More

    ನಾಳೆ ನಡೆಯುವ ಫಲಪುಷ್ಪ ಪ್ರದರ್ಶನದಲ್ಲಿ ಸ್ತಬ್ಧ ಚಿತ್ರಗಳಿಗೆ ಜಿಲ್ಲೆಯ ಹೂವು, ತರಕಾರಿ

    ಕೋಲಾರ: ನಗರದ ಹಳೇ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿನ ಜಿಲ್ಲಾ ತೋಟಗಾರಿಕೆ ನರ್ಸರಿಯಲ್ಲಿ ಜ.26 ಮತ್ತು 27ರಂದು 2019-20ನೇ ಸಾಲಿನ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದ್ದು, ಸ್ತಬ್ಧ ಚಿತ್ರಗಳಿಗೆ ಜಿಲ್ಲೆಯ ಬೆಳೆಗಾರರೇ ಬೆಳೆದ ಗುಲಾಬಿ, ಸೇವಂತಿ ಹೂವು ಮತ್ತು ತರಕಾರಿಗಳನ್ನು ಬಳಸಲಾಗುತ್ತಿದೆ ಎಂದು ತೋಟಗಾರಿಕೆ ಉಪನಿರ್ದೇಶಕಿ ಎಂ.ಗಾಯತ್ರಿ ತಿಳಿಸಿದರು.

    ನಗರದ ಹಾರ್ಟಿ ಕ್ಲಿನಿಕ್ ಕಾರ್ಯಾಲಯದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಗುಲಾಬಿ, ಸೇವಂತಿ ಹೂವು ಮತ್ತು ತರಕಾರಿಗಳಿಂದ ಅಲಂಕರಿಸಿದ ವಿವಿಧ ಸ್ತಬ್ಧ ಚಿತ್ರಗಳ ಪ್ರದರ್ಶನವಾಗಿ ಕಮ್ಮಸಂದ್ರದ ಕೋಟಿಲಿಂಗ, ನಂದಿ, ವೀಣೆ, ಮಕ್ಕಳ ಆಕರ್ಷಣೆಯಾಗಿ ಚಿಟ್ಟೆ, ಮಿಕ್ಕಿ ಡೊನಾಲ್ಡ್, ಜಿಲ್ಲೆಯಲ್ಲಿ ಹೆಚ್ಚು ಬೆಲೆಯುವ ಟೊಮ್ಯಾಟೊ ಹಾಗೂ ಕ್ಯಾಪ್ಸಿಕಂನಿಂದ ತಯಾರಿಸಿದ ಮನೆ ವಿಶೇಷ ಆಕರ್ಷಣೆಗಳಾಗಿವೆ ಎಂದರು.

    ಜಿಲ್ಲೆಯ ಬೆಳೆಗಾರರು ಬೆಳೆದ ಸುಮಾರು 16,000 ಗುಲಾಬಿ ಹೂವುಗಳನ್ನು ಸ್ತಬ್ಧಚಿತ್ರಗಳಿಗೆ ಬಳಸಲಾಗುತ್ತಿದೆ. ವಿವಿಧ ಜಾತಿಯ 6000 ಹೂವಿನ ಕುಂಡ ಮತ್ತು ಅಲಂಕಾರಿಕ ಗಿಡಗಳ ಪ್ರದರ್ಶನವಿದೆ. ರಾಜ್ಯ ತೋಟಗಾರಿಕೆ ಪಿತಾಮಹ ಡಾ.ಎಂ.ಎಚ್.ಮರಿಗೌಡರ ಮರಳಿನ ಕಲಾಕೃತಿ ಪ್ರದರ್ಶನ, ಹಣ್ಣು ಮತ್ತು ತರಕಾರಿಗಳಲ್ಲಿ ವಿವಿಧ ಕಲಾಕೃತಿಗಳ ಕೆತ್ತನೆ ಇರುತ್ತದೆ ಎಂದರು.

    ಈ ವರ್ಷ ವಿಶೇಷವಾಗಿ ತೋಟಗಾರಿಕೆ ಬೆಳೆಗಳ ಸಸ್ಯ ಸಂತೆ ವ್ಯವಸ್ಥೆ ಮಾಡಲಾಗಿದ್ದು, ಮಾವು, ಸೀಬೆ, ಬೆಣ್ಣೆಹಣ್ಣು, ಬೆಟ್ಟದ ನೆಲ್ಲಿ, ನಿಂಬೆ, ಹಲಸು, ಅಲಂಕಾರಿಕ ಗಿಡಗಳು, ಕೈ ತೋಟಕ್ಕೆ ತರಕಾರಿ ಬೀಜದ ಕಿಟ್ ರಿಯಾಯಿತಿ ದರದಲ್ಲಿ ಮಾರಾಟದ ವ್ಯವಸ್ಥೆ ಇರುತ್ತದೆ. ಸುಮಾರು 150 ಔಷಧ ಮತ್ತು ಸುಗಂಧದ್ರವ್ಯ ಸಸಿಗಳ ಪ್ರಾತ್ಯಕ್ಷಿಕೆ, ಕುಂಡಗಳಲ್ಲಿ ತರಕಾರಿ ಬೇಸಾಯದ ಪ್ರಾತ್ಯಕ್ಷಿಕೆ, ಹಸಿರು ಮನೆಯಲ್ಲಿ ಇಂಗ್ಲಿಷ್ ಸೌತೆಕಾಯಿ ಬೆಳೆಯುವ ಕುರಿತು ರೈತರಿಗೆ ಮಾಹಿತಿ ನೀಡಲಾಗುವುದು ಎಂದರು.

    ಕೈತೋಟ ಮತ್ತು ತಾರಸಿ ತೋಟದ ಪ್ರಾತ್ಯಕ್ಷಿಕೆ, ತೋಟಗಾರಿಕೆ ಮತ್ತು ಇತರ ಇಲಾಖೆಗಳ ಮಳಿಗೆ, ಸಮಗ್ರ ಪೀಡೆ ನಿರ್ವಹಣೆ ಪ್ರಾತ್ಯಕ್ಷಿಕೆ, ಆಧುನಿಕ ಪದ್ಧತಿಯಲ್ಲಿ ಬೆಳೆಗಳ ಪ್ರಾತ್ಯಕ್ಷಿಕೆ, ಅಣಬೆ ಬೇಸಾಯ, ಜೇನು ಸಾಕಾಣಿಕೆ ಪ್ರಾತ್ಯಕ್ಷಿಕೆ, ಜಲಕೃಷಿ ಮಾದರಿ ಪ್ರದರ್ಶನ, ಬೆಳೆ ಹೊದಿಕೆ ಟನಲ್ ಪದ್ಧತಿಯಲ್ಲಿ ತೋಟಗಾರಿಕೆ ಬೆಳೆ ಬೆಳೆಯುವ ಕುರಿತು ರೈತರಿಗೆ ಮಾಹಿತಿ ನೀಡಲಾಗುವುದು ಎಂದರು.
    ಜ. 25ರಂದು ಸಸ್ಯಕ್ಷೇತ್ರದಲ್ಲಿ ರಂಗೋಲಿ ಮತ್ತು ಚಿತ್ರಕಲಾ ಸ್ಪರ್ಧೆ ಆಯೋಜಿಸಲಾಗಿದೆ. ಜ.26ರಂದು ಬೆಳಗ್ಗೆ 11ಕ್ಕೆ ಫಲಪುಷ್ಪ ಪ್ರದರ್ಶನ ಉದ್ಘಾಟನೆ ನಡೆಯಲಿದೆ. ಎರಡು ದಿನಗಳ ಫಲಪುಷ್ಪ ಪ್ರದರ್ಶನದಲ್ಲಿ ರೈತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಯೋಜನ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts