More

    ರೈತ ಸಂಘದಿಂದ ಪ್ರತಿಭಟನೆ

    ಕೊಳ್ಳೇಗಾಲ: ಮೇವು ಹಾಗೂ ಕುಡಿಯುವ ನೀರು, ತೋಟದ ಮನೆಗಳಿಗೆ ವಿದ್ಯುತ್ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಪದಾಧಿಕಾರಿಗಳು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

    ಪಟ್ಟಣದ ಕೃಷಿ ಮಾರುಕಟ್ಟೆಯಲ್ಲಿ ಸಮಾವೇಶಗೊಂಡ 50ಕ್ಕೂ ಹೆಚ್ಚು ರೈತರು ಪ್ರತಿಭಟನಾ ಮೆರವಣಿಗೆ ನಡೆಸಿ ಕೇಂದ್ರ, ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ವಿರುದ್ಧ ಧಿಕ್ಕಾರ ಕೂಗುತ್ತ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿ ತಾಲೂಕು ಕಚೇರಿ ತಲುಪಿದರು. ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ ಮಾತನಾಡಿ, ಬರ ಪರಿಹಾರ ಹಣವನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ತಡೆ ಹಿಡಿದಿದೆ. ಚುನಾವಣಾ ಆಯೋಗ ಈ ಕೂಡಲೇ ಬರ ಪರಿಹಾರ ಹಣವನ್ನು ಬಿಡುಗಡೆ ಮಾಡಿಸಬೇಕು. ತಾಲೂಕು ಆಡಳಿತ ಕಾಟಾಚಾರಕ್ಕೆ ಬೆರಳೆಣಿಕೆ ಗ್ರಾಮಕ್ಕೆ ಮೇವು ಒದಗಿಸಿದೆ. ಚುನಾವಣೆ ನೆಪವೊಡ್ಡಿ ರೈತರಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರು ಇನ್ನಿತರ ಕಡೆ ಚುನಾವಣಾ ಪ್ರಚಾರಕ್ಕೆ ಬಂದು ಸ್ಥಳೀಯ ರಾಜಕಾರಣಿಗಳಿಂದ ಕ್ಷೇತ್ರದಲ್ಲಿ ಏನು ಸಮಸ್ಯೆ ಆಗಿದೆ ಎಂದು ಕೇಳಲಿಲ್ಲ. 10 ವರ್ಷಗಳ ಹಿಂದೆ ಕೊಟ್ಟ ಭರವಸೆ ಹಾಗೇ ಉಳಿದಿದೆ. ಬರದಿಂದ ಮೇವು, ನೀರು ಕೊರತೆ ಇದೆ. ಈಗಿದ್ದರೂ ಜನರ ಬಳಿ ಮತ ಕೇಳಲು ಬಂದಿದ್ದಾರೆ. ರೈತರೆಲ್ಲರೂ ಆಳುವ ಸರ್ಕಾರಕ್ಕೆ ನಾವು ಪಾಠ ಕಲಿಸುತ್ತೇವೆ. ರೈತರ ಸಮಸ್ಯೆಗೆ ಸ್ಪಂದಿಸದ ರಾಜಕಾರಣಿಗಳು ಶಾಶ್ವತವಾಗಿ ಮನೆಯಲ್ಲಿಯೇ ಇರಬೇಕಾಗುತ್ತದೆ ಎಂದು ಎಚ್ಚರಿಸಿದರು.

    ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಶೈಲೇಂದ್ರ ಶ್ರೀಕಂಠಸ್ವಾಮಿ ಮಾತನಾಡಿ, ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಮಳೆ ಬೀಳದೆ ರೈತರು ಕಂಗಾಲಾಗಿರುವುದು ಗೊತ್ತು, ಅಂತರ್ಜಲ ಕುಸಿದು ನೀರಿನ ಸಮಸ್ಯೆ ತಲೆದೋರಿರುವುದು ಗೊತ್ತು ಹಾಗೂ ಜಾನುವಾರುಗಳ ಮೇವಿಗೆ ಕೊರತೆ ಆಗಿರುವುದು ಗೊತ್ತಿದೆ. ಆಗಿದ್ದರೂ ಮೇವು, ನೀರಿನ ಕೊರತೆ ನಿವಾರಣೆ ಮಾಡುವುದರಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದರು.
    ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಎಂ.ಮಂಜುಳಾ ಹಾಗೂ ತಾಪಂ ಇಒ ಶ್ರೀನಿವಾಸ್ ರೈತರ ಸಮಸ್ಯೆಯನ್ನು ಆಲಿಸಿದರು.

    ಟಿಸಿ ಅಳವಡಿಕೆಗೆ ಅವಕಾಶ ನೀಡುತ್ತಿಲ್ಲ:
    ಜಾಗೇರಿಯ ಆಲದ ಮರದೊಡ್ಡಿಯಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. 2 ವರ್ಷದ ಹಿಂದೆ ಸರ್ಕಾರವೇ ಬೋರ್‌ವೆಲ್ ಕೊರೆಸಿದೆ. ಆದರೂ ನೀರು ಸೌಲಭ್ಯ ಪಡೆದುಕೊಳ್ಳಲು ವಿದ್ಯುತ್ ಸಂಪರ್ಕ ಕೊಟ್ಟಿಲ್ಲ. ಟಿಸಿ ಅಳವಡಿಸಿಕೊಳ್ಳಲು ಅರಣ್ಯ ಇಲಾಖೆ ಬಿಡುತ್ತಿಲ್ಲ ಎಂದು ರೈತರು ಆಕ್ರೋಶ ಹೊರಹಾಕಿದರು.
    ತಹಸೀಲ್ದಾರ್ ಮಂಜುಳಾ ಪ್ರತಿಕ್ರಿಯಿಸಿ, ಆಲದ ಮರದೊಡ್ಡಿಗೆ ಸೆಸ್ಕ್ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಸರ್ವೇ ನಡೆಸಿ ಟಿಸಿ ಅಳವಡಿಕೆಗೆ ಅವಕಾಶ ನೀಡಬೇಕು. ಕುಡಿಯುವ ನೀರಿನ ವಿಚಾರದಲ್ಲಿ ಯಾವುದೇ ನಿರ್ಬಂಧ ಹೇರಬಾರದು ಎಂದು ಸ್ಥಳದಲ್ಲಿದ್ದ ಅರಣ್ಯಾಧಿಕಾರಿ ನಂದೀಶ್ ಅವರಿಗೆ ಸೂಚನೆ ನೀಡಿದರು.

    ತೋಟದ ಮನೆಗಳಿಗೆ ಕರೆಂಟ್ ಇಲ್ಲ:
    ತಾಲೂಕಿನ ಹಲವೆಡೆ ತೋಟದ ಮನೆಗಳಿಗೆ ವಿದ್ಯುತ್ ನೀಡುತ್ತಿಲ್ಲ. ಶಾಂತಿನಗರ ಹಾಗೂ ಜಕ್ಕಳಿ ಭಾಗದಲ್ಲಿ ಮೇವಿನ ಕೊರತೆ ಇದೆ ಎಂದರು. ಸ್ಥಳದಲ್ಲಿದ್ದ ಸೆಸ್ಕ್ ಅಧಿಕಾರಿ ಮಾತನಾಡಿ, ಮನೆ ಬಳಕೆಗೆ ಕೊಡುವ ವಿದ್ಯುತ್ ಅನ್ನು ಪಂಪ್‌ಸೆಟ್‌ಗೆ ಬಳಸುತ್ತಿದ್ದಾರೆ. ಇದರಿಂದ ಸಮಸ್ಯೆ ಆಗಿದೆ ಎಂದರು. ಇದಕ್ಕೆ ರೈತರು ಪ್ರತಿಕ್ರಿಯಿಸಿ, ಅಂತಹ ರೈತರಿಗೆ ನೋಟಿಸ್ ಕೊಡಿ, ಬೋರ್‌ವೆಲ್‌ನಲ್ಲಿ ನೀರಿಲ್ಲ ಪಂಪ್‌ಸೆಟ್ ಹೇಗೆ ಬಳಸುತ್ತಿದ್ದೇವೆ ಎಂದು ಸಮಜಾಯಿಷಿ ನೀಡಿದರು.


    ತಹಸೀಲ್ದಾರ್ ಮಂಜುಳಾ ವಿದ್ಯುತ್ ಸಮಸ್ಯೆ ಆಗದಂತೆ ಕ್ರಮವಹಿಸಿ, ಮನೆ ಬಳಕೆಗೆ ನೀಡಿದ ಕರೆಂಟ್ ಪಂಪ್‌ಸೆಟ್‌ಗೆ ಬಳಸಿದವರ ಮೇಲೆ ಕ್ರಮವಹಿಸಿ, ಹಾಗೆಯೇ ಜಕ್ಕಳಿ ಹಾಗೂ ಜಾಗೇರಿ ಭಾಗದಲ್ಲಿ ಇರುವ ಮೇವಿನ ಕೊರತೆಯನ್ನು ಖುದ್ದು ನಾನೇ ಪರಿಶೀಲಿಸಿ ನಿವಾರಣೆ ಮಾಡುತ್ತೇನೆಂದು ಭರವಸೆ ನೀಡಿದರು. ನಂತರ ರೈತರು ಪ್ರತಿಭಟನೆ ಕೈಬಿಟ್ಟರು. ರೈತ ಸಂಘದ ತಾಲೂಕು ಅಧ್ಯಕ್ಷ ಶಿವಮಲ್ಲು, ಕಾರ್ಯದರ್ಶಿ ಪೆರಿಯಾ ನಾಯಗಮ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾಸ್ಕರ್, ಮೋಳೆ ಶಿವರಾಮ್, ಮಹದೇವ, ಚಾರ್ಲಿ, ವಸಂತಕುಮಾರ್ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts