More

    ಬ್ಯಾಟಿಂಗ್ ವೈಫಲ್ಯಕ್ಕೆ ತಪ್ಪಿದ ಟೆಸ್ಟ್ ವಿಶ್ವಕಪ್

    ಸೌಥಾಂಪ್ಟನ್: ಸರಿಯಾದ ಮನಸ್ಥಿತಿ ಹೊಂದಿರುವ ಸೂಕ್ತ ವ್ಯಕ್ತಿಗಳಿಂದ ತಂಡ ಮುನ್ನಡೆಯಬೇಕಿದೆ ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ. ಬುಧವಾರ ಮುಕ್ತಾಯಗೊಂಡ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು ಭಾರತ 8 ವಿಕೆಟ್‌ಗಳಿಂದ ಸೋಲನುಭವಿಸಿದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ, ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ ಹಿರಿಯ ಆಟಗಾರರ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು. ವಿಶ್ವ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳು ತಂಡದಲ್ಲಿದ್ದರೂ ಬ್ಯಾಟಿಂಗ್ ವಿಭಾಗದಲ್ಲಿ ಅನುಭವಿಸಿದ ವೈಫಲ್ಯವೇ ತಂಡದ ಸೋಲಿಗೆ ಪ್ರಮುಖ ಕಾರಣವಾಗಿದೆ. ತಂಡ ಅನುಭವಿಸುತ್ತಿರುವ ವೈಫಲ್ಯಗಳ ಬಗ್ಗೆ ಗಮನ ಹರಿಸಿದ್ದು, ಯಾವುದು ಬೇಕು, ಯಾವುದು ಬೇಡ ಎಂಬುದರ ಬಗ್ಗೆ ವಿಶ್ಲೇಷಿಸಬೇಕಿದೆ. ಇದಕ್ಕೆ ವರ್ಷಗಟ್ಟಲೆ ಸಮಯವೇನು ಬೇಕಿಲ್ಲ ಎಂದು ಹಿರಿಯರ ಆಟಗಾರರಿಗೆ ಖಡಕ್ ಎಚ್ಚರಿಕೆ ರವಾನಿಸಿದರು. ಏಕದಿನ ತಂಡದ ಆಟಗಾರರಿಗೆ ಸಾಕಷ್ಟು ಆತ್ಮವಿಶ್ವಾಸವಿದೆ. ಅದೇ ವಿಶ್ವಾಸ ಟೆಸ್ಟ್ ಕ್ರಿಕೆಟ್‌ಗೂ ಬೇಕಿದೆ ಎಂದು ತಿಳಿಸಿದರು. ತಂಡ ಸಂದಿಗ್ದ ಪರಿಸ್ಥಿತಿಯಲ್ಲಿದ್ದ ವೇಳೆ ಹಿರಿಯ ಆಟಗಾರರು ತಮ್ಮ ಅನುಭವ ಮೂಲಕ ಆಸರೆಯಾಗಬೇಕು ಎಂದು ಕೊಹ್ಲಿ ತಿಳಿಸಿದ್ದಾರೆ. ತಂಡದ ಭವಿಷ್ಯದ ದೃಷ್ಟಿಯಿಂದ ಕೆಲವೊಂದು ಕಠಿಣ ತೀರ್ಮಾನ ಕೈಗೊಳ್ಳುವುದು ಅನಿವಾರ್ಯವಾಗಬಹುದು. ಟೆಸ್ಟ್ ಕ್ರಿಕೆಟ್‌ನಲ್ಲಿ ಬ್ಯಾಟ್ಸ್‌ಮನ್‌ಗಳು ರನ್‌ಗಳಿಸಿದಷ್ಟು ಬೌಲರ್‌ಗಳಿಗೆ ಒತ್ತಡ ಕಡಿಮೆಯಾಗುತ್ತದೆ. ಬ್ಯಾಟ್ಸ್‌ಮನ್‌ಗಳು ಜವಾಬ್ದಾರಿಯುತವಾಗಿ ತಮ್ಮ ಕೆಲಸ ನಿರ್ವಹಿಸಬೇಕಾಗುತ್ತದೆ ಎಂದರು.

    * ಹನ್ನೊಂದರ ಬಳಗದ ಆಯ್ಕೆಗೆ ಸಮರ್ಥನೆ
    ಡಬ್ಲ್ಯುಟಿಸಿ ಫೈನಲ್ ಪಂದ್ಯಕ್ಕೆ ಆಯ್ಕೆಮಾಡಲಾಗಿದ್ದ ಹನ್ನೊಂದರ ಬಳಗವನ್ನು ವಿರಾಟ್ ಕೊಹ್ಲಿ ಸಮರ್ಥಿಸಿಕೊಂಡಿದ್ದಾರೆ. ಇಂಗ್ಲೆಂಡ್ ಪಿಚ್‌ಗಳು ವೇಗಿಗಳಿಗೆ ನೆರವಾಗುವ ಹಿನ್ನೆಲೆಯಲ್ಲಿ ನಾಲ್ವರು ವೇಗಿಗಳನ್ನು ಕಣಕ್ಕಿಳಿಸಬೇಕಿತ್ತು ಎಂಬ ವಾದಕ್ಕೆ ಉತ್ತರಿಸಿದ ಕೊಹ್ಲಿ, ಬೌಲಿಂಗ್ ಆಯ್ಕೆಯಲ್ಲಿ ಯಾವುದೇ ಲೋಪವಿರಲಿಲ್ಲ ಎಂದರು. ಇಬ್ಬರು ಸ್ಪಿನ್ನರ್‌ಗಳಾದ ಆರ್.ಅಶ್ವಿನ್, ರವೀಂದ್ರ ಜಡೇಜಾ, ಮೂವರು ವೇಗಿಗಳಾದ ಜಸ್‌ಪ್ರೀತ್ ಬುಮ್ರಾ, ಇಶಾಂತ್ ಶರ್ಮ ಹಾಗೂ ಮೊಹಮದ್ ಶಮಿಯನ್ನು ಕಣಕ್ಕಿಳಿಸಲಾಗಿತ್ತು. ಬೌಲಿಂಗ್ ವಿಭಾಗದಲ್ಲಿ ಯಾವುದೇ ತೊಂದರೆಯಾಗಿಲ್ಲ. ಬ್ಯಾಟಿಂಗ್ ವಿಭಾಗದಲ್ಲಿ ಮತ್ತಷ್ಟು ರನ್ ಕಲೆಹಾಕಬೇಕಿತ್ತು ಎಂದರು. ವಿವಿಧ ಸ್ಥಿತಿಯಲ್ಲಿ ಇದೇ ಬೌಲಿಂಗ್ ಸಂಯೋಜನೆಯಲ್ಲೇ ಹಲವು ಪಂದ್ಯಗಳನ್ನು ಗೆದ್ದಿದ್ದೇವೆ. ನಮ್ಮ ಬೌಲಿಂಗ್ ಅತ್ಯುತ್ತಮವಾಗಿತ್ತು ಎಂದರು.

    * ಕೈಕೊಟ್ಟ ಟೆಸ್ಟ್ ತಜ್ಞರು
    ಭಾರತ ಟೆಸ್ಟ್ ತಂಡದ ತಜ್ಞ ಬ್ಯಾಟ್ಸ್‌ಮನ್‌ಗಳಾದ ಚೇತೇಶ್ವರ ಪೂಜಾರ ಗಣನೀಯ ವೈಫಲ್ಯ ಅನುಭವಿಸಿದರು. ಪೂಜಾರ ಮೊದಲ ಇನಿಂಗ್ಸ್‌ನಲ್ಲಿ 54 ಎಸೆತಗಳಿಗೆ 8 ರನ್ ಬಾರಿಸಿದರು. ಅದರಲ್ಲೂ 35ನೇ ಎಸೆತದಲ್ಲಿ ಮೊದಲ ರನ್ ಗಳಿಸಿದರು. ಎರಡನೇ ಇನಿಂಗ್ಸ್‌ನಲ್ಲಿ 80 ಎಸೆಗಳಿಂದ 15 ರನ್‌ಗಳಿಸಲಷ್ಟೇ ಶಕ್ತರಾದರು. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಏಕೈಕ ಅರ್ಧಶತಕ ಸಿಡಿಸಲಷ್ಟೇ ಶಕ್ತರಾಗಿದ್ದರು. ಆಸ್ಟ್ರೇಲಿಯಾ ಪ್ರವಾಸದಲ್ಲಿ ಆಕ್ರಮಣಕಾರಿ ನಿರ್ವಹಣೆ ಮೂಲಕ ಗಮನಸೆಳೆದಿದ್ದ ರಿಷಭ್ ಪಂತ್ ಕೆಟ್ಟ ಹೊಡೆತಗಳಿಗೆ ಮುಂದಾಗಿ ಔಟಾದರು. ಅಜಿಂಕ್ಯ ರಹಾನೆ ಮೊದಲ ಇನಿಂಗ್ಸ್‌ನಲ್ಲಿ 117 ಎಸೆತಗಳಿಗೆ 49 ರನ್‌ಗಳಿಸಿದರೆ, ಎರಡನೇ ಇನಿಂಗ್ಸ್‌ನಲ್ಲಿ 40 ಎಸೆತಗಳಿಂದ 15 ರನ್ ಪೇರಿಸಿದ್ದರು.

    ‘ವಿಶ್ವದ ಅತ್ಯುತ್ತಮ ತಂಡವೊಂದು ಪ್ರಶಸ್ತಿ ಗೆದ್ದಿದೆ. ಪ್ರತಿಷ್ಠಿತ ಟ್ರೋಫಿಗಾಗಿ ಹಲವು ವರ್ಷಗಳಿಂದ ಕಾಯುತ್ತಿದ್ದ ತಂಡವೊಂದು ಈ ಪ್ರಶಸ್ತಿಗೆ ಅರ್ಹವಾಗಿದೆ. ದೊಡ್ಡ ಪ್ರಶಸ್ತಿಗಳು ಅಷ್ಟು ಸುಲಭವಾಗಿ ಒಲಿಯುವುದಿಲ್ಲ. ನ್ಯೂಜಿಲೆಂಡ್ ತಂಡದ ನಿರ್ವಹಣೆ ಅದ್ಭುತವಾಗಿತ್ತು’ – ರವಿಶಾಸ್ತ್ರಿ, ಟೀಮ್ ಇಂಡಿಯಾ ಕೋಚ್.

    * ಟಾಪ್ 5 ಬ್ಯಾಟ್ಸ್‌ಮನ್ಸ್
    ಹೆಸರು, ತಂಡ, ಪಂದ್ಯ, ರನ್
    ಮಾರ್ನಸ್ ಲಬುಶೇನ್, ಆಸ್ಟ್ರೇಲಿಯಾ, 13, 1676
    ಜೋ ರೂಟ್, ಇಂಗ್ಲೆಂಡ್, 20, 1660,
    ಸ್ಟೀವನ್ ಸ್ಮಿತ್, ಆಸ್ಟ್ರೇಲಿಯಾ, 13, 1341
    ಬೆನ್ ಸ್ಟೋಕ್ಸ್, ಇಂಗ್ಲೆಂಡ್, 17, 1334
    ಅಜಿಂಕ್ಯ ರಹಾನೆ, ಭಾರತ, 18, 1174

    * ಟಾಪ್ 5 ಬೌಲರ್‌ಗಳು
    ಹೆಸರು, ತಂಡ, ಪಂದ್ಯ, ವಿಕೆಟ್
    ಆರ್.ಅಶ್ವಿನ್, ಭಾರತ, 14, 71
    ಪ್ಯಾಟ್ ಕಮ್ಮಿನ್ಸ್, ಆಸ್ಟ್ರೇಲಿಯಾ, 14, 70
    ಸ್ಟುವರ್ಟ್ ಬ್ರಾಡ್, ಇಂಗ್ಲೆಂಡ್, 17, 69
    ಟಿಮ್ ಸೌಥಿ, ನ್ಯೂಜಿಲೆಂಡ್, 11, 56
    ನಾಥನ್ ಲ್ಯಾನ್, 14, 56

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts