More

    ಆತಂಕದ ಪರಿಸ್ಥಿತಿ ನಿವಾರಣೆಗೆ ಜನರ ಮಧ್ಯೆ ಸಾಹಿತ್ಯ ಚರ್ಚೆಯಾಗಲಿ

    ಕೋಲಾರ: ದೇಶದಲ್ಲಿ ನಿರ್ಮಾಣವಾಗಿರುವ ಆತಂಕದ ಪರಿಸ್ಥಿತಿ ನಿವಾರಣೆಗೆ ಸಾಹಿತ್ಯ ಜನರ ಮಧ್ಯೆ ಚರ್ಚೆಯಾಗಬೇಕು ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಪ್ರತಿಪಾದಿಸಿದರು.

    ನಗರದ ಟಿ.ಚನ್ನಯ್ಯ ರಂಗಮಂದಿರಲ್ಲಿ ಭಾನುವಾರ ರಾಜ್ಯ ಅಂಚೆ ನೌಕರರ ಸಾಹಿತ್ಯ ಬಳಗ ಆಯೋಜಿಸಿದ್ದ ಅಂಚೆ ನೌಕರರ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿ, ಅಧಿಕಾರದಲ್ಲಿರುವವರಿಗೆ ರಾಜಕಾರಣ ಎಷ್ಟು ಮುಖ್ಯವೋ, ಸಮಸ್ಯೆ ವಿರುದ್ಧ ಹೋರಾಟ ನಡೆಸುವುದೂ ಅಷ್ಟೇ ಮುಖ್ಯ. ಸರ್ಕಾರ ನಡೆಸುವ ಜವಾಬ್ದಾರಿ ಹೊತ್ತವರು ತೆಗೆದುಕೊಳ್ಳುವ ಕೆಲ ತೀರ್ಮಾನಗಳಿಂದಾಗಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಉದ್ವೇಗದಿಂದ ಮಾತನಾಡಿದರೆ ಸಮಸ್ಯೆ ತೀವ್ರಗೊಳ್ಳುತ್ತದೆ. ಇದರ ನಿವಾರಣೆಗೆ ಸಾಧಕ-ಬಾಧಕಗಳ ಬಗ್ಗೆ ಚರ್ಚೆಯಾಗಬೇಕು ಎಂದರು.

    ಕಲೆ, ಸಾಹಿತ್ಯ ಸಮಸ್ಯೆಗಳ ವಿರುದ್ಧ ಸಮ್ಮೇಳನಗಳು ಧ್ವನಿ ಎತ್ತುವಂತಾಗಬೇಕು. ಸಾಹಿತ್ಯದಲ್ಲೂ ರಾಜಕಾರಣ, ವ್ಯವಸಾಯ, ಕೈಗಾರಿಕೆಗಳ ಬಗ್ಗೆ ಚರ್ಚೆಯಾಗಬೇಕು. ದೇಶದಲ್ಲಿ ಸಾಮರಸ್ಯ ಕದಡುವ ಕೆಲಸವನ್ನು ಸಂಘಟಿತ ಹೋರಾಟದ ಮೂಲಕ ಹಿಮ್ಮೆಟ್ಟಿಸಬೇಕು ಎಂದರು.
    ಕಸಾಪ ಜಿಲ್ಲಾಧ್ಯಕ್ಷ ನಾಗಾನಂದ ಕೆಂಪರಾಜ್ ಮಾತನಾಡಿ, ಪರಿಷತ್‌ನಿಂದ ಜ.16, 17ರಂದು ಹಮ್ಮಿಕೊಂಡಿರುವ ಜಿಲ್ಲಾಮಟ್ಟದ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿಗಳು, ಅಂಚೆ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದರು.

    ಜಿಲ್ಲಾ ಪಿಯು ಉಪನ್ಯಾಸಕರ ವೇದಿಕೆ ಅಧ್ಯಕ್ಷ ಜೆ.ಜಿ.ನಾಗರಾಜ್ ಮಾತನಾಡಿ, 12ನೇ ಶತಮಾನದ ವಚನಕಾರರ ವಚನಗಳು ಸಮ ಸಮಾಜ ನಿರ್ಮಾಣದ ಜತೆಗೆ, ಎಚ್ಚರಿಸುವ ಕೆಲಸ ಮಾಡುತ್ತಿವೆ. ಜತೆಗೆ ರೈತ, ಪ್ರಕೃತಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ವಚನದಲ್ಲಿ ಆಗಿದೆ. ಮಹಿಳಾ ದೌರ್ಜನ್ಯ ವಿರುದ್ಧ ಧ್ವನಿ ಎತ್ತುವ ವಚನಗಳಲ್ಲೂ ಕಾಣಬಹುದು ಎಂದರು.

    ಭಾರತೀಯ ಅಂಚೆ ಸೇವೆಯ ಬೆಂಗಳೂರು ವಿಭಾಗದ ಅಧಿಕಾರಿ ಸಂದೇಶ್ ಮಹದೇವಪ್ಪ ಸಮ್ಮೇಳನಾಧ್ಯಕ್ಷ ಪೀಠದಿಂದ ಮಾತನಾಡಿ, ಸಮಾಜವಾದಿ ಚಿಂತನೆಗಳನ್ನು ಉಣಬಡಿಸುವುದು, ಅವುಗಳ ಕುರಿತು ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ ಎಂದರು.

    ಚಿತ್ರನಟರಾದ ಮದನ್ ಪಟೇಲ್, ಡಾ.ಮಾ.ನ.ಗುರುದತ್, ಸುಮಂಗಲಿ ಸೇವಾ ಆಶ್ರಮದ ಅಧ್ಯಕ್ಷೆ ಎಸ್.ಜಿ.ಸುಶೀಲಮ್ಮ, ವಚನ ಸಾಹಿತ್ಯ ಪರಿಷತ್ ಬೆಂಗಳೂರು ಘಟಕದ ಅಧ್ಯಕ್ಷ ಪಿ.ತ್ಯಾಗರಾಜ್, ಅಂಚೆ ಅಧೀಕ್ಷಕಿ ಭಾಗ್ಯಮ್ಮ, ಅಂಚೆ ಅಧಿಕಾರಿಗಳಾದ ಟಿ.ಆರ್. ಶಂಕರ್, ಶಾಂತಲಾ ಭಟ್, ನಿವೃತ್ತ ಅಧಿಕಾರಿ ಚಂದ್ರಮ್ಮ ಲಿಂಗರಾಜು ಹಾಜರಿದ್ದರು.

    ಸನ್ಮಾನ: ನಿವೃತ್ತ ಸಹ ಶಿಕ್ಷಕ ಟಿ.ಸುಬ್ಬರಾಮಯ್ಯ, ಶಿಕ್ಷಕ ಡಿ.ಶಿವಕುಮಾರ್, ನಿವೃತ್ತ ಶಿಕ್ಷಕ ಕೆ.ಎನ್. ಪರಮೇಶ್ವರ್, ಪ್ರಾಧ್ಯಾಪಕ ಡಾ.ಎಂ.ಮುನಿರಾಜು, ಶಿಕ್ಷಕ ಎಸ್.ರಾಜೇಶ್, ತಬಲ ವಾದಕ ಆರ್.ಕಿಶೋರ್ ಕುಮಾರ್ ಮತ್ತು ಕೆಎಸ್‌ಆರ್‌ಟಿಸಿ ಅಧಿಕಾರಿ ಸಿ.ಎಂ.ಹನುಮಪ್ಪ ಅವರಿಗೆ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

    12ನೇ ಶತಮಾನದಲ್ಲಿನ ವಚನಕಾರರು ಆಗಿನ ಕಾಲಘಟ್ಟದಲ್ಲಿದ್ದ ಶ್ರೇಣಿಕೃತ ಸಮಾಜವನ್ನು ಧಿಕ್ಕರಿಸಿದ್ದರು. ಇಂದು ಅದೇ ವಚನಗಳಿಗೆ ಬಣ್ಣ ಕಟ್ಟುವ, ವಚನದ ಸಾಲುಗಳ ಮಧ್ಯೆ ಇನ್ನೇನೋ ಸೇರಿಸುವ ಕೆಲಸ ನಡೆಯುತ್ತಿದೆ. ವರ್ತಮಾನಕ್ಕೆ ಅನುಗುಣವಾಗಿ ಸಾಹಿತ್ಯ ರಚಿಸುವ, ಕನ್ನಡದ ಅಭಿಮಾನ ಎತ್ತಿ ಹಿಡಿಯುವ, ಭಾವೈಕ್ಯತೆ ಮತ್ತು ಸಾಮರಸ್ಯ ಉಳಿಸುವ ಮತ್ತು ಬೆಳೆಸುವ ನಿಟ್ಟಿನಲ್ಲಿ ಆಧುನಿಕ ವಚನಕಾರರು ವಚನ ರಚಿಸಬೇಕು ಎಂದು ಸಂದೇಶ್ ಮಹದೇವಪ್ಪ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts