ಕೊಳ್ಳೇಗಾಲ: ಪಟ್ಟಣದ ನಾಯಕರ ದೊಡ್ಡಬೀದಿಗೆ ಹೊಂದಿಕೊಂಡಿರುವ ಹುರುಳಿಕೇರಿ ಬೀದಿಯ ಹೋಟೆಲ್ ರಾಮಾಚಾರಿ ಎಂಬುವರ ಮನೆಯ ಕೊಳಾಯಿಯಲ್ಲಿ ಬುಧವಾರ ಬೆಳಗ್ಗೆ ನೀರು ಸಂಗ್ರಹಿಸುವ ವೇಳೆ ಸಾವಿರಕಾಲು ರೂಪದ ಹುಳು ಪತ್ತೆಯಾಗಿದೆ. ಇದರಿಂದ ಇಲ್ಲಿನ ನಿವಾಸಿಗಳು ನೀರು ಬಳಕೆ ಮಾಡಲು ಆತಂಕ ಪಡುವಂತಾಗಿದೆ.
ಬೆಳಗ್ಗೆ 6ರಿಂದ 8ಗಂಟೆವರೆಗೆ ಈ ಬಡಾವಣೆಗಳಿಗೆ ಕಾವೇರಿ ನೀರು ಪೂರೈಸುವ ನಗರಸಭೆ ಆಡಳಿತ ನಂತರದ ಸಮಯದಲ್ಲಿ ನಾಯಕರ ಚಿಕ್ಕಬೀದಿಯಲ್ಲಿರುವ ವಿದ್ಯುತ್ ಚಾಲಿತ ಬೋರ್‌ವೆಲ್ ನೀರನ್ನು ಪೂರೈಸುತ್ತಿದೆ. ಈ ನಡುವೆ ನಿರ್ವಹಣೆ ಮತ್ತು ಸ್ವಚ್ಛತೆ ಕೊರತೆಯಿಂದ ಈ ರೀತಿ ಕಸ ಮತ್ತು ಸಣ್ಣ ಹುಳು ಮಿಶ್ರಿತ ನೀರು ಪೂರೈಕೆ ಆಗುತ್ತಿರಬಹುದೆಂದು ಸ್ಥಳೀಯ ನಿವಾಸಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ನೀರಿನಲ್ಲಿ ಹುಳು ಕಂಡುಬಂದಿರುವುದು ನಿಜಕ್ಕೂ ಆತಂಕ ಹುಟ್ಟಿಸಿದೆ. ನಲ್ಲಿಗಳಲ್ಲಿ ಆಗಾಗ ಕಸ ಮಿಶ್ರಣ ನೀರು ಬರುತ್ತಿದೆ. ಇದಕ್ಕೆ ಕಾರಣ ಏನು ಎಂಬುದನ್ನು ಸಂಬಂಧಿಸಿದ ಅಧಿಕಾರಿಗಳು ಪತ್ತೆ ಹಚ್ಚುವ ಮೂಲಕ ಜನರ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕೆಂದು ಸ್ಥಳೀಯ ನಿವಾಸಿ ಪದ್ಮಾವತಿ ಆಗ್ರಹಿಸಿದ್ದಾರೆ.
ಬೋರ್‌ವೆಲ್ ನೀರನ್ನು ನೇರವಾಗಿ ಪೈಪ್‌ಲೈನ್ ಮೂಲಕ ನಿವಾಸಿಗಳ ಮನೆಗಳ ನಲ್ಲಿಗಳಿಗೆ ಪೂರೈಸಲಾಗುತ್ತಿದೆ. ಕೆಲ ನಿವಾಸಿಗಳು ತಮ್ಮ ಮನೆಗಳ ಮುಂದೆ ಕುಡಿಯುವ ನೀರು ಸಂಗ್ರಹಿಸಲು ತೆಗೆದಿರುವ ಗುಂಡಿಗಳಲ್ಲಿರುವ ನಲ್ಲಿಯನ್ನು ಸಮರ್ಪಕವಾಗಿ ಮುಚ್ಚದೆ ತೆರೆದಿರುತ್ತಾರೆ. ವಿದ್ಯುತ್ ಕಡಿತಗೊಂಡು ಬೋರ್‌ವೆಲ್ ನೀರು ಸ್ಥಗಿತವಾದಾಗ ಗುಂಡಿಯಲ್ಲಿರುವ ಅನುಪಯುಕ್ತ ನೀರು ಪೈಪ್‌ಲೈನ್‌ಗೆ ವಾಪಸ್ ಸೇರುತ್ತದೆೆ. ಮತ್ತೆ ಬೋರ್‌ವೆಲ್ ರನ್ ಆದಾಗ ಇಂತಹ ಸಮಸ್ಯೆಗಳು ಕಂಡು ಬರುತ್ತದೆ. ಈ ಕೂಡಲೇ ಬಡಾವಣೆಗೆ ತೆರಳಿ ಈ ಸಮಸ್ಯೆಗೆ ನಿಖರ ಕಾರಣವೇನು ಎಂಬುದನ್ನು ತಿಳಿದು ಸರಿಪಡಿಸಲಾಗುವುದು.
ಸಿದ್ದಪ್ಪ, ಜೆಇ, ಕುಡಿಯುವ ನೀರಿನ ವಿಭಾಗ, ನಗರಸಭೆ.