More

    ಹರಾಜು ವಿಚಾರದಲ್ಲಿ ರಂಪಾಟ ; ಗೊಂದಲದ ಗೂಡಾದ ಕೋಲಾರ ನಗರಸಭೆ ಸಾಮಾನ್ಯ ಸಭೆ

    ಕೋಲಾರ : ನಗರಸಭೆಯಲ್ಲಿ ಒಂದೂವರೆ ವರ್ಷದ ಹಿಂದೆ ನಡೆದಿರುವ ವಾಣಿಜ್ಯ ಮಳಿಗೆಗಳ ಹರಾಜು ವಿಚಾರದಲ್ಲಿ ಸದಸ್ಯರ ನಡುವೆ ಕಾವೇರಿದ ಚರ್ಚೆ, ರಂಪಾಟ, ಪರಸ್ಪರ ಮಾತಿನ ಚಕಮಕಿಗೆ ಕಾರಣವಾಯಿತು.

    ನಗರಸಭೆ ಅಧ್ಯಕ್ಷೆ ಆರ್. ಶ್ವೇತಾ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಸಭೆ ಅಪೂರ್ಣಗೊಂಡ ಹಿನ್ನೆಲೆಯಲ್ಲಿ ಬುಧವಾರ ಮುಂದುವರಿದ ಸಭೆಯಲ್ಲಿ ಅಂಗಡಿ ಮಳಿಗೆಗಳ ಹರಾಜು ವಿಚಾರ ಪ್ರಸ್ತಾಪಕ್ಕೆ ಬಂತು. ವಾಣಿಜ್ಯ ಮಳಿಗೆಗಳಲ್ಲಿನ 226 ಅಂಗಡಿಗಳನ್ನು ಒಂದೂವರೆ ವರ್ಷಗಳ ಹಿಂದೆ ಹರಾಜು ಹಾಕಲಾಗಿದೆ. ಹೈಕೋರ್ಟ್ ಆದೇಶದಂತೆ ಕಾನೂನು ಸಲಹೆ ಪಡೆದು ಹರಾಜಿನಲ್ಲಿ ಠೇವಣಿ ಪಾವತಿಸಿರುವವರಿಗೆ ಮಳಿಗೆ ನೀಡಲು ಕ್ರಮ ವಹಿಸುವಂತೆ ಅಂಬರೀಷ್ ಒತ್ತಾಯಿಸಿದರು.

    ಮಧ್ಯೆ ಪ್ರವೇಶಿಸಿದ ಬಿ.ಎಂ. ಮುಬಾರಕ್ ಎಂ.ಜಿ. ರಸ್ತೆ ಅಗಲೀಕರಣಕ್ಕೆ ನೋಟಿಫಿಕೇಷನ್ ಮಾಡಿರುವುದರಿಂದ ಆ ಭಾಗ ಹೊರತು ಪಡಿಸಿ ಉಳಿದವುಗಳನ್ನು ಕೊಡಬಹುದೆಂದರು. ಅಂಬರೀಷ್ ಆಕ್ಷೇಪಿಸಿದಾಗ ತೀವ್ರ ವಾಗ್ವಾದ ನಡೆದು ಗೊಂದಲದ ಗೂಡಾಗಿದ್ದರಿಂದ ಕೆಲಕಾಲ ಸಭೆ ಮುಂದೂಡಲಾಯಿತು.

    ಸಭೆ ಮತ್ತೆ ಆರಂಭವದ ನಂತರ ಹರಾಜಿನಲ್ಲಿ ಭಾರೀ ಗೋಲ್‌ಮಾಲ್ ನಡೆದಿದೆ ಎಂದು ಮುರಳಿಗೌಡ ಆರೋಪಿಸಿದರು. ಹರಾಜು ವಿಚಾರದಲ್ಲಿ ಈಗಾಗಲೆ ತೀರ್ಮಾನ ನೀಡಿದ್ದೇನೆ, ಅಂಜೆಂಡಾದ ಮುಂದಿನ ವಿಷಯಕ್ಕೆ ಬನ್ನಿ ಎಂದು ಅಧ್ಯಕ್ಷೆ ಶ್ವೇತಾ ಹೇಳಿದರಾದರೂ ಅಕ್ರಮದ ಬಗ್ಗೆ ದಾಖಲೆಗಳಿವೆ ಎಂದು ವಾದಿಸಿದ್ದರಿಂದ ಅಪ್ಸರ್, ಅಸ್ಲಂ ಪಾಷಾ, ಹಿದಾಯಿತುಲ್ಲಾ ವಿರೋಧ ವ್ಯಕ್ತಪಡಿಸಿದ್ದು ವಾಗ್ವಾದಕ್ಕೆ ಕಾರಣವಾಯಿತು. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದಾಗ ಊಟದ ಸಮಯವಾಯಿತೆಂದು ಸಭೆ ಮುಂದೂಡಲಾಯಿತು.

    ತೀರ್ಮಾನಗಳು: ಆಸ್ತಿ ತೆರಿಗೆ ವಸೂಲಾತಿ ಉತ್ನತೀಕರಿಸಲು ಬೆಂಗಳೂರಿನ ಸೆಮಿನಲ್ ಸಾಫ್ಟ್‌ವೇರ್ ಪ್ರೈವೈಟ್ ಲಿ. ಅವರಿಂದ ಆಸ್ತಿಗಳ ಸರ್ವೇ ಮಾಡಿಸಿ ಗಣಕೀಕರಣ ಮಾಡಿಸುವುದು, ಅಭಿವೃದ್ಧಿ ಶುಲ್ಕ ಪಾವತಿಸಿಕೊಂಡು ಹೊಸದಾಗಿ ಏಕ ನಿವೇಶನಗಳಿಗೆ ಖಾತೆ ತೆರೆಯುವುದು, ವಾಣಿಜ್ಯ ಉದ್ಯಮಿಗಳಿಗೆ ಪರವಾನಗಿ ಶುಲ್ಕ ಹೆಚ್ಚಳ, 1ನೇ ವಾರ್ಡ್‌ನಲ್ಲಿ ಸಂಪು, ಹೈಮಾಸ್ಟ್ ವಿದ್ಯುತ್ ದೀಪ ಅಳವಡಿಕೆ, ರಸ್ತೆ ಡಾಂಬರೀಕರಣ ಮಾಡಲು ಹಾಗೂ ಅನುದಾನ ಲಭ್ಯತೆ ಆಧಾರದ ಮೇಲೆ ಅಭಿವೃದ್ಧಿ ಕಾರ್ಯ ಮಾಡಲು ಸಭೆ ಅನುಮೋದನೆ ನೀಡಿತು. ಉಪಾಧ್ಯಕ್ಷ ಪ್ರವೀಣ್ ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಮಂಜುನಾಥ್, ಆಯುಕ್ತ ಎಸ್.ಪ್ರಸಾದ್, ಕಂದಾಯ ಅಧಿಕಾರಿ ಚಂದ್ರು, ನಿರೀಕ್ಷಕ ತ್ಯಾಗರಾಜ್, ಕಿರಿಯ ಅಭಿಯಂತರರಾದ ಪೂರ್ಣಿಮಾ ಮತ್ತಿತರರಿದ್ದರು.

    ಎಮ್ಮೆಲ್ಸಿ ಸ್ಥಾನಕ್ಕೆ ಗೌರವ ಕೊಡಿ:ಎಂಎಲ್‌ಸಿ ಇಂಚರ ಗೋವಿಂದರಾಜು ನಗರಸಭೆಗೆ ಅನಿರೀಕ್ಷಿತವಾಗಿ ಆಗಮಿಸಿದ್ದನ್ನು ಕಂಡು ಸದಸ್ಯ ಅಪ್ಸರ್ ನೀವು ಇಲ್ಲಿ ರಾಜಕೀಯ ಮಾಡಲು ಬಂದಿದ್ದೀರಿ, ಅದನ್ನು ಮಾಡಬೇಡಿ, ಸೋಮವಾರದ ಸಭೆಗೆ ಶಾಸಕ ಶ್ರೀನಿವಾಸಗೌಡ ಬಂದಿದ್ದರು, ನೀವು ಯಾಕೆ ಬಂದಿರಲಿಲ್ಲ ಎಂದು ಪ್ರಶ್ನಿಸಿದರು. ಉತ್ತರಿಸಿದ ಗೋವಿಂದರಾಜು, ನಾನಿಲ್ಲಿ ರಾಜಕಾರಣ ಮಾಡಲು ಬಂದಿಲ್ಲ. ನಾನು ವಿಧಾನ ಪರಿಷತ್ ಸದಸ್ಯ, ನನಗೆ ಮರ್ಯಾದೆ ಕೊಡದಿದ್ದರೂ ಚಿಂತೆ ಇಲ್ಲ, ನನ್ನ ಸ್ಥಾನ ಗೌರವಿಸಿ, ಸಾಮಾನ್ಯ ಸಭೆಗೆ ಎಂಎಲ್‌ಸಿ ಹಾಜರಾಗಬೇಕೆಂದೇನು ಇಲ್ಲ. ನಗರದ ಅಭಿವೃದ್ಧಿಗೆ ಅಗತ್ಯ ಸಂಪನ್ಮೂಲ ಒದಗಿಸಲು ಸ್ವ-ಇಚ್ಛೆಯಿಂದ ಬಂದಿದ್ದೇನೆ ಎಂದರು.

    ಮುಂದುವರಿದ ಹಳೇ ಚಾಳಿ:ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಶ್ರೀನಿವಾಸಗೌಡ ಸಭೆ ಹೇಗೆ ನಡೆಸಬೇಕು, ಸಭಾ ನಡಾವಳಿ ಹೇಗಿರಬೇಕು ಎಂದು ಸದಸ್ಯರಿಗೆ ಬುದ್ಧವಾದ ಹೇಳಿದ್ದರು. ಎರಡನೇ ದಿನದ ಅಂತರದಲ್ಲಿ ನಡೆದ ಸಭೆ ಮತ್ತೆ ಯಥಾಪ್ರಕಾರ ಸಭಾ ನಡಾವಳಿ ಗಾಳಿಗೆ ತೂರಿ ವಾಕ್‌ಪೌರುಷ ತೋರಿಸಿದರೆ ಮಹಿಳಾ ಸದಸ್ಯೆಯರ ಮಾತು ಗೌಣವಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts