More

    ಜನಪ್ರತಿನಿಧಿಗಳ ಮುಖವಾಡ ಧರಿಸಿ ಕೋಲಾರ ಆಸ್ಪತ್ರೆ ಕಟ್ಟಡ ಉದ್ಘಾಟನೆ

    ಕೋಲಾರ: ನಗರದ ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆಯಲ್ಲಿ ನಿರ್ಮಿಸಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆ ವಿಳಂಬ ಖಂಡಿಸಿ ರೈತ ಸಂಘದ ಮುಖಂಡರು ಜಿಲ್ಲೆಯ ಜನಪ್ರತಿನಿಧಿಗಳ ಮುಖವಾಡ ಧರಿಸಿ ಸೋಮವಾರ ವಿನೂತನ ಪ್ರತಿಭಟನೆಯೊಂದಿಗೆ ಕಟ್ಟಡವನ್ನು ಸಾಂಕೇತಿಕವಾಗಿ ಉದ್ಘಾಟಿಸಿದರು.

    ಆಸ್ಪತ್ರೆಯ ಮುಂದೆ ಅಣುಕು ಪ್ರದರ್ಶನ ನೀಡಿದರಲ್ಲದೆ, ನೂತನ ಕಟ್ಟಡಕ್ಕೆ ಗೋವನ್ನು ಪ್ರವೇಶಿಸುವ ಮೂಲಕ ಜನಪ್ರತಿನಿಧಿಗಳ ಬದಲು ತಾವೇ ಉದ್ಘಾಟನೆ ನೆರವೇರಿಸಿ ಗಮನ ಸೆಳೆದರಲ್ಲದೆ, ಫೆ.8ರಂದು ಅಧಿಕೃತವಾಗಿ ಆಸ್ಪತ್ರೆಗೆ ಚಾಲನೆ ನೀಡಬೇಕೆಂದು ಪಟ್ಟು ಹಿಡಿದರು.
    ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, 20 ಕೋಟಿ ರೂ. ವೆಚ್ಚದಲ್ಲಿ 100 ಹಾಸಿಗೆಗಳಿರುವ ಆಸ್ಪತ್ರೆ ನಿರ್ಮಿಸಿ 6 ತಿಂಗಳು ಕಳೆದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಜನಪ್ರತಿನಿಧಿಗಳ ನಡುವಿನ ಹಗ್ಗಜಗ್ಗಾಟದಿಂದ ರೋಗಿಗಳು ಪರದಾಡುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಆರೋಗ್ಯ ಸಚಿವ ಶ್ರೀರಾಮುಲು ಅವರಿಗೆ ತಿರುಪತಿಗೆ ಹೋಗಲು ಸಮಯವಿದೆ, ಕೋಲಾರ ಮಾರ್ಗವಾಗಿ ತಿರುಪತಿಗೆ ಹೋಗಿ ಬರುವ ವೇಳೆ ಕನಿಷ್ಠ ಸೌಜನ್ಯಕ್ಕೂ ಆಸ್ಪತ್ರೆಗೆ ಭೇಟಿ ನೀಡಲು ಸಮಯವಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಸಾಂಕೇತಿಕವಾಗಿ ಆಸ್ಪತ್ರೆ ಲೋಕಾರ್ಪಣೆ ಮಾಡುವುದಾಗಿ ಹೇಳಿದ್ದರಾದರೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಎ.ನಳಿನಿ ಮಾತನಾಡಿ, ಜನಪ್ರತಿನಿಧಿಗಳೇ ಅಭಿವೃದ್ಧಿ ಕಾಮಗಾರಿ ಉದ್ಘಾಟನೆ ಮಾಡಬೇಕೆಂದು ಸಂವಿಧಾನದಲ್ಲಿ ಬರೆದಿಲ್ಲ. ಜನರಿಗೆ ಅನುಕೂಲವಾಗುವ ಕಟ್ಟಡಗಳನ್ನು ಜಿಲ್ಲಾಧಿಕಾರಿ ಅಥವಾ ಸಂಬಂಧಪಟ್ಟ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಉದ್ಘಾಟನೆ ಮಾಡಬಹುದು. ಫೆ.8ರಂದು ಅಧಿಕೃತವಾಗಿ ಆಸ್ಪತ್ರೆಗೆ ಚಾಲನೆ ಸಿಗದಿದ್ದರೆ ಹೋರಾಟ ಮುಂದುವರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾ ವೈದ್ಯಾಧಿಕಾರಿ ಡಾ. ಎಸ್.ಜಿ.ನಾರಾಯಣಸ್ವಾಮಿ, ೆ.8ರಂದು ಕಟ್ಟಡ ಉದ್ಘಾಟನೆಯಾಗುವುದು ಖಚಿತ, ಜನಪ್ರತಿನಿಧಿಗಳಿಗೆ ಆಹ್ವಾನ ನೀಡಲಾಗಿದೆ. ಅವರು ಭಾಗವಹಿಸಲು ಸಾಧ್ಯವಾಗದಿದ್ದಲ್ಲಿ ಜಿಲ್ಲಾಧಿಕಾರಿಗಳಿಂದಲೇ ಕಟ್ಟಡ ಉದ್ಘಾಟನೆ ಮಾಡಿಸಲಾಗುವುದು ಎಂದು ಭರವಸೆ ನೀಡಿದರು.

    ಸಂಘದ ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್, ಮುಖಂಡರಾದ ಮಾಸ್ತಿ ವೆಂಕಟೇಶ್, ಮಂಗಸಂದ್ರ ವೆಂಕಟೇಶಪ್ಪ, ಅನುಶ್ರೀ, ತಿಮ್ಮಣ್ಣ, ನಾಗೇಶ್, ವಡ್ಡಹಳ್ಳಿ ಮಂಜುನಾಥ್, ಬೂದಿಕೊಟೆ ಹರೀಶ್, ಸಂಪಗಿರಾಮಯ್ಯ, ಆಂಜಿನಪ್ಪ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts