತ್ತಾರೆ. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಕೂಲಿ ಕಾರ್ಮಿಕರ ಅವಶ್ಯಕತೆ ಇಲ್ಲದಿರುವುದರಿಂದ ಈ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಪ್ರತಿ ವರ್ಷ ಉತ್ತಮ ಫಸಲು ಬರುವುದರಿಂದ ಉತ್ತಮ ಆದಾಯ ಕಾಣುತ್ತಿದ್ದಾರೆ.
    9 ಎಕರೆ ಪ್ರದೇಶದಲ್ಲಿ ಸಮೃದ್ಧವಾಗಿ ತೆಂಗಿನ ತೋಟವಿದ್ದು, ಎಳನೀರು, ಕಾಯಿ ಹಾಗೂ ಕೊಬ್ಬರಿ ಉತ್ತಮ ಬೆಳೆ ಬರುತ್ತಿದ್ದು, ಇದರಿಂದಲೂ ಆಗಿಂದಾಗ್ಗೆ ಹಣ ನೋಡುತ್ತಿದ್ದಾರೆ. ಒಂದೂವರೆ ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯುತ್ತಾರೆ. ತೆಂಗಿನ ತೋಟದಲ್ಲಿ ಹಿಪ್ಪುನೇರಳೆ ಬೆಳೆಯಿದ್ದು ರೇಷ್ಮೆ ಕೃಷಿಯನ್ನೂ ಮಾಡುತ್ತಾರೆ. 5 ಎಕರೆ ಪ್ರದೇಶದಲ್ಲಿ ಒಂದೂವರೆ ವರ್ಷದ ಹಿಂದೆ ನೆಟ್ಟಿರುವ ಅಡಕೆ ತೋಟವಿದ್ದು, ಅಡಕೆ ಸಸಿಗಳು ನಡುವೆ ಅಂತರ ಬೆಳೆಯಾಗಿ ಸೇವಂತಿಗೆ ಹೂವಿನ ಗಿಡಗಳನ್ನು ಹಾಕಿದ್ದು, ಅಡಕೆ ಜತೆಗೆ ಸೇವಂತಿ ಬೆಳೆಯನ್ನು ಬೆಳೆಯುವ ಪ್ರಯೋಗವನ್ನು ಕೈಗೊಂಡಿದ್ದಾರೆ.

    ಸ್ನಾತಕೋತ್ತರ ಪದವೀಧರನ ಕೃಷಿ ಪ್ರೀತಿ: ಹಳ್ಳಿಯಲ್ಲೇ ಲಕ್ಷಾಂತರ ರೂ ಸಂಪಾದಿಸುತ್ತಿರುವ ಯುವ ರೈತನ ಯಶೋಗಾಥೆ ಇಲ್ಲಿದೆ...!

    ಇದರ ಜತೆಗೆ 100 ಕುರಿ ಸಾಕಣೆ, 10 ಹಳ್ಳಿಕಾರ್ ತಳಿಯ ಹಸುಗಳು, 100ಕ್ಕೂ ಹೆಚ್ಚು ನಾಟಿ ಕೋಳಿ ಸಾಕುತ್ತಿದ್ದಾರೆ. 300 ಸಾಗುವನಿ, 100 ಶ್ರೀಗಂಧ, 200 ಮಹಾಗನಿ ಸೇರಿದಂತೆ ಹಲಸು, ಬಾಳೆ ಸೇರಿದಂತೆ ಹಲವಾರು ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಬೇಸಾಯಕ್ಕೆ ಹೆಚ್ಚಾಗಿ ಇವರೇ ಸಾಕಿರುವ ಕುರಿ ಹಾಗೂ ಹಸುಗಳ ಸಗಣಿ ಸೇರಿದಂತೆ ಕೊಟ್ಟಿಗೆ ಗೊಬ್ಬರವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವುದರಿಂದ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ ಹಾಗೂ ಹೆಚ್ಚಿನ ಫಸಲನ್ನು ನಿರೀಕ್ಷಿಸಬಹುದಾಗಿದೆ. ಆಧುನಿಕ ಪದ್ಧತಿಯನ್ನು ಅಳವಡಿಸಿಕೊಂಡು ಉತ್ತಮ ರೀತಿಯಲ್ಲಿ ಕೃಷಿ ಮಾಡುತ್ತಿದ್ದಾರೆ. ಇವರ ಕೃಷಿ ಕಾಯಕಕ್ಕೆ ತಾಯಿ ನಿರ್ಮಲಾ ಇಂದುಕುಮಾರ್, ಪತ್ನಿ ಸುಷ್ಮಾ ಸೇರಿದಂತೆ ಇಡೀ ಕುಟುಂಬವೇ ಇವರಿಗೆ ಸಾಥ್ ನೀಡುತ್ತಿದ್ದಾರೆ. ಜತೆಗೆ ಹೊಂಬಾಳೆಗೌಡನದೊಡ್ಡಿ ಅಪ್ಪಾಜಿ ಅವರು ಸಹಕಾರ ನೀಡುತ್ತಿದ್ದಾರೆ.

    ಸ್ನಾತಕೋತ್ತರ ಪದವೀಧರನ ಕೃಷಿ ಪ್ರೀತಿ: ಹಳ್ಳಿಯಲ್ಲೇ ಲಕ್ಷಾಂತರ ರೂ ಸಂಪಾದಿಸುತ್ತಿರುವ ಯುವ ರೈತನ ಯಶೋಗಾಥೆ ಇಲ್ಲಿದೆ...!

    ಪರಿಸರ ಪ್ರೇಮಿ: ಪರಿಸರ ಉಳಿದರೆ ಮಾತ್ರ ಭೂಮಿ ಮೇಲೆ ಮಾನವ ಸಂಕುಲ ನೆಮ್ಮದಿಯಿಂದ ಬದುಕಲು ಸಾಧ್ಯ, ಕೇವಲ ಹಣದಿಂದ ಮಾತ್ರವಲ್ಲ ಎಂಬ ಆಲೋಚನೆಯಿಂದ ಇವರ ತೋಟದಿಂದ ಅರಣ್ಯ ಇಲಾಖೆಯ ಅಧಿಕಾರಿಗಳ ಸಹಾಯದಿಂದ ರಸ್ತೆ ಬದಿಯಲ್ಲಿ 100ಕ್ಕೂ ಹೆಚ್ಚು ಜಂಬೂನೇರಳೆ, 200ಕ್ಕೂ ಹೆಚ್ಚು ಮಹಾಗನಿ ಸಸಿಗಳನ್ನು ಹಾಕಿ ಅವುಗಳು ಬೆಳೆಯಲು ಸಹಕಾರ ನೀಡುತ್ತಿದ್ದಾರೆ.
    ಚಿಕ್ಕ ವಯಸ್ಸಿನಿಂದಲೂ ದರ್ಶನ್ ಅವರಿಗೆ ಕೃಷಿಯ ಮೇಲಿನ ಅಪಾರ ಪ್ರೀತಿ ಬರಲು ತಂದೆ ದಿ.ಇಂದುಕುಮಾರ್ ಕಾರಣ. ಅವರು ದೊಡ್ಡ ಪ್ರಮಾಣದಲ್ಲಿ ಭತ್ತ, ತೆಂಗು, ಕಬ್ಬು, ರಾಗಿ ಸೇರಿದಂತೆ ಹಲವಾರು ಬೆಳೆ ಬೆಳೆಯುತ್ತಿದ್ದರು. ಈ ರೀತಿಯ ಒಕ್ಕಲುತನವನ್ನು ನೋಡಿಕೊಂಡು ಬೆಳೆದ ದರ್ಶನ್‌ಗೆ ನಾನು ಕೂಡ ತಂದೆಯ ರೀತಿ ವ್ಯವಸಾಯ ಮಾಡಬೇಕು ಎಂದು ಬಯಕೆಯಿಂದ ಉನ್ನತ ಕೆಲಸ ಬಿಟ್ಟು ವ್ಯವಸಾಯ ಮಾಡುತ್ತಿದ್ದಾರೆ.
    ಮಹರ್ನವಮಿದೊಡ್ಡಿ-ಶಿವಾರಕಾಲೋನಿ ರಸ್ತೆಯಲ್ಲಿ ಇರುವ ತಮ್ಮ ತೋಟವನ್ನು ‘ಕರ್ಮಭೂಮಿ’ ಯನ್ನಾಗಿಸಿಕೊಂಡು ‘ಕೃಷಿತೋ ನಾಸ್ತಿ ದುರ್ಭಿಕ್ಷಂ’ ಮಂತ್ರವನ್ನು ಜಪಿಸುತ್ತಾ ಕಾಯಕಯೋಗಿಯಾಗಿ ದುಡಿದು ತಮ್ಮ ತಾಯಿ, ಮಡದಿ, ಮಕ್ಕಳೊಂದಿಗೆ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ.
    ದರ್ಶನ್ ಅವರು ಕೆಲವು ಕಡೆ ಹೊಸದಾಗಿ ಅಡಕೆ, ತೆಂಗು, ಶ್ರೀಗಂಧ, ಮಹಾಗನಿ ಸೇರಿದಂತೆ ವಿವಿಧ ಮರಗಿಡಗಳನ್ನು ಬೆಳೆಯುತ್ತಿದ್ದು, ಮುಂದೆ ಇವು ಫಲ ಕೊಡಲು ಶುರು ಮಾಡಿದರೆ ಇನ್ನೂ ಹೆಚ್ಚಿನ ಆದಾಯ ನಿರೀಕ್ಷೆ ಮಾಡಬಹುದಾಗಿದೆ.

    ಸ್ನಾತಕೋತ್ತರ ಪದವೀಧರನ ಕೃಷಿ ಪ್ರೀತಿ: ಹಳ್ಳಿಯಲ್ಲೇ ಲಕ್ಷಾಂತರ ರೂ ಸಂಪಾದಿಸುತ್ತಿರುವ ಯುವ ರೈತನ ಯಶೋಗಾಥೆ ಇಲ್ಲಿದೆ...!

    ಸಮಗ್ರ ಕೃಷಿಯಿಂದ ಉತ್ತಮ ಲಾಭವನ್ನು ಕಾಣುತ್ತಿದ್ದೇನೆ. ಜತೆಗೆ ಭೂಮಿತಾಯಿ ಸೇವೆ ಮಾಡಬೇಕು ಎಂಬ ಮಹಾದಾಸೆಯಿಂದ ಉನ್ನತ ಕೆಲಸವನ್ನು ಬಿಟ್ಟು ಕೃಷಿ ಮಾಡುತ್ತಿದ್ದೇನೆ. ರೈತ ವ್ಯವಸಾಯ ಮಾಡದೆ ಹೋದರೆ ಸಕಲ ಜೀವರಾಶಿಗಳು ಹಸಿವಿನಿಂದ ನರಳಬೇಕಾಗುತ್ತದೆ. ಕೃಷಿ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡದೆ ಹೋದರೆ ಮುಂದಿನ ದಿನಗಳಲ್ಲಿ ಆಹಾರ ಸಮಸ್ಯೆ ತಲೆದೋರುತ್ತದೆ.
    ಎಂ.ಐ.ದರ್ಶನ್, ಕೃಷಿಕ ಕೋಣಸಾಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts