More

  ಕೊಲ್ಲೂರು -ಹೆಮ್ಮಾಡಿ -ವಂಡ್ಸೆ ಚತುಷ್ಪಥಕ್ಕೆ ಗುದ್ದಲಿ ಪೂಜೆ

  ಹೆಮ್ಮಾಡಿ: ಹೊಳೆಯಲ್ಲಿ ಕುಸಿದ ಸೇತುವೆ ಮೇಲೆ ಜೀವ ಹಿಡಿದು ಸಂಚಾರ… ಸೇತುವೆ ಮುರಿದು ಊರಿಗೆ ದಿಗ್ಬಂಧನ ಆಗಿ ಮೂರು ವರ್ಷ… ಮೂರು ದಶಕದ ಹಿಂದೆ ಆದ ರಸ್ತೆ ಮಣ್ಣು ರಸ್ತೆ, ಸಂಪರ್ಕಕ್ಕಾಗಿ ಕಾಯುತ್ತಿರುವ ಪ್ರದೇಶ, ಇದ್ದ ರಸ್ತೆಯ ನಿರ್ವಹಣೆ ಇಲ್ಲ… ಮಳೆಗಾಲದಲ್ಲಿ ಕಾಲುಸಂಕದ ಮೇಲೆ ಸಂಚಾರ… ಇದು ಗ್ರಾಮೀಣ ಭಾಗದ ಸ್ಥಿತಿಯಾದರೆ, ಕೋಟಿ ಲೆಕ್ಕದಲ್ಲಿ ಸುಸಜ್ಜಿತ ರಸ್ತೆಗೆ ಉನ್ನತಿ ಭಾಗ್ಯ.
  ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಗ್ರಾಮೀಣ ಭಾಗದ ಸ್ಥೂಲ ಚಿತ್ರಣವಿದು. ಗ್ರಾಮೀಣ ಭಾಗದ ಜನ ಸಂಪರ್ಕ ವ್ಯವಸ್ಥೆಗೆ ಕಾಯುತ್ತಲೇ ಇದ್ದರೆ 18.5 ಕೋಟಿ ರೂ. ವೆಚ್ಚದಲ್ಲಿ ಹೆಮ್ಮಾಡಿಯಿಂದ ವಂಡ್ಸೆ ಸೇತುವೆ ತನಕ ಚತುಷ್ಪಥ ರಸ್ತೆಗೆ ಗುದ್ದಲಿಪೂಜೆ ನಡೆದಿದ್ದು ಕ್ಷೇತ್ರದ ಅಭಿವೃದ್ಧಿಯ ಅಸಮತೋಲನಕ್ಕೆ ಸಾಕ್ಷಿ ಹೇಳುತ್ತಿದೆ. ಯಡಮೊಗೆ ಗ್ರಾಮದ ಹೊಸಬಾಳು ಸೇತುವೆ ಕುಸಿದು ಮೂರು ವರ್ಷವಾದರೂ ಉದ್ದಾರವಾಗಿಲ್ಲ. ಗ್ರಾಮೀಣ ಭಾಗವಾದ ಯಡಮೊಗೆ ಗ್ರಾಮದ ರಸ್ತೆಗಳು ಸಂಚಾರಕ್ಕೆ ಯೋಗ್ಯವಾಗಿಲ್ಲ. 5 ಕೋಟಿ ರೂ. ವೆಚ್ಚದಲ್ಲಿ ವರಾಹ ಮಹಾರಾಜ ದೇವಸ್ಥಾನ ಬಳಿ ಸೇತುವೆ, ಐದು ಲಕ್ಷ ರೂ.ನಲ್ಲಿ ಸರ್ವಋತು ರಸ್ತೆ ನಿರ್ಮಾಣ ಮಾಡಿದ್ದರೂ ಹೆದ್ದಾರಿಗೆ ಸಂಪರ್ಕ ಕಲ್ಪಿಸಿಲ್ಲ. ಇಷ್ಟೆಲ್ಲದರ ಮಧ್ಯೆ ಕೊಲ್ಲೂರು ರಸ್ತೆ ಪ್ರಗತಿ ಕಾಣುತ್ತಿರುವುದು ಗ್ರಾಮೀಣ ಭಾಗವನ್ನು ಕಡೆಗಣಿಸುತ್ತಿರುವುದಕ್ಕೆ ಸಾಕ್ಷಿ.

  ಗ್ರಾಮೀಣ ರಸ್ತೆ ಪ್ರಗತಿ ಮಾಡಲೇನು ಸಮಸ್ಯೆ?: ರಾಜ್ಯ ಹೆದ್ದಾರಿ ಅಭಿವೃದ್ಧಿ ಅನುದಾನದಲ್ಲಿ ಕುಂದಾಪುರ ಕ್ಷೇತ್ರದ ಅತಿ ಗ್ರಾಮೀಣ ಭಾಗವಾದ ಮಡಾಮಕ್ಕಿ -ಅಮಾಸೆಬೈಲು -ವಿರಾಜಪೇಟೆ -ಬೈಂದೂರು ರಸ್ತೆ ಅಭಿವೃದ್ಧಿ ಆಗುತ್ತದೆ ಎಂದಾದರೆ, ಬೈಂದೂರು ಕ್ಷೇತ್ರದ ಗ್ರಾಮೀಣ ಭಾಗದ ರಸ್ತೆ ಅಭಿವೃದ್ಧಿ ಮಾಡುವುದಕ್ಕೆ ಏನು ಸಮಸ್ಯೆ? ಕೊಲ್ಲೂರು -ಹೆಮ್ಮಾಡಿ ಮಧ್ಯೆ ದ್ವಿಪಥ ಪೇವರ್ ಫಿನಿಶ್ ರಸ್ತೆಯಿದೆ. ಹೆಮ್ಮಾಡಿಯಿಂದ ಜಡ್ಕಲ್ ತನಕ ಚತುಷ್ಪಥವಾದರೆ, ಅಲ್ಲಿಂದ ರಾಣೆಬೆನ್ನೂರು ರಾಜ್ಯ ಹೆದ್ದಾರಿಗೆ ಸಂಪರ್ಕ ರಸ್ತೆ ಆಗಲಿದೆ ಎಂಬ ಮಾತು ಹಾಸ್ಯಾಸ್ಪದ. ಇರುವ ಅವಶ್ಯಕತೆ ಪೂರೈಸಿಕೊಂಡು ಕೊಲ್ಲೂರು -ಹೆಮ್ಮಾಡಿ ರಸ್ತೆ -ಅಭಿವೃದ್ಧಿ ಪಡಿಸಲಿ. ಬೈಂದೂರು ಕ್ಷೇತ್ರದಲ್ಲಿ ಇನ್ನೂ ಸಂಪರ್ಕ ವಂಚಿತ, ಸಂಚಾರಕ್ಕೂ ಯೋಗ್ಯವಾಗದ ರಸ್ತೆಗಳಿವೆ, ಮುರಿದ ಸೇತುವೆಗೆ ಊರಿನ ಸಂಪರ್ಕ ಕಳೆದುಕೊಂಡ ಊರುಗಳಿವೆ, ಅವೆಲ್ಲವನ್ನೂ ಬದಿಗಿಟ್ಟು ಸುಸಜ್ಜಿತ ರಸ್ತೆಗೇ ಮತ್ತೆ ಕೋಟ್ಯಂತರ ರೂ. ಅನುದಾನ ಖರ್ಚು ಮಾಡಬೇಕಿತ್ತೇ ಎಂಬುದು ಜನರ ಪ್ರಶ್ನೆ.

  11 ಮೀ. ವಿಸ್ತೀರ್ಣದಲ್ಲಿ ಹೆಮ್ಮಾಡಿ -ಕೊಲ್ಲೂರು ಚತುಷ್ಪಥ ರಸ್ತೆ ವಂಡ್ಸೆ ಸೇತುವೆ ತನಕ ಮಾಡಲಾಗುತ್ತಿದೆ. ಹೆಮ್ಮಾಡಿ -ಕೊಲ್ಲೂರು ಮಾರ್ಗದಲ್ಲಿ ಅತಿ ಹೆಚ್ಚು ವಾಹನ ಸಂಚಾರ ಇರುವುದನ್ನು ಗಮನದಲ್ಲಿಟ್ಟುಕೊಂಡು ರಸ್ತೆ ಅಭಿವೃದ್ಧಿ ಮಾಡಲಾಗುತ್ತಿದೆ. ಮುಂದೆ ವಂಡ್ಸೆ ಸೇತುವೆಯಿಂದ ಹಾಲ್ಕಲ್ ತನಕ ಚತುಷ್ಪಥ ಆಗಲಿದೆ. ಹಾಲ್ಕಲ್ ತನಕ ಚತುಷ್ಪಥವಾದರೆ ಅದು ರಾಣೆಬೆನ್ನೂರು ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಆಗಲಿದೆ. ಚತುಷ್ಪಥ ರಸ್ತೆ ಅಭಿವೃದ್ಧಿ ನಿಟ್ಟಿನಲ್ಲಿ ಯಾವುದೇ ಖಾಸಗೀ ಜಾಗ ಬಂದರೂ ಅದನ್ನು ವಶಕ್ಕೆ ಪಡೆಯಲು ಶತಸಿದ್ಧ.
  -ಬಿ.ಎಂ.ಸುಕುಮಾರ ಶೆಟ್ಟಿ, ಶಾಸಕ, ಬೈಂದೂರು

  ಅಪಾಯಕಾರಿ ತಿರುವು ಅಭಿವೃದ್ಧಿ ಯೋಜನೆಯಲ್ಲಿ ಮೂರು ತಿಂಗಳ ಹಿಂದೆ ಕೊಲ್ಲೂರು -ಹೆಮ್ಮಾಡಿ ರಸ್ತೆ 2.5 ಕೋಟಿ ರೂ. ವೆಚ್ಚದಲ್ಲಿ ವಿಸ್ತರಣೆ ಮಾಡಿದ್ದು, ರಾಜ್ಯ ಹೆದ್ದಾರಿ ಪ್ಯಾಕೇಜ್‌ನಲ್ಲಿ ಹೆಮ್ಮಾಡಿ -ಕೊಲ್ಲೂರು ರಸ್ತೆ 18 ಕೋಟಿ ರೂ. ವೆಚ್ಚದಲ್ಲಿ ಚತುಷ್ಪಥ ರಸ್ತೆಯಾಗಿ ಅಭಿವೃದ್ಧಿ ಮಾಡಲಾಗುತ್ತಿದೆ. ಸ್ಟೇಟ್ ಹೈವೇ ಅಭಿವೃದ್ಧಿಗೆ ಕುಂದಾಪುರ ಬೈಂದೂರು ಸೇರಿ 42 ಕೋಟಿ ರೂ. ಅನುದಾನದಲ್ಲಿ 18.5 ಕೋಟಿ ವೆಚ್ಚದಲ್ಲಿ ಕೊಲ್ಲೂರು -ಹೆಮ್ಮಾಡಿ ರಸ್ತೆ ಅಭಿವೃದ್ಧಿ ಜಡ್ಕಲ್ ತನಕ ಮಾಡಲಾಗುತ್ತದೆ. ಮುಂದೆ ಕೊಲ್ಲೂರು ತನಕ ರಸ್ತೆ ಅಭಿವೃದ್ಧಿ ಮಾಡುವ ಗುರಿ ಇದೆ. ಉಳಿದ ಅನುದಾನದಲ್ಲಿ ಕುಂದಾಪುರ ಕ್ಷೇತ್ರದ ಮಡಾಮಕ್ಕಿ ಅಮಾಸೆಬೈಲು, ವಿರಾಜಪೇಟೆ ಬೈಂದೂರು ರಸ್ತೆ ಅಭಿವೃದ್ಧಿ ಮಾಡಲಾಗುತ್ತದೆ.
  -ದುರ್ಗಾದಾಸ್, ಸಹಾಯಕ ಕಾರ್ಯಪಾಲಕ ಅಭಿಯಂತ ಲೋಕೋಪಯೋಗಿ ಇಲಾಖೆ

  ಶ್ರೀಪತಿ ಹೆಗಡೆ ಹಕ್ಲಾಡಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts