More

    ಪ್ರಥಮ ಅಧ್ಯಕ್ಷ ಸ್ಥಾನಕ್ಕೆ ಹಣಾಹಣಿ

    ಕೊಲ್ಹಾರ: ನೂತನ ತಾಲೂಕು ಕೇಂದ್ರ ಕೊಲ್ಹಾರ ತಾಲೂಕು ಪಂಚಾಯಿತಿ ರಚನೆಯಾಗಿರುವುದರಿಂದ ಸರ್ಕಾರ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಿದ್ದು ಪ್ರಥಮ ಅಧ್ಯಕ್ಷ ಸ್ಥಾನಕ್ಕೆ ಜು.22 ರಂದು ಚುನಾವಣೆ ನಡೆಯಲಿದೆ.
    ಈ ಮೊದಲು ಬಸವನಬಾಗೇವಾಡಿ ತಾಲೂಕು ಪಂಚಾಯಿತಿ ಅಧೀನದಲ್ಲಿದ್ದ ಕೊಲ್ಹಾರ ಭಾಗದ 7 ಸ್ಥಾನಗಳನ್ನು ಬೇರ್ಪಡಿಸಿ ಕೊಲ್ಹಾರ ತಾಲೂಕು ಪಂಚಾಯಿತಿ ರಚಿಸಲಾಗಿದೆ. ಅದರಂತೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಅನುಸೂಚಿತ ಜಾತಿಗೆ ಸರ್ಕಾರ ಮೀಸಲಾತಿ ನಿಗದಿ ಮಾಡಿ ಆದೇಶ ಹೊರಡಿಸಿದೆ.
    ಅಧ್ಯಕ್ಷ ಸ್ಥಾನಕ್ಕೆ ಮುಳವಾಡ ಮತಕ್ಷೇತ್ರದ ಬಿಜೆಪಿ ಸದಸ್ಯೆ ಮಂಜುಳಾ ನಾಗನೂರ ಹಾಗೂ ಮಲಘಾಣ ಮತಕ್ಷೇತ್ರದ ಸದಸ್ಯೆ ಲಕ್ಷ್ಮೀಬಾಯಿ ಕಸನಕ್ಕಿ ಹಾಗೂ ಬಳೂತಿ ಮತಕ್ಷೇತ್ರದ ಕಾಂಗ್ರೆಸ್ ಸದಸ್ಯೆ ಶಕುಂತಲಾ ಬಿರಾದಾರ ನಡುವೆ ಪೈಪೋಟಿ ಏರ್ಪಟ್ಟಿದೆ. ಅನುಸೂಚಿತ ಜಾತಿಗೆ ಮೀಸಲಿರುವ ಉಪಾಧ್ಯಕ್ಷ ಸ್ಥಾನಕ್ಕೆ ಕೂಡಗಿ ಮತಕ್ಷೇತ್ರದ ಕಾಂಗ್ರೆಸ್ ಸದಸ್ಯ ಈಶ್ವರ ಜಾಧವ ಏಕೈಕ ಸ್ಪರ್ಧಿಯಾಗಿದ್ದು ಅವರ ಆಯ್ಕೆ ಬಹುತೇಕ ಖಚಿತವಾಗಿದೆ.
    ಕೊಲ್ಹಾರ ತಾಲೂಕು ಪಂಚಾಯಿತಿಯಲ್ಲಿ ಬಿಜೆಪಿಯ 4 ಅಭ್ಯರ್ಥಿಗಳು, ಕಾಂಗ್ರೆಸ್‌ನ 3 ಅಭ್ಯರ್ಥಿಗಳು ಚುನಾಯಿತರಾಗಿದ್ದು ಅಧ್ಯಕ್ಷ ಸ್ಥಾನ ಸಹಜವಾಗಿ ಬಿಜೆಪಿ ಪಾಲಾದರೆ, ಉಪಾಧ್ಯಕ್ಷ ಸ್ಥಾನಕ್ಕೆ ಅನುಸೂಚಿತ ಜಾತಿಯ ಸದಸ್ಯರು ಬಿಜೆಪಿಯಲ್ಲಿಲ್ಲದ ಕಾರಣ ಕಾಂಗ್ರೆಸ್ ಪಕ್ಷದ ಪಾಲಾಗುವ ಸಾಧ್ಯತೆ ಕಂಡುಬಂದಿದೆ. ಆದರೆ ಶಾಸಕ ಶಿವಾನಂದ ಪಾಟೀಲರ ಕೈಚಳಕ ಮೇಲಾದರೆ ಎರಡೂ ಸ್ಥಾನಗಳನ್ನು ಕಾಂಗ್ರೆಸ್ ತೆಕ್ಕೆಗೆ ಪಡೆದುಕೊಳ್ಳಬಹುದು. ಇಲ್ಲವಾದರೆ ಅಧ್ಯಕ್ಷ ಸ್ಥಾನವನ್ನು ಬಿಜೆಪಿಗೆ, ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್‌ಗೆ ಪಡೆದು ಬಿಜೆಪಿ-ಕಾಂಗ್ರೆಸ್ ಸಮ್ಮಿಶ್ರ ಅಧಿಕಾರ ಅನುಭವಿಸಬಹುದು. ಒಂದು ವೇಳೆ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಅವರು ಚಾಣಾಕ್ಷ ರಾಜಕಾರಣ ತೋರಿಸಿದರೆ ಅನುಸೂಚಿತ ಜಾತಿಯ ಅಭ್ಯರ್ಥಿ ಬಿಜೆಪಿ ಪಕ್ಷವನ್ನು ಬೆಂಬಲಿಸಿ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ.
    ಮಾಜಿ ಸಚಿವರಾದ ಎಸ್.ಕೆ. ಬೆಳ್ಳುಬ್ಬಿ ಹಾಗೂ ಶಿವಾನಂದ ಪಾಟೀಲರ ರಾಜಕೀಯ ಚದುರಂಗದಾಟದಲ್ಲಿ ಕೊಲ್ಹಾರ ತಾಲೂಕು ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರು ಯಾರಾಗಬಹುದು ಎನ್ನುವುದನ್ನು ಊಹಿಸಲೂ ಅಸಾಧ್ಯವಾದ ಮಾತಾಗಿದೆ.

    ಕೊಲ್ಹಾರ ತಾಪಂ ಅಧ್ಯಕ್ಷ ಸ್ಥಾನದ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯನ್ನಾಗಿ ಮಲಘಾಣ ಕ್ಷೇತ್ರದ ಸದಸ್ಯೆ ಲಕ್ಷ್ಮೀಬಾಯಿ ಸುರೇಶ ಕಸನಕ್ಕಿ ಅವರನ್ನು ಆಯ್ಕೆ ಮಾಡಲು ನಿರ್ಧರಿಲಾಗಿದೆ. ಇನ್ನುಳಿದ 3 ಸದಸ್ಯರ ಜತೆ ಚರ್ಚಿಸಿ ಲಿಖಿತವಾಗಿ ಒಪ್ಪಿಗೆ ಪಡೆದುಕೊಳ್ಳಲಾಗಿದೆ. ಇದಕ್ಕೆ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಅವರ ಒಪ್ಪಿಗೆಯೂ ಇದೆ.
    ಶಂಕರಗೌಡ ಪಾಟೀಲ, ಬಸವನಬಾಗೇವಾಡಿ ಬಿಜೆಪಿ ಮಂಡಲ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts